ಬೆಂಗಳೂರು, ಜೂ.23: ಹಿರಿಯ ನಾಗರಿಕರಿಗಾಗಿ ವಿಶ್ವದರ್ಜೆಯ ವಸತಿ ಮತ್ತು ಆರೈಕೆ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಪ್ರೈಮಸ್ ಸೀನಿಯರ್ ಲಿವಿಂಗ್ ಮತ್ತು ಗೋಪಾಲನ್ ಎಂಟರ್ಪ್ರೈಸಸ್ ಸಂಸ್ಥೆಗಳು ಜಂಟಿಯಾಗಿ ದಕ್ಷಿಣ ಬೆಂಗಳೂರಿನ ಕುಂಬಳಗೋಡು ಸಮೀಪದ ಮೈಸೂರು ರಸ್ತೆಯಲ್ಲಿರುವ ಗೋಪಾಲನ್ ಒಲಿಂಪಿಯಾ ಸ್ಪೋರ್ಟ್ಸ್ ಸಿಟಿಯಲ್ಲಿ ₹135 ಕೋಟಿ ವೆಚ್ಚದ ‘ಪ್ರೈಮಸ್ ಒಲಿಂಪಿಯಾ’ ಹಿರಿಯ ನಾಗರಿಕರ ವಸತಿ ಸಮುಚ್ಚಯಕ್ಕೆ ಚಾಲನೆ ನೀಡಿವೆ.
55 ವರ್ಷ ಮೇಲ್ಪಟ್ಟವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಯೋಜನೆಯಲ್ಲಿ 112 ಹಿರಿಯ ನಾಗರಿಕ ಸ್ನೇಹಿ 2 ಬಿಎಚ್ಕೆ ಮನೆಗಳಿದ್ದು, ಸುಮಾರು ಆರು ತಿಂಗಳೊಳಗೆ ಮನೆಗಳ ಹಸ್ತಾಂತರ ನಡೆಯುವ ನಿರೀಕ್ಷೆಯಿದೆ. 980 ರಿಂದ 1,030 ಚದರ ಅಡಿ ವಿಸ್ತೀರ್ಣದ ಮನೆಗಳ ಆರಂಭಿಕ ಬೆಲೆ ₹98 ಲಕ್ಷದಿಂದ ಆರಂಭವಾಗುತ್ತದೆ.
ಯೋಜನೆಯು 24/7 ವೈದ್ಯಕೀಯ ನೆರವು, ನರ್ಸಿಂಗ್ ಸೇವೆ, ಫಿಸಿಯೋಥೆರಪಿ, ಆರೋಗ್ಯ ತಪಾಸಣೆ, ಪೌಷ್ಟಿಕ ಆಹಾರ, ಹೌಸ್ಕೀಪಿಂಗ್, ಲಾಂಡ್ರಿ ಸೇರಿದಂತೆ ಸಮಗ್ರ ಆರೈಕೆ ಸೇವೆಗಳನ್ನು ಒದಗಿಸಲಿದೆ. ಜೊತೆಗೆ ಈಜುಕೊಳ, ಜಿಮ್, ಯೋಗ ಹಾಲ್, ಗ್ರಂಥಾಲಯ, ಮಿನಿ ಥಿಯೇಟರ್, ಕ್ರೀಡಾ ಸೌಲಭ್ಯಗಳು ಹಾಗೂ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಕ್ಲಬ್ಹೌಸ್ ಕೂಡ ಇರಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರೈಮಸ್ ಸೀನಿಯರ್ ಲಿವಿಂಗ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಆದರ್ಶ್ ನರಹರಿ, ಹಿರಿಯ ನಾಗರಿಕರ ಜೀವನಶೈಲಿಗೆ ಹೊಸ ಮಾನದಂಡ ರೂಪಿಸುವ ಯೋಜನೆ ಇದಾಗಿದ್ದು, ಸ್ವಾಸ್ಥ್ಯ, ಸೇವೆ ಮತ್ತು ಸಮುದಾಯ ಜೀವನವನ್ನು ಒಟ್ಟುಗೂಡಿಸುವ ಪರಿಸರ ವ್ಯವಸ್ಥೆಯಾಗಿದೆ ಎಂದು ತಿಳಿಸಿದರು.
ಗೋಪಾಲನ್ ಎಂಟರ್ಪ್ರೈಸಸ್ ನಿರ್ದೇಶಕ ಡಾ. ಪ್ರಭಾಕರ್, ಹಿರಿಯರು ಸ್ವತಂತ್ರ ಹಾಗೂ ಸಕ್ರಿಯ ಜೀವನ ನಡೆಸಲು ಅನುಕೂಲವಾಗುವ ಸಮಗ್ರ ವಸತಿ ಸಮುದಾಯ ನಿರ್ಮಿಸುವ ಗುರಿಯೊಂದಿಗೆ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದರು.
ಭಾರತದಲ್ಲಿ ಹಿರಿಯ ನಾಗರಿಕರ ವಸತಿ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಈ ಯೋಜನೆಯು, ತ್ವರಿತ ಹಸ್ತಾಂತರದ ಮೂಲಕ ಹಿರಿಯ ನಾಗರಿಕರು ಮತ್ತು ಅವರ ಕುಟುಂಬಗಳಿಗೆ ಹೊಸ ಆಯ್ಕೆಯನ್ನು ಒದಗಿಸಲಿದೆ.
