ಕೆ.ಆರ್.ಪೇಟೆ: ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಆರೋಗ್ಯದ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗುತ್ತದೆ ಎಂದು ಶ್ರೀ ಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟ್ನ ಟ್ರಸ್ಟಿ ಗಂಜೀಗೆರೆ ಮಹೇಶ್ ಹೇಳಿದರು.
ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಹರಿಯಲ್ಲದಮ್ಮ ದೇವಸ್ಥಾನ ಸಮೀಪದ ಜ್ಞಾನ ದೇಗುಲ ಪ್ರೌಢಶಾಲೆ ಆವರಣದಲ್ಲಿ ಶ್ರೀ ಹರಿಯಾಲದಮ್ಮ ಬಾಯ್ಸ್ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಸಮಾಜ ಸೇವಕ ಆರ್ಟಿಒ ಮಲ್ಲಿಕಾರ್ಜುನ್ ಅವರ ಅನುಪಸ್ಥಿತಿಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
“ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿದೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಸ್ಪರ್ಧಾತ್ಮಕ ಮನೋಭಾವನೆ ಬೆಳೆದು, ಶಿಸ್ತು ಹಾಗೂ ನಿಯಮ ಪಾಲನೆಯ ಅರಿವು ಮೂಡುತ್ತದೆ. ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಸ್ಥೈರ್ಯವೂ ವೃದ್ಧಿಯಾಗುತ್ತದೆ,” ಎಂದು ಹೇಳಿದರು.
“ಇಂದಿನ ಒತ್ತಡದ ಜೀವನದಲ್ಲಿ ಕ್ರೀಡೆ ಮನಸ್ಸಿಗೆ ನೆಮ್ಮದಿ ನೀಡುವ ಜೊತೆಗೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸಲು ನೆರವಾಗುತ್ತದೆ. ಯುವಕರು ಹೆಚ್ಚು ಹೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು,” ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಕಾಮನಹಳ್ಳಿ ಮಂಜುನಾಥ್, ಶಂಕರೇಗೌಡ, ಸಂತೋಷ್ ಕುಮಾರ್, ಸೈಯದ್ ದಿಲೀಪ್ ಹಾಗೂ ಕ್ರೀಡಾ ಆಯೋಜಕರಾದ ವಾಸು, ಮುನಿರಾಜು, ಉಮೇಶ್, ಸೈಯದ್ ರಹಿಮ್, ಮೊಹಮ್ಮದ್ ಆಸಿಫ್, ಮೊಹಮ್ಮದ್ ಅನು ಸೇರಿದಂತೆ ಹಲವರು ಉಪಸ್ಥಿತರಿದ್ದರು.
