ಕೆ.ಆರ್.ಪೇಟೆ : 116ವರ್ಷಗಳ ಇತಿಹಾಸ ಹೊಂದಿರುವ ರಾಜ್ಯದಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳು(2600 ವಿದ್ಯಾರ್ಥಿಗಳು) ದಾಖಲಾಗಿರುವ ಸರ್ಕಾರಿ ಶಾಲೆ ಎಂಬ ದಾಖಲೆಯನ್ನು ಹೊಂದಿರುವ ಕೆ.ಆರ್.ಪೇಟೆ ಪಟ್ಟಣದ ಕೆಪಿಎಸ್ ಶಾಲೆಯ ಹೆಸರಿನಲ್ಲಿ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡಿ ಶಾಲೆಗೆ ಕೆಟ್ಟ ಹೆಸರು ತರಲು ಕೆಲವು ಕನ್ನಡಪರ ಸಂಘಟನೆಗಳು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿ ಕೆಪಿಎಸ್ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಚೇತನ್ ಕುಮಾರ್ ನೇತೃತ್ವದಲ್ಲಿ ಕೆಪಿಎಸ್ ಶಾಲೆಯಲ್ಲಿ ಸಭೆ ನಡೆಸಿ ಖಂಡನಾ ನಿರ್ಣಯ ಕೈಗೊಂಡರು. ದೇಣಿಗೆ ಸಂಗ್ರಹಿಸುತ್ತಿರುವ ಸಂಘಟನೆಗಳ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಿ, ಚಂದಾ ವಸೂಲಿಗೆ ತಡೆಯೊಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಕೆ.ಪಿ.ಎಸ್.ಶಾಲೆಯ ಆವರಣದಿಂದ ಪೊಲೀಸ್ ಠಾಣೆಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪೋಷಕರು ಶಾಲೆಯ ಹೆಸರಿನಲ್ಲಿ ದೇಣಿಗೆ ಸಂಗ್ರಹ ಮಾಡುವುದಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದರು.

ವಿಷಯ ತಿಳಿದು ಪಟ್ಟಣ ಠಾಣೆಯ ಪೋಲೀಸರು ಸಕಾಲಕ್ಕೆ ಸ್ಥಳಕ್ಕಾಗಮಿಸಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಹಾಗೂ ಕೆಪಿಎಸ್ ಶಾಲೆಯ ಪೋಷಕರನ್ನು ಸಮಾಧಾನ ಪಡಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವಲ್ಲಿ ಯಶಸ್ವಿಯಾದರು. ಈ ವೇಳೆ ದೇಣಿಗೆ ಸಂಗ್ರಹಕಾರರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.
ಈ ವೇಳೆ ಮಾತನಾಡಿದ ಕೆ.ಪಿ.ಎಸ್.ಶಾಲೆಯ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಸಿ.ಬಿ.ಚೇತನ್ಕುಮಾರ್ ಮಾತನಾಡಿ ಪಟ್ಟಣದಲ್ಲಿರುವ ಶತಮಾನ ಶಾಲೆಯ ಹೆಸರಿನಲ್ಲಿ ಕೆಲವು ಸಂಘಟನೆಗಳು ಸೇರಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡುತ್ತಿರುವುದು. ರಾಜ್ಯದ ನಂ.1 ಶಾಲೆ ಎಂದು ಹೆಸರು ಪಡೆದಿರುವ ನಮ್ಮ ಸರ್ಕಾರಿ ಶಾಲೆಗೆ ಅಪಮಾನ ಮಾಡುತ್ತಿರುವುದರಿಂದ ಶಾಲೆಯ ಘನತೆಗೆ ದಕ್ಕೆ ಉಂಟಾಗಿದೆ ಎಂದು ದೇಣಿಗೆ ಸಂಗ್ರಹಿಸುತ್ತಿರುವ ಕೆಲವು ಸಂಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂಘಟನೆಗಳ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪಟ್ಟಣದಲ್ಲಿ ದೇಣಿಗೆ ಸಂಗ್ರಹಿಸುತ್ತಿರುವ ಕೆಲವು ಸಂಘಟನೆಗಳ ಮುಖಂಡರುಗಳ ಮಕ್ಕಳು ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರ ಸಂಗ್ರಹಿಸಿರುವ ದೇಣಿಗೆ ಹಣ ನಮ್ಮ ಶಾಲೆಗೆ ಅವಶ್ಯಕತೆ ಇಲ್ಲ. ಅಂತಹ ಸಂದರ್ಭ ಬಂದರೆ ಶಾಲಾ ಅಭಿವೃದ್ಧಿ ಮಂಡಳಿಯವರು ಹಾಗೂ ಶಿಕ್ಷಕರು ಹಾಗೂ ಪೋಷಕರು ಸರ್ಕಾರಿ ಶಾಲೆ ಉಳಿಯಲು ನಾವೇ ಹಣವನ್ನು ನೀಡಿ ನಮ್ಮ ಶಾಲೆಯನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ ಎಂದು ತಿಳಿಸಿದರು.
ಈ ವೇಳೆ ಎಸ್.ಡಿ.ಎಂ.ಸಿ ಸಮಿತಿಯ ಸದಸ್ಯರಾದ ಲಕ್ಷ್ಮಿ ಕಾಂತ್, ಎನ್.ಜೆ.ಮಂಜು, ಲೋಕೇಶ್, ಮಮತ, ಕಾವ್ಯ, ವಾಜಿಯಾಭಾನು ಸೇರಿದಂತೆ ನೂರಾರು ಪೋಷಕರು ಭಾಗವಹಿಸಿ ಕೆ.ಪಿ.ಎಸ್ ಶಾಲೆಯ ಹೆಸರಿನಲ್ಲಿ ದೇಣಿಗೆ ಸಂಗ್ರಹ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
-ಶ್ರೀನಿವಾಸ್ ಆರ್.
