ಕೆ.ಆರ್.ಪೇಟೆ: 2028ರ ವಿಧಾನಸಭಾ ಚುನಾವಣೆಗೆ ಸಜ್ಜಾಗುವ ನಿಟ್ಟಿನಲ್ಲಿ ಭಾರತೀಯ ಚುನಾವಣಾ ಆಯೋಗ ಆರಂಭಿಸಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (S.I.R) ಕಾರ್ಯವನ್ನು ಯಶಸ್ವಿಗೊಳಿಸಲು ಕೆ.ಆರ್.ಪೇಟೆ ತಾಲ್ಲೂಕು ಬಿಜೆಪಿ ಕಾರ್ಯಕರ್ತರ ವಿಶೇಷ ಸಭೆ ಮಂಗಳವಾರ ಪಟ್ಟಣದ ಶ್ರೀ ನಂಜಮ್ಮ ಮುದ್ದೆಗೌಡ ಕಲ್ಯಾಣ ಮಂಟಪದಲ್ಲಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಅವರ ನೇತೃತ್ವದಲ್ಲಿ ನಡೆಯಿತು.
ಸಭೆ ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಪ್ರೀತಮ್ ಗೌಡ ಮಂಡ್ಯದ ಕೆ.ಆರ್.ಪೇಟೆಗೆ ಬಂದು ಯಾರೇ ಏನೇ ಹೇಳಲಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ನಮ್ಮ ಪಕ್ಷದ ಕನಿಷ್ಠ ಮೂರು ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ. ಹಾಗಾಗಿ ಯಾರ ಮಾತಿಗೂ ಹಾಗೂ ಗೊಂದಲಕ್ಕೂ ಕಿವಿ ಕೊಡಬೇಡಿ ಎಂದು ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ರವಾನಿಸಿದ ಅವರು ನಮ್ಮ ನಾಯಕ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು 2028ರ ಚುನಾವಣೆಗೆ ಮೊದಲು ಕೆ.ಆರ್.ಪೇಟೆ ಮೈತ್ರಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಅವರಿಗೆ ಬಿ.ಫಾರಂ ಕೊಟ್ಟ ನಂತರವೇ ಅವರು ಶಿಕಾರಿಪುರ ಬಿ.ಫಾರಂ ತೆಗೆದುಕೊಂಡು ಹೋಗಿ ಚುನಾವಣೆ ಮಾಡುತ್ತಾರೆ. ಅದರಲ್ಲಿ ಕೆ.ಆರ್.ಪೇಟೆ ಬಿಜೆಪಿ ಕಾರ್ಯಕರ್ತರಿಗೆ ಅನುಮಾನ ಬೇಡ.ಬಿಜೆಪಿ ಕಾರ್ಯಕರ್ತರು ಇದನ್ನು ಮೊದಲು ತಿಳಿದುಕೊಳ್ಳಿ, ನಮಗೆ ಈ ತಾಲ್ಲೂಕಿನ ಮಣ್ಣಿನ ಮಗ ಬಿ.ವೈ.ವಿಜಯೇಂದ್ರ ಮುಖ್ಯಮಂತ್ರಿ ಆಗುತ್ತಾರೆ. ಅದೇ ರೀತಿ ಈ ಕ್ಷೇತ್ರದ ಮತ್ತೊಬ್ಬ ಮಣ್ಣಿನ ಮಗ ಕೆ.ಸಿ.ನಾರಾಯಣಗೌಡ ಶಾಸಕರಾಗಿ ಸಚಿವರಾಗುತ್ತಾರೆ. ಹಾಗಾಗಿ ಮೊದಲು ನಮ್ಮ ಪಕ್ಷದ ಬೂತ್ ಕಾರ್ಯಕರ್ತರು ಮುಂಬರುವ ಗ್ರಾ.ಪಂ, ತಾ.ಪಂ ಚುನಾವಣೆಗೆ ಸಿದ್ಧರಾಗುವ ನಿಟ್ಟಿನಲ್ಲಿ ಸಂಘಟನೆಗೊಳ್ಳಿ ಎಂದು ಕರೆ ನೀಡಿದರು.
ಬಳಿಕ ಮಾತನಾಡಿದ ಮಾಜಿ ಸಚಿವ ಮಹೇಶ್ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಚುನಾವಣಾ ಆಯೋಗ ಆಗಸ್ಟ್ 20.ರಿಂದ ಚಾಲನೆ ನೀಡಿದೆ.ಅಕ್ಟೋಬರ್ 27ರವರೆಗೆ ಈ ಕಾರ್ಯ ನಡೆಯಲಿದೆ.ನಮ್ಮ ಬೂತ್ ಮಟ್ಟದ ಏಜೆಂಟ್ಗಳು (ಬಿ.ಎಲ್.ಎ -2) ಮನೆ ಮನೆಗೆ ತೆರಳಿ ಹೊಸ ಮತದಾರರ ಸೇರ್ಪಡೆ, ಸ್ಥಳಾಂತರಗೊಂಡವರ ಹೆಸರು ತೆಗೆಯುವುದು, ಮೃತಪಟ್ಟವರ ಹೆಸರು ಕೈಬಿಡುವುದು, ತಿದ್ದುಪಡಿ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು ಒಬ್ಬನೇ ವ್ಯಕ್ತಿ ಎರಡು ಕಡೆ ಮತದಾರರಾಗಿರುವುದು, ನಕಲಿ ಮತದಾರರನ್ನು ಪತ್ತೆ ಹಚ್ಚಿ ತೆಗೆಯಿಸಬೇಕು. ಕಾಂಗ್ರೆಸ್ ಪಕ್ಷ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದೆ. ಇದನ್ನು ಮನೆ ಮನೆಗೆ ತಲುಪಿಸಿ ಬಿಜೆಪಿ ಪರ ವಾತಾವರಣ ನಿರ್ಮಾಣ ಮಾಡಬೇಕು ಎಸ್ ಐ ಆರ್ ಮತದಾರರ ಪರಿಷ್ಕರಣೆ ಇದೇ ಮೊದಲಲ್ಲ. ಪ್ರತಿ 10 ವರ್ಷಕ್ಕೊಮ್ಮೆ ಎಸ್.ಐ.ಆರ್ ನಡೆಯುತ್ತದೆ. ಈ ಪ್ರಮುಖ ಹಾಗೂ ಅವಶ್ಯಕತೆ ಇರುವ ಎಸ್.ಐ.ಆರ್ ಉದ್ದೇಶ ಬಡವರು, ದಲಿತರಿಗೆ ಅನ್ಯಾಯ ಆಗದಿರಲಿ ಎಂಬುದಾಗಿದೆ. ಹಿಂದೆ ನಡೆದ ಎಸ್.ಐ.ಆರ್ ಬಗ್ಗೆ ಅನುಮಾನ ಇಲ್ಲದ ಕಾಂಗ್ರೆಸ್, ಈ ಬಾರಿ ಮಾತ್ರ ಎಸ್.ಐ.ಆರ್ ಬಗ್ಗೆ ಯಾಕೆ ಅನುಮಾನ ಪಡುತ್ತಿದೆ ಎಂದು ತಿಳಿದಿಲ್ಲ ಎಂದು ತೀವ್ರವಾಗಿ ಪ್ರಶ್ನಿಸಿದ ಅವರು ಆದರೆ ಅನುಮಾನ ಪಡುವ ಕಾಂಗ್ರೆಸ್ ಪಕ್ಷವೇ ನಿನ್ನೆ ಮೈಸೂರಿನಲ್ಲಿ ಅವರ ಪಕ್ಷದ ಕಾರ್ಯಕರ್ತರ ವಿಶೇಷ ಸಭೆ ನಡೆಸಿದೆ. ಯಾರಿಗೆ ಈ ಎಸ್.ಐ. ಆರ್ ಬಗ್ಗೆ ಅನುಮಾನ ಇದೆಯೋ ಅವರು ನಿಜಕ್ಕೂ ಕಾಂಗ್ರೆಸ್ ಪಕ್ಷದ ಬಿಎಲ್ಎ-2ಗಳಾಗಿ..ಕಳ್ಳ ಓಟು ಹಾಕಿಸುವ ಸಂಸ್ಕೃತಿ ಹೊಂದಿದ್ದಾರೆ. ಬಿಜೆಪಿಗೆ ಅಂತಹ ಸಂಸ್ಕೃತಿ ಇಲ್ಲ, ಅದು ಇದ್ದರೆ ಕಾಂಗ್ರೆಸ್ಗೆ ಮಾತ್ರ ಎಂದು ವಾಗ್ದಾಳಿ ನಡೆಸಿದರು.ಹಾಗಾಗಿ ನಾಳೆಯಿಂದಲೇ ಬಿಜೆಪಿ ಕಾರ್ಯಕರ್ತರು ಮೃತಪಟ್ಟವರ ಹಾಗೂ ಎರಡು ಕಡೆ ಇರುವ ಮತದಾರರ ಗುರುತಿನ ಚೀಟಿ ರದ್ದು ಮಾಡಿಸಬೇಕು ಎಂದು ಸೂಚಿಸಿದರು.
ಸಭೆಯ ನೇತೃತ್ವ ವಹಿಸಿ ಮಾತನಾಡಿದ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ನಾನು ರಾಜೀನಾಮೆ ಕೊಟ್ಟಿದ್ದು ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ. ನಾನು ಸ್ವಾರ್ಥಕ್ಕಾಗಿ,ಅಧಿಕಾರಕ್ಕಾಗಿ ರಾಜೀನಾಮೆ ಕೊಟ್ಟಿಲ್ಲ. ನಮ್ಮ ತಾಲ್ಲೂಕಿನ ಮಗ, ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ನನ್ನ ಕ್ಷೇತ್ರಕ್ಕೆ 1800 ಕೋಟಿ ರೂ. ಅನುದಾನ ಬಂದಿದೆ. ಕೆ.ಆರ್.ಪೇಟೆ ಇತಿಹಾಸದಲ್ಲಿ ಇಷ್ಟೊಂದು ಅನುದಾನ ಯಾವ ಕಾಲದಲ್ಲೂ ಬಂದಿಲ್ಲ ಎಂದು ಸ್ಪಷ್ಟಪಡಿಸಿ.ಹಾಗಾಗಿ ಎಲ್ಲರೂ ನಮ್ಮ ಅಧಿಕಾರ ಅವಧಿಯಲ್ಲಿ ನಮ್ಮ ಕಾರ್ಯಕರ್ತರು ಮಾಡಿದ ಕೆಲಸವನ್ನು ಬೂತ್ ಮಟ್ಟದ ಜನ ಸಾಮಾನ್ಯರಿಗೆ ಅರಿವು ಮೂಡಿಸಬೇಕು. ನಮ್ಮ ಸಾಧನೆಯನ್ನು ಮನೆ ಮನೆಗೆ ತಲುಪಿಸಿ ಎಂದರು.
ಬಿಜೆಪಿ ರಾಜ್ಯ ಸಂಯೋಜಕ ದತ್ತಾತ್ರೇಯ ಅವರು ಎಸ್.ಐ.ಆರ್ ಬಗ್ಗೆ ಸವಿಸ್ತಾರವಾಗಿ ಬಿಜೆಪಿಯ ಬೂತ್ ಕಾರ್ಯಕರ್ತರಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ಶರಣು ತಳ್ಳಿಕೇರಿ, ಬಿಜೆಪಿ ರಾಜ್ಯ ಸಂಯೋಜಕ ದತ್ತಾತ್ರೇಯ, ಅಶ್ವಿನಿಶಂಕರ್, ಸ್ವಾಮಿ ಮರಳಾಪುರ, ಈ.ಸಿ.ನಿಂಗರಾಜು, ಮಂಡ್ಯ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆನಂದ್, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ಪುರಸಭಾ ಸದಸ್ಯ ಬಾಸ್ ಸಂತೋಷ್ ಕುಮಾರ್, ಮನ್ಮುಲ್ ಮಾಜಿ ನಿರ್ದೇಶಕ ಕೆ.ಜಿ.ತಮಣ್ಣ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್ ಸೇರಿದಂತೆ ನೂರಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
