ಕೊರಟಗೆರೆ, ಜು.30: ಗುರುಪೂರ್ಣಿಮೆಯ ಪವಿತ್ರ ದಿನದ ಅಂಗವಾಗಿ ಸಮಾಜ ಸೇವಕ ಪಿ.ಎನ್.ಕೆ. ಕೃಷ್ಣಮೂರ್ತಿ ಅವರು ಕೊರಟಗೆರೆ ತಾಲೂಕಿನ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ನಾಡಿನ ಸಮಸ್ತ ಜನತೆಗೆ ಗುರುಪೂರ್ಣಿಮೆಯ ಶುಭಾಶಯಗಳನ್ನು ಕೋರಿದರು.

ಮಂದಿರದಲ್ಲಿ ಪೂಜೆ, ಭಜನೆ ಹಾಗೂ ಪ್ರಾರ್ಥನೆಯಲ್ಲಿ ಭಾಗವಹಿಸಿದ ಅವರು, ಗುರುಗಳು ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕನ್ನು ತೋರುವ ದೈವಸ್ವರೂಪರು ಎಂದು ಹೇಳಿದರು. ಗುರುಗಳಿಗೆ ಗೌರವ ಸಲ್ಲಿಸುವುದು ಭಾರತೀಯ ಸಂಸ್ಕೃತಿಯ ಮಹತ್ವದ ಪರಂಪರೆಯಾಗಿದ್ದು, ಪ್ರತಿಯೊಬ್ಬರೂ ಗುರುಗಳ ಆಶೀರ್ವಾದ ಪಡೆದು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.

ಸಾವಿರಾರು ಭಕ್ತರು ಗುರುಪೂರ್ಣಿಮೆಯ ಆಚರಣೆಯಲ್ಲಿ ಭಾಗವಹಿಸಿದ್ದನ್ನು ಕಂಡು ಸಂತಸ ವ್ಯಕ್ತಪಡಿಸಿದ ಕೃಷ್ಣಮೂರ್ತಿ, ಸಾಯಿಬಾಬಾ ಅವರ ಕೃಪೆಯಿಂದ ಎಲ್ಲರ ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಮಂದಿರದ ಒಳಭಾಗದಲ್ಲಿ ಪಿಒಪಿ ಅಲಂಕಾರ ಕಾಮಗಾರಿ ಕೈಗೊಳ್ಳಲು ₹2 ಲಕ್ಷ ದೇಣಿಗೆ ನೀಡುವುದಾಗಿ ಆಡಳಿತ ಮಂಡಳಿಗೆ ಘೋಷಿಸಿದರು.

ಗುರುಪೂರ್ಣಿಮೆಯ ಮಹತ್ವವನ್ನು ವಿವರಿಸಿದ ಅವರು, ಆಷಾಢ ಮಾಸದ ಹುಣ್ಣಿಮೆಯಂದು ಆಚರಿಸಲಾಗುವ ಈ ಪರ್ವವು ಗುರುಭಕ್ತಿ, ಜಪ, ಧ್ಯಾನ, ಸ್ವಾಧ್ಯಾಯ ಮತ್ತು ಆಧ್ಯಾತ್ಮಿಕ ಸಾಧನೆಗೆ ಅತ್ಯಂತ ಶ್ರೇಷ್ಠ ದಿನವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಸಾವಿರಾರು ಭಕ್ತರಿಗೆ ಅನ್ನದಾಸೋಹವೂ ನಡೆಯಿತು.
ಈ ಸಂದರ್ಭದಲ್ಲಿ ಪಿ.ಎನ್.ಕೆ. ಕುಟುಂಬದ ಸದಸ್ಯರು, ಪವನ್ ಕುಮಾರ್, ಕಾಮರಾಜಣ್ಣ, ಮಂಜುನಾಥ್, ದೊಡ್ಡಯ್ಯ, ರಂಗನಾಥ್, ನರಸಿಂಹರಾಜು ಎಲ್. ಸೇರಿದಂತೆ ಹಲವಾರು ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.
– ವರದಿ: ನರಸಿಂಹಯ್ಯ ಹೊಸಕೋಟೆ
