
ಅಧ್ಯಾಯ-1
ಶ್ಲೋಕ – 21
ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇs ಚ್ಯುತ ॥೨೧॥
ಅರ್ಜುನ ಉವಾಚ- ಅರ್ಜುನನು ನುಡಿದನು ಸೇನಯೋಃ ಉಭಯೋಃ ಮಧ್ಯೇ ರಥಮ್ ಸ್ಥಾಪಯ ಮೇ-
ಅಚ್ಯುತ- ‘ಅಳಿವಿರದ ಕೃಷ್ಣನೇ‘ ಎರಡು ಪಡೆಗಳ ನಡುವೆ ನನ್ನ ರಥವನ್ನು ನಿಲ್ಲಿಸು.
ಈ ಶ್ಲೋಕದಲ್ಲಿ ನಾವು ಸೂಕ್ಷ್ಮವಾಗಿ ಅರ್ಜುನನ ಅಹಂಕಾರದ ಧ್ವನಿಯನ್ನು ಗಮನಿಸಬೇಕು. ‘ಮೇ’ ಅಂದರೆ ‘ನನ್ನ’. ಅರ್ಜುನನ ರಥದ ಸಾರಥ್ಯವನ್ನು ಸ್ವಯಂ ಶ್ರೀಕೃಷ್ಣ ವಹಿಸಿದ್ದರೂ ಕೂಡಾ, ಇಲ್ಲಿ ಅಹಂಕಾರದಲ್ಲಿ ಆತ ಕೃಷ್ಣನನ್ನು ಸಾಮಾನ್ಯ ಸಾರಥಿಯಂತೆ ಮಾತನಾಡಿಸಿ, “ನನ್ನ ರಥವನ್ನು ಎರಡೂ ಸೈನ್ಯಗಳ ಮಧ್ಯದಲ್ಲಿ ನಿಲ್ಲಿಸು ಎಂದು ಆಜ್ಞೆ ಮಾಡುವ ಧ್ವನಿಯಲ್ಲಿ ಹೇಳುತ್ತಾನೆ. ಇಲ್ಲಿ ಅರ್ಜುನ ಶ್ರೀಕೃಷ್ಣನನ್ನು ಅಚ್ಯುತ ಎಂದು ಸಂಬೋಧಿಸುತ್ತಾನೆ.
ಅಚ್ಯುತ ಎಂದರೆ ಸ್ವಯಂ ಚ್ಯುತಿ ಇಲ್ಲದ, ಭಕ್ತರ ಚ್ಯುತಿಯನ್ನು ಹರಣ ಮಾಡುವ ಭಗವಂತ. ಬಾಹ್ಯವಾಗಿ ಅಹಂಕಾರ ತೋರಿದರೂ ಕೂಡಾ, ಅರ್ಜುನನ ಅಂತರಾತ್ಮ ಮಾತ್ರ ಎಚ್ಚರದಿಂದಿತ್ತು, ಆ ಅಂತರಾತ್ಮ ಆತನ ಬಾಯಲ್ಲಿ ಈ ನಾಮವನ್ನು ನುಡಿಸಿದೆ.
ಅಹಂಕಾರ ಎಂತಹ ಮಹಾತ್ಮರನ್ನೂ ಬಿಟ್ಟಿಲ್ಲ. ಒಮ್ಮೆ ನಮ್ಮ ಕೈಯಲ್ಲಿ ಬಲವಿದೆ ಎಂದು ತಿಳಿದಾಗ ನಾವು ಎಲ್ಲವನ್ನೂ ಮರೆತು ಅಹಂಕಾರದ ದಾಸರಾಗುತ್ತೇವೆ. ಈ ಅಹಂಕಾರ ನಮ್ಮನ್ನು ಅಧೋಗತಿಗೆ ತಳ್ಳುತ್ತದೆ. ಅರ್ಜುನ ಮಹಾಜ್ಞಾನಿ ಮತ್ತು ಶ್ರೀಕೃಷ್ಣನ ಭಕ್ತ. ತನ್ನ ಭಕ್ತ ಅಹಂಕಾರಕ್ಕೊಳಪಟ್ಟಾಗ, ಶ್ರೀಕೃಷ್ಣ ಯಾವ ರೀತಿ ಪ್ರತಿಕ್ರಿಯೆ ತೋರುತ್ತಾನೆ ಎನ್ನುವುದನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.