ಮೂಡಿಗೆರೆ, ಜು. 21: ಕಡಿಮೆ ಹೂಡಿಕೆಗೆ ಹೆಚ್ಚು ಲಾಭದ ಭರವಸೆ ನೀಡಿ ನಕಲಿ ಟ್ರೇಡಿಂಗ್ ಆ್ಯಪ್ಗಳ ಮೂಲಕ ಜನರನ್ನು ವಂಚಿಸಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಾಜಿದ್ ಬಣಕಲ್ ಎಚ್ಚರಿಕೆ ನೀಡಿದ್ದಾರೆ.
ಈ ವಂಚಕರು ಮೊದಲು ವಾಟ್ಸ್ಆಪ್ ಮೂಲಕ ಸಂದೇಶ ಕಳುಹಿಸಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸುತ್ತಾರೆ. ಬಳಿಕ ವಾಟ್ಸ್ಆಪ್ ಗುಂಪಿಗೆ ಸೇರಿಸಿ, ಮತ್ತಷ್ಟು ಸದಸ್ಯರನ್ನು ಸೇರಿಸುವಂತೆ ಹೇಳುತ್ತಾರೆ. ನಂತರ ಒಂದು ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿ ಆರಂಭದಲ್ಲಿ ₹250 ಹೂಡಿಕೆ ಮಾಡಲು ಸೂಚಿಸುತ್ತಾರೆ.
ಕೆಲವೇ ಗಂಟೆಗಳಲ್ಲಿ ಹೂಡಿಕೆ ₹750 ಆಗಿರುವಂತೆ ಆ್ಯಪ್ನಲ್ಲಿ ತೋರಿಸಲಾಗುತ್ತದೆ. ಇದನ್ನು ನಿಜವೆಂದು ನಂಬಿದವರು ಮತ್ತಷ್ಟು ಹಣ ಹೂಡಿಕೆ ಮಾಡುತ್ತಾರೆ. ನಂತರ ₹2,000, ₹10,000, ₹50,000 ಹಾಗೂ ಲಕ್ಷಾಂತರ ರೂಪಾಯಿಗಳನ್ನು ಹೂಡಿಕೆ ಮಾಡಲು ಪ್ರೇರೇಪಿಸಲಾಗುತ್ತದೆ.
ಆರಂಭದಲ್ಲಿ ಕೆಲವರಿಗೆ ಹಣ ವಾಪಸ್ ನೀಡಿ ವಿಶ್ವಾಸ ಗಳಿಸಿದ ಬಳಿಕ ಹೆಚ್ಚಿನ ಮೊತ್ತ ಹೂಡಿಕೆ ಮಾಡಿಸಿಕೊಂಡು, ಹಣ ಹಿಂಪಡೆಯಲು ಪ್ರಯತ್ನಿಸಿದಾಗ ಆ್ಯಪ್ ಕಾರ್ಯನಿರ್ವಹಿಸದೇ ವಂಚನೆ ಬಯಲಾಗುತ್ತದೆ. ಕೆಲವರನ್ನು ಆ್ಯಪ್ ಹಾಗೂ ವಾಟ್ಸ್ಆಪ್ ಗುಂಪಿನಿಂದಲೇ ತೆಗೆದುಹಾಕಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಒಂದು ಪ್ರಕರಣದಲ್ಲಿ ಯುವಕನೊಬ್ಬ ತನ್ನ ತಂಗಿಯ ಮದುವೆಗಾಗಿ ಉಳಿಸಿಕೊಂಡಿದ್ದ ಸುಮಾರು ₹1.5 ಲಕ್ಷವನ್ನು ಹೂಡಿಕೆ ಮಾಡಿದ್ದು, ಆ್ಯಪ್ನಲ್ಲಿ ₹3.35 ಲಕ್ಷ ತೋರಿಸಿದರೂ ಹಣ ಹಿಂಪಡೆಯಲು ಸಾಧ್ಯವಾಗಲಿಲ್ಲ ಎಂದು ಸಾಜಿದ್ ತಿಳಿಸಿದ್ದಾರೆ.
ಇಂತಹ ವಂಚನಾ ಜಾಲಗಳು ಬಿಹಾರ, ಉತ್ತರ ಪ್ರದೇಶ, ಆಂಧ್ರ ಪ್ರದೇಶ ಹಾಗೂ ಕೊಲ್ಕತ್ತಾ ಭಾಗಗಳಿಂದ ಕಾರ್ಯನಿರ್ವಹಿಸುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗೆ ಕನ್ನಡದಲ್ಲಿಯೂ ಸಂವಹನ ನಡೆಸಿ ಜನರ ವಿಶ್ವಾಸ ಗಳಿಸುವ ಪ್ರಯತ್ನ ಮಾಡುತ್ತಿರುವುದರಿಂದ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಅಪರಿಚಿತ ವ್ಯಕ್ತಿಗಳ ಹೂಡಿಕೆ ಸಲಹೆ, ಅತಿಹೆಚ್ಚು ಲಾಭದ ಭರವಸೆ ಹಾಗೂ ದೃಢೀಕರಣವಿಲ್ಲದ ಮೊಬೈಲ್ ಆ್ಯಪ್ಗಳನ್ನು ನಂಬಬಾರದು. ಯಾವುದೇ ಅನುಮಾನಾಸ್ಪದ ಹೂಡಿಕೆ ಯೋಜನೆ ಕಂಡುಬಂದರೆ ತಕ್ಷಣ ಸೈಬರ್ ಅಪರಾಧ ವಿಭಾಗ ಅಥವಾ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

