
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
“ದೇವರಿದ್ದಾನೆ ಎಂಬುದು ನಂಬಿಕೆ, ದೇವರಿಲ್ಲ ಎಂಬುದು ಸತ್ಯ…!”
ಸಭೆಗಳನ್ನು ಎಂತಹ ಚಿಕ್ಕಪುಟ್ಟ ಸಂಘಟನೆಯವರೇ ನಡೆಸಲಿ ಅವರ ಉದ್ದೇಶಗಳು ಪ್ರಗತಿಪರವಾಗಿದ್ದಲ್ಲಿ, ಬೇರೇನೂ ಕಾರಣಗಳಿಲ್ಲದಿದ್ದರೂ, ಸಮಾಜದ ಒಳಿತಿಗಾಗಿದ್ದರೆ ಅವರ ಉದ್ದೇಶವನ್ನು ಬೆಂಬಲಿಸಲಿಕ್ಕಾದರೂ ಆ ಸಭೆಗಳಿಗೆ ಹೋಗಬೇಕು. ನಮ್ಮ ಆಗಮನದಿಂದ ಅವರ ಆತ್ಮಸ್ಥೈರ್ಯ ಕೊಂಚ ಹೆಚ್ಚಾದರೂ ಆ ಮಟ್ಟಿಗೆ ಅದು ನಮ್ಮ ಅಳಿಲು ಸೇವೆಯಾಗುತ್ತದೆ. ತಲುಪುವ ಗುರಿಗಿಂತ ಸಾಗುವ ದಾರಿಯೇ ಮುಖ್ಯ ಎಂದು ನಂಬಿಕೊಂಡಿದ್ದವರು ತೇಜಸ್ವಿ.
“ಭದ್ರಾನದಿ ಹರಿದಂತೆಯೇ ಅದರ ದಂಡೆಯಲ್ಲಿ ಸ್ನೇಹಿತರೊಡಗೂಡಿ ಈ ಹಿಂದೆ ಮೈಲುಗಟ್ಟಲೇ ನಡೆದಿದ್ದೆವು. ಈ ಬಾರಿ ಹೇಮಾವತಿ ದಡದಲ್ಲೇ ನಡೆಯೋಣ. ದಾರಿಯುದ್ದಕ್ಕೂ ಫೋಟೋಗ್ರಫಿ ಮಾಡಿಕೊಂಡು ಆ ಫೋಟೋಗಳನ್ನೊಳಗೊಂಡ ಕಾಫಿ ಟೇಬಲ್ ಬುಕ್ವೊಂದನ್ನು ಪ್ರಕಟಿಸೋಣ” ಎಂದು ಹೇಳಿದ್ದು ಬರಿ ಯೋಚನೆಯಲ್ಲಿಯೇ ಮುಗಿದುಹೋಯ್ತು. 2011 ರಲ್ಲಿ ಮರಳು ಗಣಿಗಾರಿಕೆಯನ್ನು ವಿರೋಧಿಸಿ ಅದೇ ಹೇಮಾವತಿ ನದಿ ದಂಡೆಯಲ್ಲೇ `ಮರಳು ಯಾತ್ರೆ’ ಮಾಡಿದೆವು. ಆ ಸಂದರ್ಭದಲ್ಲಿ ನಮ್ಮೊಡನೆ ರಾಜ್ಯ ರೈತ ಸಂಘ, ರಾಜ್ಯ ವೈದ್ಯರ ಸಂಘ ಹಾಗೂ ಬೆಂಗಳೂರಿನ ಅವಿರತ ಸಂಸ್ಥೆಯವರೂ ಕೈಜೋಡಿಸಿದ್ದರು.
ತೇಜಸ್ವಿಯವರು ದೈನಂದಿನ ಕೆಲಸ ಮುಗಿಸಿ ರಾತ್ರಿ ನಿದ್ರೆಗೆ ಹೋಗುವಾಗ ಸ್ನಾನ ಮಾಡಿ, ಶುಭ್ರವಾಗಿ ಒಗೆದು ಇಸ್ತ್ರೀ ಮಾಡಿದ ಉಡುಪನ್ನು ಧರಿಸಿ ಮಲಗುತಿದ್ದುದು ಸೋಜಿಗವೆನಿಸುತ್ತದೆ. ಅಗತ್ಯ ಕೆಲಸಕ್ಕಾಗಿ ಮೂಡಿಗೆರೆಗೆ ಬರುವಾಗ ತೋಟದ ಕೆಲಸ ಕಾರ್ಯಗಳಿಗೆ ಧರಿಸುತ್ತಿದ್ದ ದಿನಬಳಕೆಯ ಧಿರಿಸನ್ನೇ ಹಾಕಿಕೊಂಡು ತಿರುಗಾಡುತಿದ್ದರು.
ಪಾದದ ಬಳಿ ಮಡಿಸಿದ್ದ ಅದೇ ಜೀನ್ಸ್ ಪ್ಯಾಂಟ್, ಅರ್ದ ಕೈನ ದೊಗಲೆ ಷರ್ಟ್, ಮಳೆಗಾಲವಾಗಿದ್ದರೆ ಮೇಲೊಂದು ಜರ್ಕಿನ್, ಸ್ಕೂಟರ್ನ ಕುತ್ತಿಗೆಗೆ ಜೋಳಿಗೆಯಾಗಿ ಹತ್ತಿಯ ಬ್ಯಾಗ್. ಅಚ್ಚುಕಟ್ಟುತನ, ಸ್ವಚ್ಚತೆ ಕೇವಲ ಇತರರಿಗೆ ಪ್ರದರ್ಶಿಸಲು ಮಾತ್ರವಲ್ಲ, ವೈಯಕ್ತಿಕವಾಗಿಯೂ ನೆಮ್ಮದಿ, ಆತ್ಮವಿಶ್ವಾಸಕ್ಕಾಗಿ ಎಂಬುದು ಅವರ ಅಭಿಪ್ರಾಯವಾಗಿತ್ತು.
ನಮ್ಮೆಲ್ಲರಿಗೂ ಇರುವ `ದೇವರಿದ್ದಾನಾ?’ ಎಂಬ ಪ್ರಶ್ನೆಗೆ ತಾತ್ವಿಕವಾಗಿ ಉತ್ತರಿಸುತಿದ್ದ ತೇಜಸ್ವಿ “ದೇವರಿದ್ದಾನೆ ಎಂದು ತಿಳಿದಾಗ ಎಷ್ಟು ವಿಸ್ಮಯವಾಗುವುದೋ, ದೇವರಿಲ್ಲ ಎಂದಾಗಲೂ ಪ್ರಪಂಚದ ವಿದ್ಯಮಾನಗಳೆಲ್ಲ ಇನ್ನೂ ನಿಗೂಢವಾಗಿ ಕಾಣುತ್ತವೆ.” ಎಂದು ನಮ್ಮನ್ನು ಚಿಂತನೆಗೆ ಹಚ್ಚುತ್ತಾರೆ.
ಕಣ್ಣನ್ರವರ ಮೇಲಿನ ವಿಶ್ವಾಸದಿಂದ ಹಿರೇಮಗಳೂರಿಗೆ ಭೇಟಿ ನೀಡಿದ್ದ ತೇಜಸ್ವಿಯವರಿಗೆ ಕಣ್ಣನ್ ಹೀಗೇ ಮಾತನಾಡುತ್ತಾ “ನಿಮ್ಮ ಅಭಿಪ್ರಾಯದಂತೆ ದೇವರಿದ್ದಾನೋ ಇಲ್ಲವೋ ಹೇಳಿ” ಎಂದರು. ಸಾಕಷ್ಟು ಚರ್ಚೆಯ ನಂತರ ಕಣ್ಣನ್ ಹೇಳಿದ್ದು, “ದೇವರಿದ್ದಾನೆ ಎಂಬುದು ನಂಬಿಕೆ, ದೇವರಿಲ್ಲ ಎಂಬುದು ಸತ್ಯ!”
ತೇಜಸ್ವಿಯವರ ವ್ಯಕ್ತಿತ್ವ ಮತ್ತು ಸಾಹಿತ್ಯದ ಅಭಿಮಾನಿಯಾಗಿದ್ದ ಕಣ್ಣನ್ರವರು ತೇಜಸ್ವಿಯವರನ್ನು ಮಾತನಾಡಿಸಿಕೊಂಡು ಹೋಗಲೊಮ್ಮೆ ಬಂದಿದ್ದರು. “ಏನ್ರೀ ಕಣ್ಣನ್, ಮುಕುಳಿ ಹರಿದು ಹೋಗೋಹಾಗೆ ಮಂತ್ರ ಹೇಳಿ ಬಂದ್ರೇನ್ರೀ?” ಎಂದು ಪ್ರೀತಿಯಿಂದಲೇ ಛೇಡಿಸಿದರು ತೇಜಸ್ವಿ. ಆ ಕೀವರ್ಡ್ನಿಂದ ಪ್ರಾರಂಭವಾದ ಚರ್ಚೆ ಸುಮಾರು ಅರ್ಧಗಂಟೆ ನಡೆಯಿತು.
ಆತ್ಮ ವಿಮರ್ಶೆ ಇಲ್ಲದೆ ಯಾರೂ ಬೆಳೆಯಲಾರರು ಎನ್ನುತ್ತಾ ವ್ಯಕ್ತಿತ್ವ ವಿಕಸನದ ಅಗತ್ಯವನ್ನು ಸೂಚಿಸುತ್ತಾರೆ. ರಾಜಕಾರಣದ ಬಗ್ಗೆ ಮಾತನಾಡುತ್ತಾ ನಮಗಿರೋ ಒಂದೇ ಓಟಿನಲ್ಲಿ ಏನು ಸಾಧಿಸಲು ಸಾಧ್ಯವಿದೆಯೋ ಅದನ್ನು ಯೋಚಿಸಬೇಕು. ಮತದಾರರ ವಿವೇಚನೆಯಿಂದ ದೇಶದ ಭವಿಷ್ಯ ರೂಪುಗೊಳ್ಳುತ್ತದೆ ಎನ್ನುತ್ತಾರೆ.
“ಆಯಾ ಕ್ಷೇತ್ರದ ಪ್ರತಿಭಾವಂತರಿಗೆ ಆಯಾ ಕ್ಷೇತ್ರದ ಜ್ಞಾನವನ್ನು ಇತರರೊಡನೆ ಹಂಚಿಕೊಳ್ಳಬೇಕೆಂಬ ದೊಡ್ಡತನವಿಲ್ಲ. ಅವರ ತಲೆಯೆಲ್ಲ ಹೇಗಾದ್ರೂ ವೀಸಾಗಿಟ್ಟಿಸಿ ವಿದೇಶದಲ್ಲಿ ಪ್ರತಿಷ್ಠಾಪನೆಗೊಳ್ಳುವುದೇ ಆಗಿದೆ. ಕೆಲವರಿಗೆ ಅವರ ಕ್ಷೇತ್ರದ ಬಗ್ಗೆಯೇ ಆಸಕ್ತಿ ಇರುವುದಿಲ್ಲ.
ಶಾಲಾ ಕೊಠಡಿಗಿಂತ ಹೊರ ಜಗತ್ತಿನ ಬದುಕು ಕಲಿಸುವ ಪಾಠ ನಿಜವಾದುದ್ದು. ಆಸಕ್ತಿಯೊಂದು, ಓದುವುದೊಂದು, ಉದ್ಯೋಗ ಯಾವುದೋ. ಪರಿಸ್ಥಿತಿಯು ನಮ್ಮದಲ್ಲದ ಕ್ಷೇತ್ರಕ್ಕೆ ನಮ್ಮನ್ನು ಕರೆದೋಯ್ದು ತಪ್ಪಾದ ಸ್ಥಾನಕ್ಕೆ, ತಪ್ಪಾದ ವ್ಯಕ್ತಿಯನ್ನು, ತಪ್ಪಾದ ಸಮಯದಲ್ಲಿ, ತಪ್ಪಾದ ನಿರ್ಧಾರ ತೆಗೆದುಕೊಳ್ಳಲು, ಯಾರದ್ದೋ ಯಾವುದೋ ಕಾರಣದ ಗೈರುಹಾಜರಿಯಿಂದ ಉದ್ಭವವಾದ ಶೂನ್ಯತೆ ತುಂಬಲು ಪ್ರತಿಷ್ಠಾಪಿಸುವುದನ್ನು ನಾವು ಕಾಣುತಿದ್ದೇವೆ.
ಸಮಸ್ಯೆಯ ಪರಿಹಾರಕ್ಕಾಗಿ ರೂಪುಗೊಂಡ ಸಂಸ್ಥೆಗಳೇ ತಮ್ಮದೇ ಅಸ್ತಿತ್ವ ಉಳಿಸಿಕೊಳ್ಳಲು ಸಮಸ್ಯೆಗಳನ್ನು ಸೃಷ್ಟಿಸುತ್ತಾ ಇತ್ಯರ್ಥವಾಗದಂತೆ ಉಳಿಸಿಕೊಳ್ಳುವ ಕಂಪನಿಗಳಾಗಿ ಕಾರ್ಯನಿರ್ವಹಿಸುತ್ತಾ ಇರುವುದು ದುರಂತ. ಸ್ವಹಿತಾಸಕ್ತಿ ಕಾಯ್ದುಕೊಳ್ಳಲು ಕಳ್ಳರೇ ವಿಷಲ್ ಬ್ಲೋರ್ಸ್ ಗಳಾಗಿರುವುದನ್ನು ನೋಡಿಯೇ ತೇಜಸ್ವಿ “ನಗುವುದಿಂತಿಂಥದಕ್ಕೇ ಎಂದು ನಿಶ್ಚೆಯಿಸುವುದಿದೆ ನೋಡಿ ಬಹಳ ಕಷ್ಟದ ಕೆಲಸ” ಎಂದು ಬರೆದಿದ್ದಾರೆ.
ಸಾವಿರಾರು ವರ್ಷಗಳಿಂದ ಕೆಲವೇ ಜನರ ಸ್ವತ್ತಾಗಿದ್ದ ಜ್ಞಾನವು ಕೆಳಗೆ ಹರಿಯದಿದ್ದುದಕ್ಕೆ ವಿಷಾದಿಸಿದ್ದ ತೇಜಸ್ವಿ “ಜ್ಞಾನಕ್ಕೆ ನೀರಿನ ಗುಣವಿದೆ ಅದು ಸದಾ ಕೆಳಗೆ ಹರಿಯಲೇಬೇಕು. ತುಂಬಿ ಕಟ್ಟಿಡದಿದ್ದರೆ ಅದು ಸಹಜವಾಗಿಯೇ ಕೆಳಗೆ ಹರಿಯುತ್ತದೆ. ಜ್ಞಾನ ಕೆಳಗೆ ಹರಿಯದಂತೆ ತಡೆಹಿಡಿದ ಕೀರ್ತಿ ಪುರೋಹಿತಶಾಹಿಗಳದ್ದು” ಎಂಬುದಾಗಿ ಅಭಿಪ್ರಾಯ ಪಟ್ಟಿದ್ದಾರೆ. ಆಷಾಡಭೂತಿಗಳಾದ ಕೆಲ ಸಂಪ್ರದಾಯವಾದಿಗಳನ್ನು “ಈ ಹಾರುವರು………………..” ಎನ್ನುತ್ತಲೇ ಛೀಮಾರಿ ಹಾಕಿದ್ದ ತೇಜಸ್ವಿ ತಮ್ಮ “ಬ್ರಾಹ್ಮಣ ಯುವಕರಿಗೆ” ಎಂಬ ಕವನದಲ್ಲಿ ತುಸು ಖಾರವಾಗಿಯೇ ಬರೆದಿದ್ದಾರೆ.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946