ತುಮಕೂರು, ಜೂನ್ 29: ಗಾಂಜಾ ಹಾಗೂ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ತುಮಕೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ತಲಾ ₹20 ಸಾವಿರ ದಂಡ ವಿಧಿಸಿದೆ.
2022ರ ಜೂನ್ 6ರಂದು ನಗರದ ಮರಳೂರು ದಿಣ್ಣೆಯ ಅಂಕಿತ ಶಾಲೆ ಸಮೀಪ ಟಾಟಾ ಸಫಾರಿ ವಾಹನದಲ್ಲಿ 10 ಕೆ.ಜಿ. 669 ಗ್ರಾಂ ಗಾಂಜಾ ಹಾಗೂ 4.05 ಗ್ರಾಂ ಎಂ.ಡಿ.ಎಂ.ಎ. (ಕ್ರಿಸ್ಟಲ್) ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವೇಳೆ ಸಿಇಎನ್ ಪೊಲೀಸರು ದಾಳಿ ನಡೆಸಿ ಅಸಾದುಲ್ಲಾ ಷರೀಫ್ ಮತ್ತು ಅಯೂಬ್ ಪಾಷಾ ಅವರನ್ನು ಬಂಧಿಸಿದ್ದರು. ಈ ಸಂಬಂಧ ಎನ್ಡಿಪಿಎಸ್ ಕಾಯ್ದೆ, 1985ರಡಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣವು ಸ್ಪೆಷಲ್ ಕೇಸ್ ನಂ. 468/2022 ಆಗಿ ತುಮಕೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿತ್ತು. ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಅರುಣಾ ವಾದ ಮಂಡಿಸಿ ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ. ಜಯಂತಕುಮಾರ್ ಅವರು 2026ರ ಜೂನ್ 25ರಂದು ತೀರ್ಪು ನೀಡಿ, ಆರೋಪಿಗಳಿಬ್ಬರಿಗೂ ಎನ್ಡಿಪಿಎಸ್ ಕಾಯ್ದೆಯ ಸಂಬಂಧಿತ ವಿಧಿಗಳಡಿ ತಲಾ ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹20,000 ದಂಡ ವಿಧಿಸಿದ್ದಾರೆ.
ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ ಆರು ತಿಂಗಳ ಕಠಿಣ ಜೈಲು ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.
