ಹಾಸನ, ಜೂನ್ 14: ಧರ್ಮಸ್ಥಳ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ ಬರುತ್ತಿದ್ದ ವೇಳೆ ಹಾಸನ ತಾಲೂಕಿನ ಗೊರೂರು ಸಮೀಪದ ಪ್ರಸಿದ್ಧ ಶೆಟ್ಟಿಹಳ್ಳಿ ಚರ್ಚ್ ಬಳಿ ಸಂಭವಿಸಿದ ದುರಂತದಲ್ಲಿ ಮೂವರು ಯುವಕರು ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಬೆಂಗಳೂರು ಮೂಲದ ಹತ್ತು ಮಂದಿ ಸ್ನೇಹಿತರ ತಂಡ ಧರ್ಮಸ್ಥಳಕ್ಕೆ ಪ್ರವಾಸ ಕೈಗೊಂಡಿದ್ದು, ವಾಪಸ್ ಬರುವಾಗ ಶೆಟ್ಟಿಹಳ್ಳಿ ಚರ್ಚ್ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಹಿನ್ನೀರಿನ ಪ್ರದೇಶದಲ್ಲಿ ಈಜಲು ಇಳಿದ ಚರಣ್ (20), ಮಿಲನ್ (23) ಹಾಗೂ ಮಣಿಕಂಠ (20) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮಾಹಿತಿಯ ಪ್ರಕಾರ, ಈಜು ಬಾರದಿದ್ದರೂ ಯುವಕರು ನೀರಿಗೆ ಇಳಿದಿದ್ದು, ಇದುವೇ ದುರಂತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಸ್ನೇಹಿತರು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗದೇ, ಮೂವರು ಅವರ ಕಣ್ಣೆದುರೇ ನೀರಿನಲ್ಲಿ ಮುಳುಗಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗೊರೂರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿದರು. ಪ್ರಕರಣ ಗೊರೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಮೃತರ ಕುಟುಂಬಸ್ಥರ ಆಕ್ರಂದನ ಹಾಗೂ ಸ್ನೇಹಿತರ ದುಃಖದ ವಾತಾವರಣ ಸ್ಥಳದಲ್ಲಿ ಮಡುಗಟ್ಟಿತ್ತು.
