ರಾಮನಾಥಪುರ, ಜು. 21: ರಾಮನಾಥಪುರದ ಕಾವೇರಿ ನದಿ ಸೇತುವೆ ಕಾಮಗಾರಿ ಎಂಟು ವರ್ಷಗಳಿಂದ ವಿಳಂಬವಾಗಿರುವುದಕ್ಕೆ ಶಾಸಕ ಎ. ಮಂಜು ಅಸಮಾಧಾನ ವ್ಯಕ್ತಪಡಿಸಿ, ಕಾಮಗಾರಿಯನ್ನು ಇನ್ನಷ್ಟು ವಿಳಂಬ ಮಾಡದೆ ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ಕೆಆರ್ಡಿಸಿಎಲ್ (KRDCL) ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಾವೇರಿ ನದಿ ಸೇತುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಸೇತುವೆ ಸಂಪರ್ಕ ರಸ್ತೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಂಡು ಸಾರ್ವಜನಿಕರು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಶೀಘ್ರ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.

ಸೇತುವೆ ಸಂಪರ್ಕ ರಸ್ತೆಗೆ ಅಡ್ಡಿಯಾಗಿರುವ ಮನೆಗಳಿಗೆ ಶೀಘ್ರ ಪರಿಹಾರ ವಿತರಿಸಿ, ಅಗತ್ಯವಿರುವ ಮನೆಗಳು ಹಾಗೂ ತೆಂಗಿನ ಮರಗಳನ್ನು ತೆರವುಗೊಳಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹಾಸನ–ಅರಕಲಗೂಡು–ರಾಮನಾಥಪುರ ಮಾರ್ಗವಾಗಿ ಕೇರಳವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿರುವ ಈ ಸೇತುವೆ ಕಾಮಗಾರಿ ತಮ್ಮ ಸಚಿವರ ಅವಧಿಯಲ್ಲಿ ಮಂಜೂರಾಗಿದ್ದರೂ ಇನ್ನೂ ಪೂರ್ಣಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ, ಕಾವೇರಿ ನದಿಯ ದೇವಾಲಯ ಸಂಪರ್ಕ ರಸ್ತೆಯ ಕಿರುಸೇತುವೆ ಕಾಮಗಾರಿ ಒಂದು ವರ್ಷದಿಂದ ಅಪೂರ್ಣವಾಗಿದ್ದು, ಸೇತುವೆಯ ಕೆಳಭಾಗದಲ್ಲಿ ನೀರು ನಿಲ್ಲುತ್ತಿರುವುದರಿಂದ ಚರಂಡಿ ವ್ಯವಸ್ಥೆ ಕಲ್ಪಿಸಿ, ಕಿರುಸೇತುವೆ ಹಾಗೂ ರಸ್ತೆ ಕಾಮಗಾರಿಯನ್ನು ಕೂಡ ತಕ್ಷಣ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಿಂದ ರಾಮೇಶ್ವರ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಈ ಕಿರುಸೇತುವೆ ಅಪೂರ್ಣವಾಗಿರುವುದರಿಂದ ಭಕ್ತರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಲಕ್ಷಾಂತರ ರೂಪಾಯಿ ವೆಚ್ಚದ ಈ ಕಾಮಗಾರಿಯನ್ನು ಮತ್ತಷ್ಟು ವಿಳಂಬ ಮಾಡದೆ ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕೆಆರ್ಡಿಸಿಎಲ್ ಕಾರ್ಯಪಾಲಕ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗುತ್ತಿಗೆದಾರರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಾರ್ವಜನಿಕರು, ಗ್ರಾಮಸ್ಥರು ಹಾಗೂ ಮುಖಂಡರು ಉಪಸ್ಥಿತರಿದ್ದರು.
– ಕುಮಾರಸ್ವಾಮಿ ಎಂ.ಎನ್.
