ಕೊರಟಗೆರೆ :- ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಮಹತ್ವದ ಹೆಜ್ಜೆ ಇಟ್ಟಿದ್ದು, ಮಹಿಳಾ ಸಬಲೀಕರಣ ಯೋಜನೆಯಡಿ ಬಡ ಮಹಿಳೆಯೊಬ್ಬರಿಗೆ ಉಚಿತ ಎಲೆಕ್ಟ್ರಿಕ್ ಆಟೋರಿಕ್ಷಾವನ್ನು ವಿತರಿಸಲಾಯಿತು.
ಕೊರಟಗೆರೆ ಪುರಸಭೆ ಕಾರ್ಯಾಲಯದ ಮುಂಭಾಗದಲ್ಲಿ ರೋಟರಿ ಕ್ಲಬ್ ಕೊರಟಗೆರೆ, ರೋಟರಿ ಮಹಾಲಕ್ಷ್ಮಿ ಬೆಂಗಳೂರು ಹಾಗೂ ರೋಟರಿ ಬೆಂಗಳೂರು ಉತ್ತರ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆಟೋರಿಕ್ಷಾ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಹಶೀಲ್ದಾರ್ ಮಂಜುನಾಥ್ ಕೆ., ಆರೋಗ್ಯ, ಶಿಕ್ಷಣ ಹಾಗೂ ಪರಿಸರ ಸಂರಕ್ಷಣೆಯ ಕ್ಷೇತ್ರಗಳಲ್ಲಿ ರೋಟರಿ ಸಂಸ್ಥೆ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾಗಿದ್ದು, ಸಮಾಜಮುಖಿ ಕಾರ್ಯಗಳಲ್ಲಿ ರೋಟರಿ ಮಾದರಿಯ ಸಂಸ್ಥೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕಿನ ದೇವರಹಳ್ಳಿ ಬೆಟ್ಟದಲ್ಲಿ 10 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಈ ಹಿಂದೆ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಚಾಲನೆ ನೀಡಿ ಯಶಸ್ವಿಗೊಳಿಸಿದ್ದರು. ಪರಿಸರ ಸಂರಕ್ಷಣೆಗೆ ಸಸಿ ನೆಡುವಂತಹ ಕಾರ್ಯಕ್ರಮಗಳಲ್ಲಿ ತಾಲ್ಲೂಕು ಆಡಳಿತದೊಂದಿಗೆ ಕೈಜೋಡಿಸುವಂತೆ ರೋಟರಿ ಮುಖ್ಯಸ್ಥರಿಗೆ ಅವರು ಮನವಿ ಮಾಡಿದರು.
ರೋಟರಿ ಜಿಲ್ಲಾ ಕಾರ್ಯದರ್ಶಿ ಉಮೇಶ್ ಮಾತನಾಡಿ, ರೋಟರಿ ಸಂಸ್ಥೆ ಪರಿಸರ, ಶಿಕ್ಷಣ ಹಾಗೂ ರೈತಾಪಿ ವರ್ಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪೋಲಿಯೋ ಲಸಿಕೆ ತಲುಪಿಸುವಲ್ಲಿ ರೋಟರಿ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಕಾನ್ಫರೆನ್ಸ್ ನಿರ್ದೇಶಕ ಬಿಳಿಗೆರೆ ಶಿವಕುಮಾರ್ ಮಾತನಾಡಿ, ರೋಟರಿ ಕ್ಲಬ್ ವತಿಯಿಂದ ಈಗಾಗಲೇ ಆರು ಆಟೋರಿಕ್ಷಾಗಳನ್ನು ವಿತರಿಸಲಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಸುಮಾರು 12 ಸಾವಿರ ಜನರಿಗೆ ಹೃದಯ ಶಸ್ತ್ರಚಿಕಿತ್ಸೆಗೆ ನೆರವು ನೀಡಲಾಗಿದೆ. ಜೂನ್ 28ರಂದು ನಡೆಯುವ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಪೋಷಕರು ಕಡ್ಡಾಯವಾಗಿ ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಉಮೇಶ್ ಕೆ.ಎಸ್., ರೋಟರಿ ಕ್ಲಬ್ ಅಧ್ಯಕ್ಷ ಎ.ಜಿ. ಮಂಜುನಾಥ್, ರೋಟರಿ ಸಿದ್ಧರಬೆಟ್ಟ ಅಧ್ಯಕ್ಷ ಬಾಲಾಜಿ ದರ್ಶನ್, ಜಂಟಿ ಕಾರ್ಯದರ್ಶಿ ಚೇತನ್ ದಾಸರಹಳ್ಳಿ, ಕಾರ್ಯದರ್ಶಿ ನರಸಿಂಮೂರ್ತಿ, ಉಮೇಶ್, ಹೊನ್ನೇಶ್, ಲಕ್ಷ್ಮಮ್ಮ, ಹನುಮಂತರಾಜು, ನಂದನ್, ನಾರಾಯಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಆರ್ಥಿಕ ಪರಿಸ್ಥಿತಿಯಿಂದ ಕುಟುಂಬದ ನಿರ್ವಹಣೆ ಕಷ್ಟಕರವಾಗಿತ್ತು. ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕೆಂದು ಅಂದುಕೊಂಡ ವೇಳೆ ರೋಟರಿ ಕ್ಲಬ್ ಎಲೆಕ್ಟ್ರಿಕ್ ಆಟೋರಿಕ್ಷಾ ನೀಡಿ ಸಹಕಾರಿಯಾಗಿದೆ. ರೋಟರಿ ಕ್ಲಬ್ನ ಎಲ್ಲಾ ಮುಖ್ಯಸ್ಥರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ.
ಶುಭ ಕೆ.ಎಸ್., ಆಟೋ ಚಾಲಕಿ ...
ಕೊರಟಗೆರೆ ರೋಟರಿ ಕ್ಲಬ್ ಪ್ರಾರಂಭವಾಗಿ ಎರಡು ವರ್ಷಗಳಾಗಿವೆ. ಮೂರು ರೋಟರಿ ಕ್ಲಬ್ಗಳ ಸಹಯೋಗದಲ್ಲಿ ಮಹಿಳಾ ಸಬಲೀಕರಣ ಯೋಜನೆಯಡಿ ಅಗ್ರಹಾರದ ಬಡ ಮಹಿಳೆಯೊಬ್ಬರಿಗೆ ಇಂದು ಎಲೆಕ್ಟ್ರಿಕ್ ಆಟೋರಿಕ್ಷಾವನ್ನು ವಿತರಿಸಲಾಗಿದೆ. ರೋಟರಿ ಸಂಸ್ಥೆಗೆ 120 ವರ್ಷಗಳ ಇತಿಹಾಸವಿದ್ದು, ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಮಂಜುನಾಥ್ ಅಗ್ರಹಾರ, ಅಧ್ಯಕ್ಷರು, ರೋಟರಿ ಕ್ಲಬ್ ಕೊರಟಗೆರೆ
– ಶ್ರೀನಿವಾಸ್ ಕೊರಟಗೆರೆ.
