ಹಾಸನ : ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಯಾವುದೇ ಪ್ರಯತ್ನವನ್ನು ಸರ್ಕಾರ ತಕ್ಷಣ ಕೈಬಿಡಬೇಕು ಹಾಗೂ ರೈತರಿಗೆ ಗುಣಮಟ್ಟದ, ನಿರಂತರ ಮತ್ತು ಕೈಗೆಟುಕುವ ದರದಲ್ಲಿ ವಿದ್ಯುತ್ ಪೂರೈಕೆ ಖಚಿತಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಜಿಲ್ಲಾಡಳಿತ ಹಾಗೂ ವಿದ್ಯುತ್ ಇಲಾಖೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ರೈತ ಸಂಘದ ಪದಾಧಿಕಾರಿಗಳು, ವಿದ್ಯುತ್ ಕ್ಷೇತ್ರವು ಸಾರ್ವಜನಿಕ ಸೇವೆಯ ಪ್ರಮುಖ ಅಂಗವಾಗಿದ್ದು, ಇದನ್ನು ಖಾಸಗೀಕರಣಗೊಳಿಸಿದರೆ ರೈತರು, ಸಾಮಾನ್ಯ ಗ್ರಾಹಕರು ಹಾಗೂ ವಿದ್ಯುತ್ ಇಲಾಖೆಯ ನೌಕರರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಖಾಸಗಿ ಸಂಸ್ಥೆಗಳ ಲಾಭದ ಉದ್ದೇಶದಿಂದ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ಹೆಚ್ಚಿದ್ದು, ಇದರಿಂದ ಕೃಷಿ ಚಟುವಟಿಕೆಗಳ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಹೇಳಿದರು. ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಸಂಬಂಧ ಇತ್ತೀಚೆಗೆ ಸರ್ಕಾರ ಹೊರಡಿಸಿರುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದ ಅವರು, ಹೊಸ ಆದೇಶದ ಪರಿಣಾಮ ರೈತರಿಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂದು ತಿಳಿಸಿದರು. ಈ ಹಿಂದೆ ಜಾರಿಯಲ್ಲಿದ್ದ ವ್ಯವಸ್ಥೆಯಂತೆ ಟ್ರಾನ್ಸ್ಫಾರ್ಮರ್, ವಿದ್ಯುತ್ ಕಂಬ, ತಂತಿ ಸೇರಿದಂತೆ ಮೂಲಸೌಕರ್ಯಗಳ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ರೈತರು ಕೃಷಿ ಉತ್ಪಾದನೆಗಾಗಿ ಈಗಾಗಲೇ ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಇಂತಹ ಹೆಚ್ಚುವರಿ ವೆಚ್ಚಗಳನ್ನು ಭರಿಸುವುದು ಸಾಧ್ಯವಿಲ್ಲ ಎಂದರು.
ವಿದ್ಯುತ್ ಇಲಾಖೆಯ ನೌಕರರ ಹಿತಾಸಕ್ತಿಯನ್ನು ಕೂಡ ಸರ್ಕಾರ ಕಾಪಾಡಬೇಕು. ಖಾಸಗೀಕರಣದಿಂದ ನೌಕರರ ಉದ್ಯೋಗ ಭದ್ರತೆ ಹಾಗೂ ಸೇವಾ ಹಕ್ಕುಗಳಿಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರಾಜ್ಯದ ಕೃಷಿ ವಲಯದ ಅಭಿವೃದ್ಧಿಗೆ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆ ಅತ್ಯಗತ್ಯವಾಗಿದೆ. ಆದ್ದರಿಂದ ರೈತರ ಹಿತಾಸಕ್ತಿಗೆ ವಿರುದ್ಧವಾಗಿರುವ ಯಾವುದೇ ನೀತಿಗಳನ್ನು ಜಾರಿಗೆ ತರದೇ, ಕೃಷಿ ಸ್ನೇಹಿ ಕ್ರಮಗಳನ್ನು ಅನುಸರಿಸಬೇಕು ಎಂದು ಸಂಘದ ಮುಖಂಡರು ಮನವಿ ಮೂಲಕ ಸರ್ಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ವರಿಷ್ಠ ಕಣಗಾಲ್ ಮೂರ್ತಿ, ಭುವನೇಶ್, ಮಂಜು ಬಿಟ್ಟಗೌಡನಹಳ್ಳಿ, ಪಾಲಾಕ್ಷ, ಪಲ್ಲವಿ, ಶಿವರಾಜ್, ಶೇಷಣ್ಣ, ಪಾಪಣ್ಣ, ಉಮಾಪತಿ, ರಾಮೇಗೌಡ ಸೇರಿದಂತೆ ಸಂಘದ ಹಲವಾರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
