ಹಾಸನ, ಜೂನ್ 22: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಹಾಸನ ಜಿಲ್ಲಾ ಯೋಗಾ ಸಂಸ್ಥೆ (ರಿ.) ವತಿಯಿಂದ 6ನೇ ವರ್ಷದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯನ್ನು ಜೂನ್ 27ರಂದು ನಗರದ ರವೀಂದ್ರನಗರದ ಎಂ.ಜಿ. ರಸ್ತೆಯಲ್ಲಿರುವ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪುರುಷರು ಮತ್ತು ಮಹಿಳೆಯರಿಗಾಗಿ ವಿವಿಧ ವಯೋಮಿತಿಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. 8 ರಿಂದ 12, 12 ರಿಂದ 15, 15 ರಿಂದ 17, 17 ರಿಂದ 20, 20 ರಿಂದ 30, 30 ರಿಂದ 40 ಹಾಗೂ 40 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.
ಸ್ಪರ್ಧೆಯಲ್ಲಿ ಬಿ.ಕೆ.ಎಸ್. ಐಯಂಗಾರ್ ಅವರ ‘ಯೋಗ ದೀಪಿಕ’ ಕೃತಿಯಲ್ಲಿರುವ ನಿಗದಿತ ಆಸನಗಳನ್ನು ಪ್ರದರ್ಶಿಸಬೇಕಿದ್ದು, ಲಾಟರಿ ಮೂಲಕ ಆಯ್ಕೆಯಾಗುವ ಮೂರು ಕಡ್ಡಾಯ ಆಸನಗಳ ಜೊತೆಗೆ ಸ್ಪರ್ಧಿಗಳು ತಮ್ಮ ಆಯ್ಕೆಯ ಎರಡು ಆಸನಗಳನ್ನು ಪ್ರದರ್ಶಿಸಬೇಕಿದೆ.
ತಂಡದ ಪ್ರವೇಶ ಶುಲ್ಕ ರೂ.900 ಹಾಗೂ ವೈಯಕ್ತಿಕ ಸ್ಪರ್ಧಿಗಳಿಗೆ ರೂ.200 ನಿಗದಿಪಡಿಸಲಾಗಿದೆ. ವಿಜೇತ ಮೊದಲ ಮೂರು ಸ್ಥಾನಗಳಿಗೆ ಪದಕ ಮತ್ತು ಪ್ರಶಸ್ತಿ ಪತ್ರ, ನಂತರದ ಮೂರು ಸ್ಥಾನಗಳಿಗೆ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ತಿಳಿಸಿದರು.
ಜೂನ್ 25 ಪ್ರವೇಶ ಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಜೂನ್ 27ರಂದು ಬೆಳಿಗ್ಗೆ 8 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಭಾಗವಹಿಸುವವರಿಗೆ ಉಪಹಾರದ ವ್ಯವಸ್ಥೆಯೂ ಇರಲಿದೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ಜೆ.ಐ. ನಿರಂಜನ್ ರಾಜ್ ಹಾಗೂ ಅಧ್ಯಕ್ಷ ಕೃಷ್ಣಪ್ಪ ಅವರನ್ನು ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಮನೋಹರ್, ನಾಗರಾಜು, ನಿರಂಜನ್ ರಾಜ್, ಭಾನುಮತಿ, ತಿಮ್ಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
