ಹಾಸನ, ಜೂ. 11: ನಗರದ ರೌಡಿಶೀಟರ್ ಅವಲಹಳ್ಳಿ ಮಂಜೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ 10 ಆರೋಪಿಗಳನ್ನು ಗುರುವಾರ ಹಾಸನ ಜಿಲ್ಲಾಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆತರಲಾಯಿತು.
ಹಾಸನ ಬಡಾವಣೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿರುವ ಈ ಬಹುಚರ್ಚಿತ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಆರೋಪಿಗಳನ್ನು ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಠಾಣೆಯಿಂದ ಜಿಲ್ಲಾಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಆಸ್ಪತ್ರೆ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡ ಬಳಿಕ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮ್ಮನ್ನು ಆರೋಪಿಗಳೆಂದು ಶಂಕಿಸಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ ನಾಲ್ವರು ಹಾಗೂ ತುಮಕೂರು ಮೂಲದ ಓರ್ವ ಸೇರಿದಂತೆ ಐವರು ಯುವಕರು ಸ್ವಯಂಪ್ರೇರಿತರಾಗಿ ಡಿವೈಎಸ್ಪಿ ಕಚೇರಿಗೆ ಹಾಜರಾಗಿದ್ದರು. ಕೊಲೆ ಪ್ರಕರಣದಲ್ಲಿ ತಮ್ಮ ಯಾವುದೇ ಪಾತ್ರ ಇಲ್ಲ ಎಂದು ಅವರು ಪೊಲೀಸರಿಗೆ ಸ್ಪಷ್ಟನೆ ನೀಡಿದ್ದರು.
ಗಮನಾರ್ಹವಾಗಿ, ಜೂನ್ 7ರ ರಾತ್ರಿ ಹಾಸನ ಜಿಲ್ಲಾ ನ್ಯಾಯಾಲಯದ ಸಮೀಪ ರೌಡಿಶೀಟರ್ ಅವಲಹಳ್ಳಿ ಮಂಜೇಶ್ (43) ಅವರನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಜನನಿಬಿಡ ಪ್ರದೇಶದಲ್ಲಿ ನಡೆದ ಈ ಕೃತ್ಯ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿತ್ತು.
ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ ಮಾಹಿತಿ ನೀಡಿದ್ದು, ಆರೋಪಿಗಳ ಬಂಧನ, ತನಿಖೆ ಹಾಗೂ ಹತ್ಯೆಯ ಹಿನ್ನೆಲೆ ಕುರಿತು ಸಮಗ್ರ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರೌಡಿಸಂ ಮತ್ತು ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಠಾಣೆಗೊಂದು ರೌಡಿ ಸ್ಕ್ವಾಡ್ ರಚಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
