- ಶ್ಲೋಕ – 18
ಊರ್ಧ್ವಂ ಗಚ್ಛಂತಿ ಸತ್ತ್ವಸ್ಥಾ ಮಧ್ಯೇ ತಿಷ್ಠಂತಿ ರಾಜಸಾಃ ।
ಜಘನ್ಯಗುಣವೃತ್ತಿಸ್ಥಾ ಅಧೋ ಗಚ್ಛಂತಿ ತಾಮಸಾಃ ॥೧೮॥
ಊರ್ಧ್ವಮ್ ಗಚ್ಛಂತಿ ಸತ್ತ್ವಸ್ಥಾಃ ಮಧ್ಯೇ ತಿಷ್ಠಂತಿ ರಾಜಸಾಃ ।
ಜಘನ್ಯಗುಣ ವೃತ್ತಿಸ್ಥಾಃ ಅಧಃ ಗಚ್ಛಂತಿ ತಾಮಸಾಃ—ಸತ್ವದಲ್ಲಿ ನೆಲೆಗೊಂಡವರು ಎತ್ತರಕ್ಕೆರುತ್ತಾರೆ. ರಾಜಸರು ನಡುವಿನಲ್ಲಿ ನಿಲ್ಲುತ್ತಾರೆ. ‘ಕೊನೆಯ ಗುಣದ’ ಪ್ರಭಾವಕ್ಕೊಳಗಾದ ತಾಮಸರು ಕೆಳಕ್ಕೆ ಕುಸಿಯುತ್ತಾರೆ.
ತ್ರಿಗುಣದ ಸ್ವಭಾವವನ್ನು ಹೇಳಿದ ಕೃಷ್ಣ, ಅದರ ಪರಿಣಾಮದ ಮೂರು ಮಜಲನ್ನು ಈ ಶ್ಲೋಕದಲ್ಲಿ ವಿವರಿಸಿದ್ದಾನೆ. ಸತ್ವದಲ್ಲಿರುವವರು ಮಾನಸಿಕವಾಗಿ ಮೇಲಕ್ಕೇರುತ್ತಾರೆ. ರಜೋಗುಣದವನಿಗೆ ಯಾವ ಏಳಿಗೆಯೂ ಇಲ್ಲ. ತಮಸ್ಸಿನಲ್ಲಿರುವವ ಮಾನಸಿಕವಾಗಿ ಅಧಃಪಾತ ಹೊಂದುತ್ತಾನೆ. ಇಲ್ಲಿ ‘ಊರ್ಧ್ವ’ ಎನ್ನುವ ಪದಕ್ಕೆ ವಿಶೇಷವಾದ ಅರ್ಥವಿದೆ. ಕಠೋಪನಿಷತ್ತಿನಲ್ಲಿ ಹೇಳುವಂತೆ :
ಊರ್ಧ್ವಮೂಲೋ ಅವಾಕ್ಶಾಖಃ ಏಷೋ ಅಶ್ವತ್ಥಃ ಸನಾತನಃ ||೨-೩-೧||
ಊರ್ಧ್ವ ಎಂದರೆ ಎಲ್ಲಕ್ಕಿಂತ ಮೇಲಿರುವ ಭಗವಂತ. ಸತ್ವದಲ್ಲಿರುವವ ಮೇಲಕ್ಕೆ ಹೋಗುವುದು ಅಂದರೆ- ಭಗವಂತನ ಕಡೆ ಮುಖಮಾಡಿ ಚಲಿಸುವುದು. ಆತ ಮುಂದೆ ಹೋದಂತೆ ಭಗವಂತನಿಗೆ ಹತ್ತಿರವಾಗುತ್ತಾ ಹೋಗುತ್ತಾನೆ. ಆದರೆ ತಮಸ್ಸಿನಲ್ಲಿರುವವ ಭಗವಂತನಿಗೆ ಬೆನ್ನು ಹಾಕಿ ಚಲಿಸುತ್ತಿರುತ್ತಾನೆ. ರಾಜಸ ಇದ್ದಲ್ಲೇ ಅತಂತ್ರ ಸ್ಥಿತಿಯಲ್ಲಿ ಮುಂದುವರಿಯುತ್ತಾನೆ.
ದೇವತೆಗಳನ್ನು ಬಂಧನದಲ್ಲಿಡುವ ಶಕ್ತಿ ‘ಶ್ರೀದೇವಿ’; ಮಾನವರನ್ನು ಬಂಧನದಲ್ಲಿಡುವ ಶಕ್ತಿ ‘ಭೂದೇವಿ’ ಮತ್ತು ರಾಕ್ಷಸರನ್ನು ಬಂಧನದಲ್ಲಿಡುವ ಶಕ್ತಿ ‘ದುರ್ಗಾದೇವಿ’. ಸಾತ್ವಿಕರು ಸತ್ವಮಾನಿನಿಯಾದ ‘ಶ್ರೀದೇವಿಯ’ ಕೃಪೆಗೆ ಪಾತ್ರರಾಗಿ ಮೇಲಿನ ಲೋಕವನ್ನು ಪಡೆಯುತ್ತಾರೆ[ಭೂಮಿಯಿಂದ ಮೇಲೆ ಇರುವ ಆರು ಸೂಕ್ಷ್ಮ ಲೋಕಗಳು ಮತ್ತು ಕೊನೆಗೆ ಮೋಕ್ಷ]; ರಾಜಸರು ಭೂದೇವಿಯ ಬಂಧನದಲ್ಲೇ ಮುಂದುವರಿಯುತ್ತಾರೆ[ಭೂಮಿ ಮತ್ತು ಅಂತರಿಕ್ಷ] ಮತ್ತು ತಾಮಸರು ದುರ್ಗಾದೇವಿಯ ನಿಯಂತ್ರಣದಲ್ಲಿರುವ ತಾಮಸಲೋಕ [ಭೂಮಿಯಿಂದ ಕೆಳಗಿರುವ ಏಳು ಸೂಕ್ಷ್ಮಲೋಕಗಳು]ವನ್ನು ಸೇರುತ್ತಾರೆ.
