ಹಾಸನ, ಜೂನ್ 13: ಕರ್ನಾಟಕ ರಾಜ್ಯ ಬರಹಗಾರರ ಸಂಘದ ವಿವಿಧ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲಾವಿದರು ಮತ್ತು ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದ ಸಾಧಕರಿಗೆ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿರುವ ಹಿನ್ನೆಲೆಯಲ್ಲಿ ಸಂಘದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯ ಬರಹಗಾರರ ಸಂಘದ ಹೂವಿನಹಡಗಲಿ ರಾಜ್ಯಮಟ್ಟದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಯ ರಂಗ-ಸಂಗೀತ ವಿಭಾಗದ ಹಾಸನ ಜಿಲ್ಲಾ ಸಂಚಾಲಕರು, ಕಲಾವಿದರು ಹಾಗೂ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಎ. ಹೆಚ್. ಗಣೇಶ್ ಅಂಕಪುರ ಅವರಿಗೆ ಕರ್ನಾಟಕ ಕಲಾ ರತ್ನ ಪ್ರಶಸ್ತಿ ಲಭಿಸಿದೆ.
ಅದೇ ರೀತಿ ಮೈಸೂರು ಜಿಲ್ಲಾ ಸಂಚಾಲಕರು, ನಿವೃತ್ತ ಲೆಕ್ಕ ಅಧೀಕ್ಷಕರು, ನಟರು ಹಾಗೂ ನಾಟಕ ರಚನಕಾರರಾದ ಎಸ್. ಎಸ್. ಪುಟೇಗೌಡ ಅವರಿಗೆ ಕರ್ನಾಟಕ ರಂಗಕಲಾ ರತ್ನ ಪ್ರಶಸ್ತಿ ಹಾಗೂ ಹೊಳೆನರಸೀಪುರ ತಾಲ್ಲೂಕು ಸಂಚಾಲಕರು, ಪ್ರಗತಿಪರ ರೈತರು ಮತ್ತು ಸಮಾಜ ಸೇವಕರಾದ ರಾಮೇನಹಳ್ಳಿ ಪುಟ್ಟಸ್ವಾಮಿಗೌಡ ಅವರಿಗೆ ನಾಡ ಕೀರ್ತಿ ಪ್ರಶಸ್ತಿ ಲಭಿಸಿದೆ.
ಬೆಂಗಳೂರು ಮೂಲದ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥೆಯು ಕಲೆ, ಸಾಹಿತ್ಯ, ರಂಗಭೂಮಿ ಹಾಗೂ ಸಮಾಜ ಸೇವಾ ಕ್ಷೇತ್ರಗಳಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಿದೆ.
ಪ್ರಶಸ್ತಿ ಪುರಸ್ಕೃತರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಕಲಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆ ನಾಡಿಗೆ ದೊರೆಯಲಿ ಎಂದು ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷ ಮಧು ನಾಯ್ಕ್ ಲಂಬಾಣಿ, ಗೌರವಾಧ್ಯಕ್ಷರಾದ ಗೊರೂರು ಅನಂತರಾಜು ಹಾಗೂ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಸಿ.ಆರ್. (ಚಿಕ್ಕಮಗಳೂರು) ಅವರು ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದ್ದಾರೆ.
