ಬೆಂಗಳೂರು, ಜೂನ್ 18: ಪ್ರತಿ ವರ್ಗದ ಪ್ರೇಕ್ಷಕರ ಮನಗೆದ್ದ ಕಥೆಗಳ ಮೂಲಕ ಜನಪ್ರಿಯತೆ ಗಳಿಸಿರುವ ಜೀ ಕನ್ನಡ ವಾಹಿನಿ, ತನ್ನ ವಾರಾಂತ್ಯದ ಸಿನಿಮಾ ಮನರಂಜನೆಯನ್ನು ಮತ್ತಷ್ಟು ರಂಗೇರಿಸಲು ಸಜ್ಜಾಗಿದೆ. ಕನ್ನಡದ ಸೂಪರ್ಹಿಟ್ ‘ಲವ್ ಮಾಕ್ಟೇಲ್’ ಸರಣಿಯ ಬಹು ನಿರೀಕ್ಷಿತ ಅಂತಿಮ ಭಾಗವಾದ ‘ಲವ್ ಮಾಕ್ಟೇಲ್ 3’ ಚಿತ್ರದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಜೂನ್ 21ರಂದು ಸಂಜೆ 4.30ಕ್ಕೆ ಪ್ರಸಾರವಾಗಲಿದೆ.
‘ಲವ್ ಮಾಕ್ಟೇಲ್ 2’ ಚಿತ್ರದ ನಂತರ ತೆರೆಕಂಡಿರುವ ಈ ಚಿತ್ರವು ತಂದೆಯ ಪ್ರೀತಿ, ಕುಟುಂಬದ ಬಾಂಧವ್ಯ, ಜವಾಬ್ದಾರಿ ಮತ್ತು ಕೌಟುಂಬಿಕ ಮೌಲ್ಯಗಳನ್ನು ಭಾವನಾತ್ಮಕವಾಗಿ ಕಟ್ಟಿಕೊಡುವ ಕಥೆಯನ್ನು ಒಳಗೊಂಡಿದೆ. ರಕ್ತ ಸಂಬಂಧಕ್ಕಿಂತ ಪ್ರೀತಿ ಮತ್ತು ಕಾಳಜಿಯಿಂದ ಕಟ್ಟಿಕೊಳ್ಳುವ ಸಂಬಂಧಗಳ ಮಹತ್ವವನ್ನು ಚಿತ್ರ ಮನಮುಟ್ಟುವ ರೀತಿಯಲ್ಲಿ ತೆರೆದಿಡುತ್ತದೆ.
ನಿರ್ದೇಶಕ ಹಾಗೂ ನಟ ಡಾರ್ಲಿಂಗ್ ಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತಾ ಸುನಿಲ್, ರೇಚಲ್ ಡೇವಿಡ್, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್ ಹಾಗೂ ಶ್ವೇತಾ ಆರ್. ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರದ ಕಥೆಯಲ್ಲಿ ಆದಿತ್ಯ ಅಲಿಯಾಸ್ ಆದಿ (ಡಾರ್ಲಿಂಗ್ ಕೃಷ್ಣ) ದತ್ತು ಪಡೆದ ಮಗಳು ನಿಧಿಯನ್ನು ತನ್ನ ಸ್ವಂತ ಮಗಳಂತೆ ಪ್ರೀತಿಯಿಂದ ಸಾಕುತ್ತಿರುತ್ತಾನೆ. ಅಪ್ಪ-ಮಗಳ ಮಧುರ ಬಾಂಧವ್ಯ, ಸಣ್ಣ ಸಣ್ಣ ಸಂತೋಷಗಳು ಮತ್ತು ಸುಂದರ ನೆನಪುಗಳ ನಡುವೆ ಅವರ ಜೀವನ ಸಾಗುತ್ತಿರುತ್ತದೆ. ಕೇರ್ಟೇಕರ್ ಜಗ್ಗಾ ಮಮ್ಮಿ ಹಾಗೂ ಆತ್ಮೀಯ ಸ್ನೇಹಿತ ವಿಜಯ್ ಅವರ ಬೆಂಬಲ ಸದಾ ಇವರೊಂದಿಗಿರುತ್ತದೆ.
ಆದರೆ, ಡಾ. ಶಾಂತಾ ಅವರು ನಿಧಿ ತನ್ನ ಮೊಮ್ಮಗಳು ಎಂದು ಹೇಳಿಕೊಂಡು ಬಂದಾಗ, ಆದಿ ಮತ್ತು ನಿಧಿಯ ಬದುಕಿನಲ್ಲಿ ಅನಿರೀಕ್ಷಿತ ತಿರುವು ಉಂಟಾಗುತ್ತದೆ. ಅಲ್ಲಿಂದ ಆರಂಭವಾಗುವ ಕಾನೂನು ಹೋರಾಟ ಹಾಗೂ ಭಾವನಾತ್ಮಕ ಸಂಘರ್ಷ ಅವರ ಬದುಕನ್ನೇ ಬದಲಾಯಿಸುತ್ತದೆ. ಸವಾಲಿನ ಪರಿಸ್ಥಿತಿಗಳ ನಡುವೆ, ತಾನು ಪ್ರೀತಿಯಿಂದ ಕಟ್ಟಿಕೊಂಡಿರುವ ಕುಟುಂಬವನ್ನು ಉಳಿಸಿಕೊಳ್ಳಲು ಆದಿ ನಡೆಸುವ ಹೋರಾಟ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.
ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮಗಳು ನಿಧಿಯಿಂದ ದೂರವಾಗುವ ಪರಿಸ್ಥಿತಿಯನ್ನು ಆದಿ ಹೇಗೆ ಎದುರಿಸುತ್ತಾನೆ? ತನ್ನ ಕುಟುಂಬವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಪಡೆಯಲು ಜೂನ್ 21ರಂದು ಸಂಜೆ 4.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಲವ್ ಮಾಕ್ಟೇಲ್ 3’ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ವೀಕ್ಷಿಸಬಹುದು.
