ಶುಭೋದಯ
ಯಾವಾಗ ಮೌನದಿಂದಿರಬೇಕು ಎಂಬುದನ್ನು ತಿಳಿಯದವನಿಗೆ
ಯಾವಾಗ ಮಾತನಾಡಬೇಕು ಎಂಬುದೂ ತಿಳಿಯುವುದಿಲ್ಲ.
—ಪ.ಸೈರಸ್.
*************************************************************
1.ಪಾಕಿಸ್ತಾನ: ಬಲೂಚಿಸ್ತಾನದಲ್ಲಿ ಭದ್ರತಾ ಪಡೆಗಳಿದ್ದ ಬಸ್ ಬಳಿ ಬಾಂಬ್ ಸ್ಫೋಟ, ಐವರು ಸಾವು
ಭದ್ರತಾ ಪಡೆಗಳಿದ್ದ ಬಸ್ ಬಳಿ ಬಾಂಬ್ ಸ್ಫೋಟಗೊಂಡಿರುವ ಪರಿಣಾಮ ಐವರು ಅಧಿಕಾರಿಗಳು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ನಡೆದಿದೆ. ಬಲೂಚಿಸ್ತಾನದ ನೌಷ್ಕಿ ಜಿಲ್ಲೆಯಲ್ಲಿ ಈ ದಾಳಿ ನಡೆದಿದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಜಾಫರ್ ಜಮಾನಾನಿ ತಿಳಿಸಿದ್ದಾರೆ. ಮೃತರು ಮತ್ತು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಬಲೂಚಿಸ್ತಾನದ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಈ ದಾಳಿಯನ್ನು ಖಂಡಿಸಿದ್ದಾರೆ.

*********************************************************************
2.ಮುಸಲ್ಮಾನರು ‘ಅಲ್ಲಾ’, ಮುಸ್ಲಿಂ ಮನಸ್ಥಿತಿ ಹೊಂದಿರುವ ಹಿಂದೂಗಳೇ ದೇಶಕ್ಕೆ ಗಂಡಾಂತರ: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: “ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ ವಿಚಾರವಾಗಿ ಬಿಜೆಪಿ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಛಲವಾದಿ ನಾರಾಯಣ ಸ್ವಾಮಿ, ಮುಸ್ಲಿಮರಿಂದ ದೇಶಕ್ಕೆ ಗಂಡಾಂತರವಿಲ್ಲ. ಆದರೆ ಮುಸ್ಲಿಂ ಮನಸ್ಥಿತಿ ಹೊಂದಿರುವ ಈ ಹಿಂದೂಗಳಿಂದ ದೇಶಕ್ಕೆ ಗಂಡಾಂತರ ಇದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

***********************************************************************
3.ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಿಲ್ಲ, ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಮುಂದುವರಿಯಲಿದ್ದಾರೆ: ತನ್ವೀರ್ ಸೇಠ್
ಮೈಸೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಿಲ್ಲ, ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ.ಶಿವಕುಮಾರ್ ಅವರೇ ಮುಂದುವರಿಯಲಿದ್ದಾರೆಂದು ಮಾಜಿ ಸಚಿವ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಅವರು ಶನಿವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಹುದ್ದೆ ಆಸೆ ಯಾರಿಗೆ ಇರುವುದಿಲ್ಲ ಹೇಳಿ. ನನಗೂ ಕೂಡ ಸಿಎಂ ಹುದ್ದೆ ಮೇಲೆ ಆಸೆ ಇದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಸಂಬಂಧ ಬದಲಾವಣೆ ಮಾಡೋವರೆಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಆ ಸ್ಥಾನದಲ್ಲಿಇರುವವರೆಗೆ ಅವರಿಗೆ ಗೌರವ ನೀಡಬೇಕು. ಬದಲಾವಣೆ ಆಗುತ್ತದೆ, ಆಗಲ್ಲ ಆ ಚರ್ಚೆ ಬಗ್ಗೆ ಏನು ಹೇಳಲ್ಲ. ನಮ್ಮ ವರಿಷ್ಠರು ಅಂತಿಮ ತೀರ್ಮಾನ ಮಾಡುತ್ತಾರೆಂದು ಹೇಳಿದರು.

********************************************************************
4.Cyber Fraud ರಾಜ್ಯದಲ್ಲಿ 2,900 ಕೋಟಿ ವಂಚನೆ; ಕಡಿವಾಣಕ್ಕೆ ಸರ್ಕಾರ ಬದ್ಧ
ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಸೈಬರ್ ಅಪರಾಧಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ. ಸಿಐಡಿ ಹಾಗೂ ಸೈಬರ್ ಕ್ರೈಮ್ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ವತಿಯಿಂದ ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಸೈಬರ್ ಅಪರಾಧ ಶೃಂಗಸಭೆ-2025 ಅನ್ನು ಪರಮೇಶ್ವರ್ ಉದ್ಘಾಟಿಸಿದರು. ವಿಧಾನಸಭಾ ಅಧಿವೇಶನದ ಎರಡು ವಾರಗಳಲ್ಲಿ ಸುಮಾರು 6ಕ್ಕಿಂತಲೂ ಹೆಚ್ಚಿನ ಪ್ರಶ್ನೆಗಳು ಸೈಬರ್ ಅಪರಾಧ ಕುರಿತಂತೆ ಕೇಳಿಬಂದಿವೆ. ಸರ್ಕಾರವು ಈ ಸಮಸ್ಯೆಯನ್ನು ಪರಿಹರಿಸಲು ಬದ್ಧವಾಗಿದೆ ಎಂದರು. 2024ರಲ್ಲಿ ದಾಖಲಾದ 20 ಸಾವಿರ ಪ್ರಕರಣಗಳಲ್ಲಿ ಕೇವಲ 1,248 ಪ್ರಕರಣಗಳು ಮಾತ್ರ ಪತ್ತೆಯಾಗಿದ್ದು, ಸೈಬರ್ ಅಪರಾಧಗಳಿಗೆ ಸುಮಾರು 2,900 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

**********************************************************************
5.ಕರ್ನಾಟಕದ ಎಲ್ಲಾ 31 ಜಿಲ್ಲೆಗಳಾದ್ಯಂತ ಸಾಹಸಯಾನ ಕೈಗೊಂಡ 25 ವರ್ಷದ ಅನನ್ಯಾ!
ವಿಜಯಪುರ: ಪ್ರವಾಸೋದ್ಯಮದ ದೃಷ್ಟಿಯೊಂದಿಗೆ ಸಾಹಸಯಾನದ ಗಮನಾರ್ಹ ಪ್ರಯಾಣದಲ್ಲಿ ಆರ್.ಅನನ್ಯಾ ಕರ್ನಾಟಕದಾದ್ಯಂತ ಎಲ್ಲಾ 31 ಜಿಲ್ಲೆಗಳಾದ್ಯಂತ ಮೂರು ತಿಂಗಳ ಮಹತ್ವಾಕಾಂಕ್ಷೆಯ ಸಾಹಸಯಾನ ಕೈಗೊಂಡಿದ್ದಾರೆ.
25 ವರ್ಷದ ಯುವತಿ ಪ್ರಧಾನವಾಗಿ ಸಾಹಸ ಪ್ರವಾಸೋದ್ಯಮ ತಾಣವಾಗಿ ರಾಜ್ಯದ ಸಾಮರ್ಥ್ಯವನ್ನು ಪ್ರದರ್ಶಿಸುವ ಉದ್ದೇಶ ಹೊಂದಿದ್ದಾರೆ. ಅಂತೆಯೇ ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರು ಏಕಾಂಗಿಯಾಗಿ ಪ್ರಯಾಣಿಸಬಹುದು ಎಂಬುದನ್ನು ತೋರಿಸಲು ಪ್ರಯತ್ನಿಸುತ್ತಿದ್ದಾರೆ.

`
