ಕೊರಟಗೆರೆ:- ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಮನೆ ಮನೆ ಗಂಗೆ’ (ಜಲ್ ಜೀವನ್ ಮಿಷನ್ – JJM) ಯೋಜನೆ ಕೊರಟಗೆರೆ ತಾಲ್ಲೂಕಿನ ನಿಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆ ಗ್ರಾಮದಲ್ಲಿ ಅವ್ಯವಸ್ಥೆಯ ಸಂಕೇತವಾಗಿ ಪರಿಣಮಿಸಿದೆ.
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿ ಪೂರ್ಣಗೊಳ್ಳದೇ, ಗ್ರಾಮಸ್ಥರು ಇಂದಿಗೂ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಲ್ಲಿ ಸುಮಾರು 250 ಮನೆಗಳಿದ್ದು, ಸುಮಾರು ಒಂದೂವರೆ ವರ್ಷದ ಹಿಂದೆ ಆರಂಭವಾದ ಕಾಮಗಾರಿಯಲ್ಲಿ ಇದುವರೆಗೆ 150 ಮನೆಗಳಿಗೆ ಮಾತ್ರ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಉಳಿದ 100ಕ್ಕೂ ಹೆಚ್ಚು ಮನೆಗಳು ಇನ್ನೂ ಯೋಜನೆಯ ವ್ಯಾಪ್ತಿಗೆ ಬಂದಿಲ್ಲ. ಅಳವಡಿಸಿರುವ ನಲ್ಲಿಗಳಲ್ಲಿಯೂ ಇದುವರೆಗೆ ಒಂದೇ ಒಂದು ದಿನವೂ ನೀರು ಹರಿದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
*ನೀರಿಗಾಗಿ ಎರಡು ಕಿಲೋಮೀಟರ್ ಅಲೆದಾಟ*
ಯೋಜನೆಯಡಿ ನೀರಿನ ಟ್ಯಾಂಕ್ ನಿರ್ಮಾಣ, ಪೈಪ್ಲೈನ್ ಅಳವಡಿಕೆ ಹಾಗೂ ಮನೆಗಳಿಗೆ ನಲ್ಲಿ ಸಂಪರ್ಕ ನೀಡಲಾಗಿದ್ದರೂ, ನೀರು ಪೂರೈಕೆಗೆ ಅಗತ್ಯವಾದ ವ್ಯವಸ್ಥೆ ಪೂರ್ಣಗೊಂಡಿಲ್ಲ. ಪರಿಣಾಮವಾಗಿ ಗ್ರಾಮಸ್ಥರು ಇಂದಿಗೂ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ದೇವಸ್ಥಾನದ ಸಮೀಪದ ಸಾರ್ವಜನಿಕ ನಲ್ಲಿಯಿಂದ ನೀರು ತಂದು ದಿನನಿತ್ಯದ ಬದುಕು ಸಾಗಿಸಬೇಕಾಗಿದೆ.

“ಟ್ಯಾಂಕ್ ಕಟ್ಟಿದ್ದಾರೆ, ಪೈಪ್ ಹಾಕಿದ್ದಾರೆ, ನಲ್ಲಿ ಫಿಟ್ ಮಾಡಿದ್ದಾರೆ. ಆದರೆ ನೀರು ಮಾತ್ರ ಬಂದಿಲ್ಲ. ಸುಮಾರು 20 ಕುಟುಂಬಗಳು ಒಂದೇ ನಲ್ಲಿಯನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಇದೇನಾ ‘ಮನೆ ಮನೆಗೆ ಗಂಗೆ’ ಯೋಜನೆ?” ಎಂದು ಗ್ರಾಮಸ್ಥೆಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
*ಕಳಪೆ ಕಾಮಗಾರಿ ಆರೋಪ*
ಮುಖ್ಯ ಪೈಪ್ಲೈನ್ ಅಳವಡಿಸಲು ಅಗೆದ ರಸ್ತೆಗಳನ್ನು ಸಮರ್ಪಕವಾಗಿ ಮುಚ್ಚದೆ ಬಿಟ್ಟಿರುವುದರಿಂದ ಮಳೆಗಾಲದಲ್ಲಿ ಕೆಸರು ತುಂಬಿ ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೋಟ್ಯಂತರ ರೂಪಾಯಿ ವೆಚ್ಚವಾಗಿದೆ ಎಂದು ಹೇಳುತ್ತಾರೆ. ಆದರೆ ನೆಲದ ಮೇಲೆ ಅದರ ಫಲಿತಾಂಶ ಕಾಣುತ್ತಿಲ್ಲ. ಇದು ಸಾರ್ವಜನಿಕ ಹಣದ ದುರುಪಯೋಗ, ಎಂದು ಗ್ರಾಮದ ಯುವಕರು ಆಕ್ರೋಶ ವ್ಯಕ್ತಪಡಿಸಿದರು.
*ಮಕ್ಕಳು ನೀರಿಗಾಗಿ ಅಲೆದಾಡುವ ಸ್ಥಿತಿ*
ಚುನಾವಣೆ ವೇಳೆ ಮನೆ ಮನೆಗೆ ನೀರು ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಎರಡು ವರ್ಷ ಕಳೆದರೂ ಮಕ್ಕಳು ಶಾಲೆಗೆ ಹೋಗುವ ಮೊದಲು ನೀರಿಗಾಗಿ ಅಲೆದಾಡಬೇಕಾದ ಪರಿಸ್ಥಿತಿ ಇದೆ, ಎಂದು ಗ್ರಾಮಸ್ಥೆ ಮುದ್ದಮ್ಮ ಅಳಲು ತೋಡಿಕೊಂಡರು.
*ಉನ್ನತ ಮಟ್ಟದ ತನಿಖೆಗೆ ಆಗ್ರಹ*
ಕಾಮಗಾರಿಯಲ್ಲಿನ ಲೋಪಗಳ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಲಿಖಿತ ದೂರು ಸಲ್ಲಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ.
ಈ ಕಾಮಗಾರಿಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ವೆಚ್ಚವಾದ ಹಣದ ಸಂಪೂರ್ಣ ಲೆಕ್ಕವನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು, ಎಂದು ಗ್ರಾಮಸ್ಥ ಈರಣ್ಣ ಒತ್ತಾಯಿಸಿದರು.
ಉಳಿದ 100ಕ್ಕೂ ಹೆಚ್ಚು ಮನೆಗಳಿಗೆ ಕೂಡಲೇ ನಲ್ಲಿ ಸಂಪರ್ಕ ಕಲ್ಪಿಸಿ, ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ತಕ್ಷಣವೇ ನೀರು ಪೂರೈಕೆ ಆರಂಭಿಸಬೇಕು, ಎಂದು ರೈತ ಕಾಂತರಾಜು ಆಗ್ರಹಿಸಿದರು.
*ಸಾರ್ವಜನಿಕರ ಒತ್ತಾಯ*
ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ, ಜಲ್ ಜೀವನ್ ಮಿಷನ್ ಯೋಜನೆಯ ಉದ್ದೇಶಕ್ಕೆ ತಕ್ಕಂತೆ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ತಲುಪುವಂತೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
