ವಾಷಿಂಗ್ಟನ್: ಕೊರೊನಾ ವೈರಸ್ ಉಗಮದ ಕುರಿತು ಅಮೆರಿಕದ ರಾಜಕೀಯ ವಲಯದಲ್ಲಿ ಭಾರಿ ಬಾಂಬ್ ಸಿಡಿದಿದೆ. ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿಯಾಗಿದ್ದ ತುಳಸಿ ಗಬ್ಬಾರ್ಡ್ (Tulsi Gabbard) ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೊರಹೋಗುವ ಮುನ್ನ ಅಮೆರಿಕದ ಮಾಜಿ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಫೌಸಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಜಾಗತಿಕ ಸಾಂಕ್ರಾಮಿಕಕ್ಕೆ ಕಾರಣವಾದ ಚೀನಾದ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ನಡೆದ ಅಪಾಯಕಾರಿ ಸಂಶೋಧನೆಗೆ ಫೌಸಿ ಅವರು ಅಮೆರಿಕದ ತೆರಿಗೆದಾರರ ಹಣವನ್ನು ಒದಗಿಸಿದ್ದರು ಎಂದು ಗಬ್ಬಾರ್ಡ್ ರಹಸ್ಯ ದಾಖಲೆ ಸಮೇತ ಬಹಿರಂಗಪಡಿಸಿದ್ದಾರೆ.
ಗುಪ್ತಚರ ನಿರ್ದೇಶಕಿಯಾಗಿ ತಮ್ಮ ಕೊನೆಯ ಕೆಲಸದ ದಿನದಂದು ಗಬ್ಬಾರ್ಡ್ ಅವರು ಅಧಿಕೃತ ಇಲಾಖಾ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿರುವ ರಹಸ್ಯ ದಾಖಲೆಗಳು ಮತ್ತು ಪತ್ರವ್ಯವಹಾರಗಳ ಆಧಾರದ ಮೇಲೆ ಈ ಸ್ಫೋಟಕ ಮಾಹಿತಿ ನೀಡಿದ್ದಾರೆ.
‘ಗೇನ್ ಆಫ್ ಫಂಕ್ಷನ್’ ಸಂಶೋಧನೆಗೆ ಲಕ್ಷಾಂತರ ಡಾಲರ್ ನೆರವು
ಡಾ. ಫೌಸಿ ಮುಖ್ಯಸ್ಥರಾಗಿದ್ದ ಅಮೆರಿಕದ ‘ರಾಷ್ಟ್ರೀಯ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ಸಂಸ್ಥೆ’ (NIAID) ಮೂಲಕ ಚೀನಾದ ವುಹಾನ್ ಲ್ಯಾಬ್ನಲ್ಲಿ ಬಾವಲಿ ಹಾಗೂ ಕೊರೊನಾ ವೈರಸ್ಗಳ ಕುರಿತು ನಡೆಸಲಾಗುತ್ತಿದ್ದ ಅಪಾಯಕಾರಿ ‘ಗೇನ್ ಆಫ್ ಫಂಕ್ಷನ್’ (Gain of Function) ಸಂಶೋಧನೆಗೆ ಲಕ್ಷಾಂತರ ಅಮೆರಿಕನ್ ಡಾಲರ್ ಹಣವನ್ನು ನೀಡಲಾಗಿತ್ತು ಎಂದು ತುಳಸಿ ಗಬ್ಬಾರ್ಡ್ ತಿಳಿಸಿದ್ದಾರೆ.
ಏನಿದು ‘ಗೇನ್ ಆಫ್ ಫಂಕ್ಷನ್’ ಸಂಶೋಧನೆ? ಇದು ವಿಜ್ಞಾನಿಗಳು ಒಂದು ಜೀವಿಯ ಅಥವಾ ವೈರಸ್ನ ಜೈವಿಕ ಕಾರ್ಯಗಳನ್ನು, ಅದರ ರೋಗ ಹರಡುವ ಸಾಮರ್ಥ್ಯವನ್ನು ಕೃತಕವಾಗಿ ಹೆಚ್ಚಿಸಲು ತಳೀಯವಾಗಿ (Genetically) ಮಾರ್ಪಡಿಸುವ ಸಂಶೋಧನೆಯಾಗಿದೆ. ವುಹಾನ್ ಪ್ರಯೋಗಾಲಯದಲ್ಲಿ ನಡೆದ ಇಂತಹದೇ ಅಪಾಯಕಾರಿ ಪ್ರಯೋಗದ ಅಚಾತುರ್ಯದ ಸೋರಿಕೆಯಿಂದಲೇ ಕೋವಿಡ್ ಜಗತ್ತನ್ನು ಆವರಿಸಿತು ಎಂದು ನಂಬಲಾಗಿದೆ.
ಸತ್ಯ ಮುಚ್ಚಿಡಲು ಸುಳ್ಳು ಮತ್ತು ಮಾಹಿತಿ ದಾರರ ವಜಾ!
ತಾವು ಮಾಡಿದ ತಪ್ಪನ್ನು ಮುಚ್ಚಿಡಲು ಫೌಸಿ ಅವರು ಗುಪ್ತಚರ ಇಲಾಖೆಯೊಳಗಿನ ಕೆಲವು ರಾಜಕೀಯ ಪ್ರಭಾವಿ ಅಧಿಕಾರಿಗಳೊಂದಿಗೆ ಕೈಜೋಡಿಸಿದ್ದರು ಮತ್ತು ಅಮೆರಿಕದ ಸಂಸತ್ತಿಗೆ ಪ್ರಮಾಣವಚನ ಸ್ವೀಕರಿಸಿ ಸುಳ್ಳು ಹೇಳಿದ್ದರು ಎಂದು ಗಬ್ಬಾರ್ಡ್ ಆರೋಪಿಸಿದ್ದಾರೆ.
ಇಲಾಖೆಯ ಪತ್ರಿಕಾ ಪ್ರಕಟಣೆಯ ಪ್ರಕಾರ, ವುಹಾನ್ ಲ್ಯಾಬ್ ಸೋರಿಕೆಯ ಸತ್ಯವನ್ನು ಗುಪ್ತಚರ ಇಲಾಖೆಗೆ ತಿಳಿಸಲು ಮುಂದೆ ಬಂದ ಮಾಹಿತಿ ಸೋರಿಕೆದಾರರನ್ನು (Whistleblowers) ತಕ್ಷಣವೇ ಕೆಲಸದಿಂದ ವಜಾಗೊಳಿಸಲಾಗಿತ್ತು ಎಂಬ ಆಘಾತಕಾರಿ ಅಂಶವನ್ನೂ ಅವರು ಹೊರಹಾಕಿದ್ದಾರೆ.
ಚೀನಾದ ವೆಟ್ ಮಾರುಕಟ್ಟೆ ಕಥೆ ಸುಳ್ಳು: ಗಬ್ಬಾರ್ಡ್ ಟ್ವೀಟ್
“ಕೋವಿಡ್ ವೈರಸ್ ಚೀನಾದ ವೆಟ್ ಮಾರುಕಟ್ಟೆಯಿಂದ ಹರಡಿದೆ ಎಂದು ಈ ಮುಂಚೆ ವಿಜ್ಞಾನಿಗಳು ಬಿಂಬಿಸಿದ್ದರು. ಆದರೆ ಈಗ ಸತ್ಯ ಹೊರಬರುವ ಸಮಯ ಬಂದಿದೆ” ಎಂದು ಟ್ವೀಟ್ ಮಾಡಿರುವ ತುಳಸಿ ಗಬ್ಬಾರ್ಡ್, ಇದೊಂದು ಉದ್ದೇಶಪೂರ್ವಕ ಸಂಚು ಎಂದು ಬಿಂಬಿಸುವ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಈ ಹೊಸ ಬೆಳವಣಿಗೆಯು ಅಮೆರಿಕ ಹಾಗೂ ಚೀನಾ ನಡುವಿನ ರಾಜತಾಂತ್ರಿಕ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆಯಿದೆ.
