ತುಮಕೂರು, ಜುಲೈ 13:ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ ಮತದಾರರ ಪಟ್ಟಿಗೆ ಅಕ್ರಮವಾಗಿ ಮತದಾರರನ್ನು ಸೇರಿಸುವ ಯಾವುದೇ ಕೆಲಸ ಮಾಡಿಲ್ಲ. ಈ ಕುರಿತು ಬಿಜೆಪಿ ಮಾಡುತ್ತಿರುವ ಆರೋಪಗಳು ಕೇವಲ ಊಹಾಪೋಹಗಳಷ್ಟೇ ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ನಗರದ ಜಯನಗರ ಪೂರ್ವದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಎಸ್ಐಆರ್ (Special Intensive Revision) ಪ್ರಕ್ರಿಯೆಗೆ ಪೂರಕವಾಗಿ ಸ್ವಂತ ವೆಚ್ಚದಲ್ಲಿ ಆರಂಭಿಸಿರುವ ಹೆಲ್ಪ್ಲೈನ್ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಒಂದು ಮತದಾರರ ಪಟ್ಟಿಗೆ ಅಕ್ರಮವಾಗಿ ಹೆಸರು ಸೇರಿಸಲು ರೇಷನ್ ಕಾರ್ಡ್, ಪಾಸ್ಪೋರ್ಟ್, ಬ್ಯಾಂಕ್ ಪಾಸ್ಬುಕ್ ಸೇರಿದಂತೆ ಅಗತ್ಯ ದಾಖಲಾತಿಗಳು ಬೇಕಾಗುತ್ತವೆ. ಅಂತಹ ಯಾವುದೇ ಅಕ್ರಮವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಎಸ್ಐಆರ್ ಪ್ರಕ್ರಿಯೆ ಮೂಲಕ ಕಾಂಗ್ರೆಸ್ ಬೆಂಬಲಿಗರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಬಹುದು ಎಂಬ ಭ್ರಮೆಯಲ್ಲಿದ್ದ ಬಿಜೆಪಿಗೆ, ರಾಜ್ಯದಲ್ಲಿ ಎಸ್ಐಆರ್ ವ್ಯವಸ್ಥಿತವಾಗಿ ನಡೆಯುತ್ತಿರುವುದು ನಿರಾಸೆ ತಂದಿದೆ. ಅದರಿಂದಲೇ ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿದೆ. ಅವರ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.
ಚುನಾವಣಾ ಆಯೋಗ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಸ್ಐಆರ್ ಪ್ರಕ್ರಿಯೆಯನ್ನು ವಿರೋಧಿಸುವುದು ಸರಿಯಲ್ಲ. ಒಂದು ವೇಳೆ ಅಕ್ರಮವಾಗಿ ಮತದಾರರು ಸೇರ್ಪಡೆಯಾಗಿದ್ದಾರೆ ಎಂಬ ಅನುಮಾನವಿದ್ದರೆ, ದಾಖಲೆಗಳೊಂದಿಗೆ ಚುನಾವಣಾ ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಅದನ್ನು ಬಿಟ್ಟು ಗೊಂದಲ ಸೃಷ್ಟಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಮುನ್ನೆಚ್ಚರಿಕೆ ವಹಿಸಿದೆ. ಅದಕ್ಕಾಗಿಯೇ ತಮ್ಮ ಗೃಹ ಕಚೇರಿಯಲ್ಲಿ ಹೆಲ್ಪ್ಲೈನ್ ಆರಂಭಿಸಿ, ಸಾವಿರಾರು ಮತದಾರರಿಗೆ ಎನ್ಯೂಮರೇಷನ್ ಫಾರಂ ಭರ್ತಿ ಮಾಡಲು ಅಗತ್ಯ ಮಾಹಿತಿ ಹಾಗೂ ನೆರವು ನೀಡಲಾಗುತ್ತಿದೆ ಎಂದು ಮುರುಳೀಧರ ಹಾಲಪ್ಪ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ. ಎಸ್. ಷಫಿ ಅಹಮದ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
