ಕೆ.ಆರ್.ಪೇಟೆ ವರದಿ: ದೇವಾಲಯಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳಾಗಿವೆ . ದೇವಾಲಯಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಬೆಂಗಳೂರು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

ಅವರು ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮಂಚಿಬೀಡು ಗ್ರಾಮದಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಪುನರುಜ್ಜೀವನಗೊಳಿಸಿದ ಈಶ್ವರ ಮತ್ತು ಬಸವೇಶ್ವರ ದೇವಾಲಯಗಳನ್ನು ಲೋಕಾರ್ಪಣೆಗೊಳಿಸಿ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ದೇವಾಲಯಗಳು ಶರಣ ಶ್ರದ್ಧಾ ಕೇಂದ್ರಗಳಾಗಿದ್ದು, ಇಂದಿನ ಒತ್ತಡದ ಜೀವನದಲ್ಲಿ ಮಾನವರಾದ ನಾವು ದೇವರು ಮತ್ತು ಧರ್ಮದ ಮಾರ್ಗದಲ್ಲಿ ನಡೆದರೆ ಸಾಕು, ನಮ್ಮ ಮಾನಸಿಕ ಒತ್ತಡಗಳು ದೂರವಾಗಿ ಕೈ ಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದಾಗಿದೆ. ಆದ್ದರಿಂದ ಪ್ರತಿದಿನವೂ ಮುಂಜಾನೆ ಅರ್ಧ ಗಂಟೆ ಬಿಡುವು ಮಾಡಿಕೊಂಡು ದೇವಾಲಯಗಳಿಗೆ ಹೋಗಿ ಭಗವಂತನ ನಾಮ ಸ್ಮರಣೆ ಮಾಡಿದರೆ ಸಾಕು, ಮಾನಸಿಕ ನೆಮ್ಮದಿಯನ್ನು ಸುಲಭವಾಗಿ ಪಡೆದು ನಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡಬಹುದು ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ ಜೂಜಾಟ ಸೇರಿದಂತೆ ಮತ್ಯಾವುದೇ ಅಕ್ರಮ ಚಟುವಟಿಕೆಗಳ ಕೆಲಸಗಳನ್ನು ಯುವಜನರು ಮಾಡಬಾರದು.

ದೇವಾಲಯಗಳ ಪಾವಿತ್ರ್ಯತೆಯನ್ನು ಕಾಪಾಡುವ ದಿಕ್ಕಿನಲ್ಲಿ ಗ್ರಾಮದ ಜನರು ವಾರಕ್ಕೊಮ್ಮೆ, 15 ದಿನಸಗಳಿಗೊಮ್ಮೆ ಅಥವಾ ತಿಂಗಳಿಗೆ ಒಮ್ಮೆಯಾದರೂ ದೇವಾಲಯದಲ್ಲಿ ಸ್ವಚ್ಛತಾ ಕೆಲಸ ಕಾರ್ಯಗಳನ್ನು ಹಮ್ಮಿಕೊಂಡು ದೇವರ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಜನೆ, ಸಂಗೀತ ಮುಂತಾದ ಕಾರ್ಯಕ್ರಮಗಳನ್ನು ನಡೆಸಿ ಮಾನಸಿಕ ಒತ್ತಡಗಳಿಂದ ಮುಕ್ತರಾಗಬೇಕು ಎಂದು ನಿಶ್ಚಲಾನಂದನಾಥ ಸ್ವಾಮೀಜಿ ಕಿವಿಮಾತು ಹೇಳಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ತುಮಕೂರಿನ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವ ಸಿದ್ದೇಶ್ವರ ಸ್ವಾಮೀಜಿಗಳು ಆಶೀರ್ವಚನ ನೀಡಿ ಮಾತನಾಡಿ ನಮ್ಮ ಮನಸ್ಸಿನ ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸಬೇಕಾದರೆ ದೈವದ ಮಾರ್ಗದಲ್ಲಿ ಸಾಗುವುದು ಅನಿವಾರ್ಯವಾಗಿದೆ ಹನ್ನೆರಡನೇ ಶತಮಾನದಲ್ಲಿಯೇ ವಚನ ಕ್ರಾಂತಿ ನಡೆಸಿ ಕಾಯಕ ತತ್ವದ ಮಹತ್ವವನ್ನು ವಿಶ್ವಕ್ಕೆ ಸಾರಿದ ಜಗಜ್ಯೋತಿ ಅಣ್ಣ ಬಸವಣ್ಣನವರ ಜೀವನದ ಆದರ್ಶಗಳನ್ನು ನಾವು ಪಾಲಿಸಿದರೆ ಸಾಕು, ಜಾತಿ ಮತ ಪಂಥಗಳಿಂದ ಮುಕ್ತವಾದ ಸಮ ಸಮಾಜವನ್ನು ಸುಲಭವಾಗಿ ನಿರ್ಮಿಸಿ ಸಮಾಜದಲ್ಲಿ ಶಾಂತಿಯನ್ನು ಕಾಣಬಹುದಾಗಿದೆ ಎಂದು ಶ್ರೀಗಳು ಹೇಳಿದರು.
ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವ್ಯವಸ್ಥಾಪಕರಾದ ಡಿ.ಸುರೇಂದ್ರ ಕುಮಾರ್ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಧರ್ಮಸ್ಥಳ ಸುಕ್ಷೇತ್ರವು ಪ್ರಾಚ್ಯ ವಸ್ತು ಸಂಗ್ರಹಾಲಯ ಮತ್ತು ಪುರಾತತ್ವ ಇಲಾಖೆಯ ಸಹಯೋಗದಲ್ಲಿ ಶಿಥಿಲವಾಗಿರುವ ಪ್ರಾಚೀನ ದೇವಾಲಯಗಳನ್ನು ಪುನರುತ್ಥಾನ ಮಾಡಿಸಿ ಜೀರ್ಣೋದ್ಧಾರ ಮಾಡಿ ನಶಿಸಿ ನೇಪಥ್ಯಕ್ಕೆ ಸರಿದು ಹೋಗುತ್ತಿದ್ದ ದೇವಾಲಯಗಳನ್ನು ನಮ್ಮ ಮುಂದಿನ ತಲೆಮಾರಿಗೆ ಜೋಪಾನ ಮಾಡುವ ಕಾಯಕವನ್ನು ಶ್ರದ್ಧಾಭಕ್ತಿಯಿಂದ ಮಾಡುತ್ತಿದೆ ಗ್ರಾಮೀಣ ಜನರು ದೇವಾಲಯಗಳನ್ನು ಸ್ವಚ್ಛ ಮಾಡುವ ದೇವರನ್ನು ಪೂಜೆ ಮಾಡುವ ಕೆಲಸವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡು ಭಕ್ತಿಯ ಮಾರ್ಗದಲ್ಲಿ ಸಾಗಿ ಜೀವನದಲ್ಲಿ ಯಶಸ್ಸನ್ನು ಗಳಿಸಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹೆಚ್.ಟಿ.ಮಂಜು ಮಾತನಾಡಿ ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ ನಮ್ಮ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಇತಿಹಾಸದ ಮಹತ್ವವನ್ನು ನಾಡಿಗೆ ಸಾರುವ ದೇವಾಲಯಗಳ ಸಂರಕ್ಷಣೆಯು ನಮ್ಮೆಲ್ಲರ ಹೊಣೆಯಾಗಿದೆ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿರುವ ಈ ಸಂದರ್ಭದಲ್ಲಿ ದೇವಾಲಯಗಳಿಗಿಂತಲೂ ಹೆಚ್ಚಾಗಿದ್ದು ಮಕ್ಕಳ ಶೈಕ್ಷಣಿಕ ವಿಕಾಸಕ್ಕೆ ಕಾರಣವಾಗಿರುವ ಸರ್ಕಾರಿ ಶಾಲೆಗಳ ಬಲವರ್ಧನೆ ಮಾಡಿ ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ನಾಗರೀಕ ಸಮಾಜದ ಪ್ರತಿಯೊಬ್ಬರು ಮುಂದಾಗಬೇಕು ಎಂದು ಕೈಮುಗಿದು ಮನವಿ ಮಾಡಿದರಲ್ಲದೇ ಮಂಚಿಬೀಡು ಗ್ರಾಮಸ್ಥರು 11ನೇ ಶತಮಾನದಲ್ಲಿ ನಿರ್ಮಾಣವಾಗಿ ಶಿಥಿಲವಾಗಿ ನೆಲಕ್ಕೆ ಬೀಳುತ್ತಿದ್ದ ಈಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ಇಡೀ ನಾಗರಿಕ ಸಮಾಜವೇ ಮೆಚ್ಚುವ ಕೆಲಸ ಮಾಡಿ ಮಾದರಿಯಾಗಿದ್ದಾರೆ ಎಂದು ಅಭಿಮಾನದಿಂದ ಹೇಳಿದರು.
ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ನಿರ್ದೇಶಕ ನೇಮಿರಾಜ್, ರಾವಂದೂರು ಮುರುಗಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಮೋಕ್ಷ ಪತಿ ಮಹಾಸ್ವಾಮೀಜಿ, ಕಾಪನಹಳ್ಳಿ ಗವಿಮಠದ ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿ, ತೆಂಡೆಕೆರೆ ಬಾಳೆಹೊನ್ನೂರು ಶಾಖ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಬೇಬಿ ಬೆಟ್ಟದ ರಾಮಯೋಗೀಶ್ವರ ಮಠದ ಶ್ರೀ ಶಿವಬಸವ ಸ್ವಾಮೀಜಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಂಡ್ಯ ಶಾಖೆಯ ಶ್ರೀ ಸತ್ಕೀರ್ತಿನಾಥ ಸ್ವಾಮೀಜಿ ಸಮಾಜ ಸೇವಕರಾದ ಮಲ್ಲಿಕಾರ್ಜುನ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಶೀಳನೆರೆ ಅಂಬರೀಶ್, ಕೋಲಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಸಿ.ಜಗದೀಶ್, ಚೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಂಚಿಬೀಡು ಶ್ರೀ ಈಶ್ವರ ದೇವಸ್ಥಾನ ಸೇವಾ ಸಮಿತಿಯ ಆಡಳಿತ ಮಂಡಳಿ ಅಧ್ಯಕ್ಷ ಎಂ.ಪಿ.ದೊಡ್ಡತಮ್ಮಯ್ಯ ಉಪಾಧ್ಯಕ್ಷ ಎಂ.ಎಸ್. ಕೆಂಡಗಣ್ಣ, ಕಾರ್ಯದರ್ಶಿ ಎಂ.ಸಿ.ಬಸವಲಿಂಗಪ್ಪ, ಗೌರವಾಧ್ಯಕ್ಷ ಆರ್.ಎಸ್.ನಾರಾಯಣಗೌಡ, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಸುಜೇಂದ್ರಕುಮಾರ್, ಉದ್ಯಮಿಗಳಾದ ನಂದಿಪುರ ರಾಜೇಂದ್ರ, ನಿರಂಜನ, ಸಂಧ್ಯಾ ಸೋಮಶೇಖರ್, ಎಂ.ಆರ್.ಬಸವಲಿಂಗಸ್ವಾಮಿ, ಶಿಲ್ಪಿಗಳಾದ ಪ್ರವೀಣ್, ಜಯಕೀರ್ತಿ ಸೇರಿದಂತೆ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಾಡಿನ ಖ್ಯಾತ ವೀರಭದ್ರ ನೃತ್ಯಪಟು ಡಾ.ಕುಂದೂರು ಜಗದೀಶ್ ಅವರು ನೀಡಿದ ಆಕರ್ಷಕ ವೀರಗಾಸೆ ನೃತ್ಯ ಪ್ರದರ್ಶನವು ಸಾರ್ವಜನಿಕರ ಗಮನ ಸೆಳೆಯಿತು.
ಗ್ರಾಮಕ್ಕೆ ಆಗಮಿಸಿದ ಅತಿಥಿಗಳು ಹಾಗೂ ಹರಗುರು ಚರಮೂರ್ತಿಗಳನ್ನು ಜಾನಪದ ಕಲಾತಂಡಗಳ ವೈಭವದ ಮೆರವಣಿಗೆಯೊಂದಿಗೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿ ಕೊಳ್ಳಲಾಯಿತು.
– ಶ್ರೀನಿವಾಸ್ ಆರ್
