
ನನ್ನ ಹೆಸರು ಸೌಂದರ್ಯ , ಇಬ್ಬರು ಮಕ್ಕಳ ಮುದ್ದಿನ ತಾಯಿ , ನನ್ನ ಗಂಡ ಕೃಷಿಕ , ದೇವರು ಕೊಟ್ಟಿದ್ದರಲ್ಲೇ ಖುಷಿಪಡುವ , ಹಾಸಿಗೆ ಇದ್ದಷ್ಟೇ ಕಾಲು ಚಾಚುವ ಮಣ್ಣಿನ ಪುತ್ರ , ರೈತನ ಹೆಂಡತಿ ನಾನು.
ನನ್ನ ಗಂಡನ ಮನೆಯಲ್ಲಿ ನನಗೆ ಏನು ಕೊರತೆ ಇಲ್ಲ , ಅಷ್ಟು ಚೆನ್ನಾಗಿ ನೋಡಿಕೊಂಡಿದ್ದಾರೆ ನನ್ನ ಮನೆಯವರು..
ಆದರೆ ಪ್ರತಿ ವರ್ಷ ಗೌರಿ-ಗಣೇಶ ಹಬ್ಬ ಬಂದರೆ ತವರು ನೆನಪಾಗುತ್ತದೆ , ಯಾವ ಹೆಣ್ಣಿಗೆ ನೆನಪಾಗುವುದಿಲ್ಲ ಹೇಳಿ , ಊರಿಂದ ಯಾರಾದರೂ ಬಾಗಿನ ತರುತ್ತಾರೆ ಎಂದು ಹೊಸ್ತಿಲ ಬಳಿ ಕಾದು ಕುಳಿತಿರುತ್ತೇನೆ , ಅವರು ತರುತ್ತಿದ್ದ ಅರಿಶಿನ-ಕುಂಕುಮಕ್ಕೋಸ್ಕರ ಹಾತೊರೆಯುತ್ತಲೇ ಇದ್ದೇನೆ , ಅಪ್ಪನ ನಗುಮುಖಕೋಸ್ಕರ , ಅಮ್ಮನ ಪ್ರೀತಿಗೋಸ್ಕರ ಮುಂದಿನ ಜನ್ಮಕ್ಕೂ ಕಾಯುತ್ತೇನೆ.
ಆದರೆ ದೇವರು ತುಂಬಾ ಕ್ರೂರಿ, ಕೆಲವೊಂದನ್ನು ಕೊಟ್ಟು ಇನ್ನೊಂದರಲ್ಲಿ ಕೊರತೆ ಇಟ್ಟಿರುತ್ತಾನೆ. ಅದರಲ್ಲೂ ಹೆಣ್ಣಿಗೆ ಏನಾದರೂ ಒಂದು ನ್ಯೂನತೆ ಇಟ್ಟೆ ಇಟ್ಟಿರುತ್ತಾನೆ. ಏಕೆಂದರೆ ಹೆಣ್ಣಿಗೆ ಎಲ್ಲವನ್ನೂ ಕೊಟ್ಟುಬಿಟ್ಟರೆ ದೇವರನ್ನು ನೆನೆಯುವರು ಯಾರು ಎಂದು.
ಒಬ್ಬಳೇ ಮಗಳು ನಾನು , ಅಪ್ಪನ ಮುದ್ದಿನ ಪುತ್ರಿ ನಾನು, ತವರು ಮನೆಯಲ್ಲಿ ಗಂಡು ಮಗನಂತೆ ಬೆಳೆದಿದ್ದೆ , ಗಂಡು ಮಗನಂತೆ ಅನ್ನುವುದಕ್ಕಿಂತ ಅಪ್ಪ ‘ಗಂಡು’ ಎಂದೇ ಬೆಳೆಸಿದ್ದ ನನ್ನನ್ನು .
ಅಮ್ಮ ಯಾವಾಗಲೂ ಅಪ್ಪನನ್ನು ಬೈಯುತ್ತಿದ್ದಳು, ಹೀಗೆ ಬೆಳೆಸಿದರೆ ಮುಂದೆ ಅಳಿಯನಾಗುವವನು ನಿಮ್ಮನ್ನು ಬೈಯುವುದಿಲ್ಲ ನನ್ನನ್ನು ಬೈಯ್ಯುತ್ತಾರೆ , ಸ್ವಲ್ಪವೂ ಸಂಸ್ಕಾರ ಕಲಿಸಿಲ್ಲ ನಿನ್ನ ತಾಯಿ ಅಂತ ರೇಗುತಿದ್ದಳು..
ಹೊಲ-ಗದ್ದೆಯಲ್ಲಿ ಕೆಲಸ ಮಾಡುವಾಗ, ತೋಟದಲ್ಲಿ ಅಗೆಯುವಾಗ , ಬಾವಿಯಿಂದ ನೀರನ್ನು ಎತ್ತುವಾಗ , ಅಪ್ಪನ ಜೊತೆ ಯಾವಾಗಲೂ ಸದಾ ಇರುತ್ತಿದ್ದೆ . ಅಪ್ಪನೆಂದರೆ ನನಗೆ ಎಲ್ಲಿಲ್ಲದ ಅಕ್ಕರೆ, ಅವನೇ ನನ್ನ ಮೊದಲ ಹೀರೋ ಹಾಗೂ ಕೊನೆಯವನೂ ಕೂಡಾ..
ನೋಡ ನೋಡುತ್ತಲೇ ದೊಡ್ಡವಳಾಗಿಬಿಟ್ಟಿದ್ದೆ , ಪುಟ್ಟ ಹುಡುಗಿಯಾಗಿದ್ದ ನಾನು ಮೈನೆರೆದು ಹೆಣ್ಣಾಗಿದ್ದೆ , ನನ್ನ ಜೊತೆ ಅಪ್ಪ ಮೊದಲಿಗಿಂತ ಸಲುಗೆ ಕಡಿಮೆ ಮಾಡಿದ್ದ , ಆದರೆ ಪ್ರೀತಿಯಲ್ಲಿ ಎಂದೂ ಕೊರತೆ ಮಾಡಿರಲಿಲ್ಲ. ಹೆಣ್ಣಿಗೆ ಯೌವ್ವನ ದಾಟಿತೆಂದರೆ ತವರು ಮನೆಯ ಋಣ ತೀರುತ್ತಾ ಬಂದಿತೆಂದು ಅರ್ಥ.
ಬಿ-ಎಸ್ಸಿ ಮುಗಿಸಿ , ಎರಡು ವರ್ಷ ಮನೆಯಲ್ಲಿಯೇ ಅಮ್ಮನಿಗೆ ಸಹಾಯ ಮಾಡಿಕೊಂಡು ಕಾಲ ಕಳೆದೆ. ಅಪ್ಪನಿಗೆ ಆಗಲೇ ಕಳವಳ ಶುರುವಾಗಿತ್ತು , ನನ್ನ ಮಗಳಿಗೆ ಎಂಥಹಾ ಗಂಡ ಸಿಗುತ್ತಾನೋ ಎಂದು, ಅಪ್ಪ ಅಮ್ಮ ಗುಸು-ಗುಸು ಮಾತನಾಡಿಕೊಳ್ಳುವುದನ್ನು ಕೇಳಿಸಿಕೊಂಡಿದ್ದೆ ನಾನು.
ನಮ್ಮ ನೆಂಟರಿಷ್ಟರಲ್ಲೇ ಒಬ್ಬ ಒಳ್ಳೆಯ ಹುಡುಗನನ್ನು ಗೊತ್ತು ಮಾಡಿದರು, ಮದುವೆಯೂ ನಿಶ್ಚಯವಾಗಿತ್ತು.
ಒಳ್ಳೆಯ ಅಳಿಯ ಸಿಕ್ಕಿದನೆಂದು ಮಗಳಿಗೆ ಅದ್ದೂರಿ ಮದುವೆ ಮಾಡಿ ಕೊಡುತ್ತೇನೆ ಎಂಬ ಖುಷಿಯಿಂದ ಓಡಾಡಿಕೊಂಡಿದ್ದ ಅಪ್ಪ , ಆದರೆ ಮದುವೆಯ ದಿನವೇ ಗೊತ್ತಾಗಿದ್ದು ನನಗೆ, ಅವನು ನನ್ನನ್ನು ಬಿಟ್ಟಿರಲು ಎಷ್ಟು ಕಷ್ಟ ಪಡುತ್ತಾನೆ ಎಂದು.
ಅಂದು ಚಿಕ್ಕ ಮಗುವಿನಂತೆ ಅಳುತ್ತಿದ್ದ, ಅಪ್ಪನನ್ನು ನೆನೆಸಿಕೊಂಡರೆ ಈಗಲೂ ನನಗೆ ಕರುಳು ಚಿವುಟಿದಂತಾಗುತ್ತದೆ , ಯಾವುದೋ ಜನ್ಮದಲ್ಲಿ ಅವನ ತಾಯಿಯಾಗಿದ್ದೆನೆನೋ ಎಂದೆನಿಸುತ್ತದೆ.
ಮದುವೆಯ ದಿನ , ನನ್ನನ್ನು ಸಮಾಧಾನ ಮಾಡುವುದಕ್ಕಿಂತ ಅಪ್ಪನನ್ನು ಸಮಾಧಾನ ಮಾಡುವುದೇ ಹರಸಾಹಸವಾಗಿತ್ತು ಎಲ್ಲರಿಗೂ. ನನ್ನ ಗಂಡ ಈಗಲೂ ಹೇಳುತ್ತಾರೆ , ಅಂತ ಮಾವನನ್ನು ಪಡೆದ ನಾನೇ ಧನ್ಯ ಎಂದು.
ಮದುವೆಯಾದ ನಂತರ ಪ್ರತಿ ವರ್ಷವೂ ಗೌರಿ-ಗಣೇಶ ಹಬ್ಬ ಬಂದಾಗ ನನ್ನನ್ನು ನೋಡಲು ಬಾಗಿನ ಹಿಡಿದು ಅಪ್ಪ ಅಮ್ಮ ತಪ್ಪದೇ ಬರುತ್ತಿದ್ದರು , ಈಗಿನ ಕಾಲದಂತೆ ಅದ್ದೂರಿ ಉಡುಗೊರೆ ತರದಿದ್ದರೂ (ಸಾವಿರ ಸಾವಿರ ದುಡ್ಡನ್ನು ಅಕೌಂಟಿಗೆ ಹಾಕದಿದ್ದರೂ, ನಿನಗೆ ಬೇಕಾಗಿದ್ದು ತೆಗೆದುಕೋ ಎಂದು ಹೇಳದಿದ್ದರೂ, ಇದರಲ್ಲಿ ಪ್ರೀತಿ ಎಲ್ಲಿಂದ ಬಂತು ಬಿಡಿ, ನಮ್ಮ ಕಾಲದ ಬಾಗಿನಕ್ಕೆ ಇವು ಯಾವುದು ಸರಿಸಾಟಿ ಇಲ್ಲ) ಅವರು ತರುತ್ತಿದ್ದ ಮಲ್ಲಿಗೆ ಹೂವು , ಹಣ್ಣು , ಅರಿಶಿಣ ಕುಂಕುಮ,ಒಂದು ಚಿಕ್ಕ ರವಕೆ ಪೀಸ್ ನನಗೆ ಬೆಲೆ ಕಟ್ಟಲಾಗದ ಆಸ್ತಿಗಳಾಗಿದ್ದವು.
ಆದರೆ ಇಂದಿಗೆ ಅಪ್ಪ-ಅಮ್ಮ ತೀರಿಕೊಂಡು ನಾಲ್ಕು ವರ್ಷಗಳೇ ಕಳೆದಿವೆ , ತವರು ಮನೆಯಿಂದ ಯಾರು ಬರುವುದಿಲ್ಲ , ಇದ್ದರಲ್ಲವೇ ಬರುವುದು.?
ಅಮ್ಮ ಚಿಕ್ಕಂದಿನಲ್ಲಿ ಹೇಳುತ್ತಿದ್ದ ಒಂದು ಕಹಿ-ಸತ್ಯ ಇಂದಿಗೂ ನನ್ನನ್ನು ಕಾಡುತ್ತಲೇ ಇದೆ , ನನಗೂ ಒಬ್ಬ ತಮ್ಮ ಹುಟ್ಟಿದ್ದನಂತೆ ಆದರೆ ಪ್ರಪಂಚವನ್ನು ನೋಡುವ ಮೊದಲೇ, ನನಗೆ ಬಾಗಿನ ತಂದು ಪ್ರೀತಿಯಿಂದ ಅಕ್ಕ ಎನ್ನುವ ಮೊದಲೇ, ದೇವರು ಅವನನ್ನು ಕಿತ್ತುಕೊಂಡು ಬಿಟ್ಟಿದ್ದನಂತೆ. ನನಗೂ ಆ ಅದೃಷ್ಟವಿರಲಿಲ್ಲ ಬಿಡಿ.
ತಮ್ಮ ಇದ್ದಿದ್ದರೆ ತವರೂ ಉಳಿಯುತ್ತಿತ್ತು, ಕರುಳ ಬಳ್ಳಿಯೂ ಬೆಳೆಯುತ್ತಿತ್ತು.
ಹೆಣ್ಣಿಗೆ ಏನೇ ಇದ್ದರೂ, ಶ್ರೀರಾಮಚಂದ್ರನಂತ ಗಂಡನಿದ್ದರೂ, ತಂದೆ ತಾಯಿಯಂತೆ ನೋಡಿಕೊಳ್ಳುವ ಅತ್ತೆ ಮಾವಂದಿರಿದ್ದರೂ, ಅದ್ಯಾವುದೋ ನೆಪದಲ್ಲಿ , ಮತ್ಯಾವುದೋ ನೆನಪಲ್ಲಿ ತವರ-ಮನೆ ಕಾಡುತ್ತಲೇ ಇರುತ್ತದೆ.
ಹೇಳದೆ ಕೇಳದೆ ಅಮ್ಮನ ಹಳೆಯ ಸೀರೆ ಉಡಬೇಕೆನಿಸುತ್ತದೆ, ಅವಳನ್ನು ತುಂಟುತನದಿಂದ ರೇಗಿಸಬೇಕಿನಿಸುತ್ತದೆ, ಅಪ್ಪನ ತೋಳಿನಲ್ಲಿ ಬೆಚ್ಚಗೆ ನಿದ್ರಿಸಬೇಕೆನಿಸುತ್ತದೆ , ಅವನನ್ನು ಅಗಾಧವಾಗಿ ಪ್ರೀತಿಸಬೇಕೆನಿಸುತ್ತದೆ, ಮತ್ತೊಮ್ಮೆ ಚಿಕ್ಕವಳಾಗಿ ಲಂಗ-ದಾವಣಿಗೆ ಮೆರುಗು ನೀಡಬೇಕೆನಿಸುತ್ತದೆ. ಗಂಡನ ಮನೆಯಲ್ಲಿ ಎಷ್ಟೇ ಶ್ರೀಮಂತರಿದ್ದರೂ ತವರು ಮನೆಯಿಂದ ತರುವ ಬಾಗಿನದ ಮುಂದೆ ಶ್ರೀಮಂತಿಕೆ ಬಡವನಾಗುತ್ತದೆ.
ಗಂಡನ ಮನೆಯ ಪ್ರೀತಿ ಮತ್ತು ಕಾಳಜಿ ಮದುವೆಯಾದ ನಂತರ ಹುಟ್ಟಿದರೆ , ತವರು ಮನೆಯದ್ದು ಹುಟ್ಟುತ್ತಲೇ ಚಿಗುರೊಡೆದಿರುತ್ತದೇ ಅಲ್ಲವೇ.. ಅದಕ್ಕೆ ಹೆಣ್ಣಿಗೆ ತವರೆಂದರೆ ತಾಯಿ ಸಮಾನ..!!
-ಇಂತಿ ಅಪರಿಚಿತ ಮೌನಿ