ಆಸ್ತಿ ಉತ್ತರಾಧಿಕಾರದ ವಿಷಯಕ್ಕೆ ಸಂಬಂಧಿಸಿದಂತೆ ದೇಶದಲ್ಲೇ ಮಹತ್ವದ ಬದಲಾವಣೆ ತರುವಂತಹ ತೀರ್ಪುಗಳಲ್ಲಿ “ಬಾಬು ರಾಮ್ ಮತ್ತು ಸಂತೋಖ್ ಸಿಂಗ್” ವ್ಯಾಜ್ಯದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಮೈಲುಗಲ್ಲಾಗಿದೆ.
ಪಿತ್ರಾರ್ಜಿತ ಕೃಷಿ ಭೂಮಿಯನ್ನು ಹೊರಗಿನವರಿಗೆ ಮಾರಾಟ ಮಾಡುವ ಮೊದಲು ಆ ಭೂಮಿಯನ್ನು ಖರೀದಿಸುವ ಮೊದಲ ಆದ್ಯತೆಯ ಹಕ್ಕನ್ನು ಆ ಕುಟುಂಬದ ಕಾನೂನುಬದ್ಧ ವಾರಸುದಾರರಿಗೆ ನೀಡಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಈ ತೀರ್ಪಿನಲ್ಲಿ ಸ್ಪಷ್ಟವಾಗಿ ಉಚ್ಚರಿಸಿದೆ.
ಬಾಬು ರಾಮ್ ಮತ್ತು ಸಂತೋಖ್ ಸಿಂಗ್ (2019) 14 ಎಸ್ಸಿಸಿ 162 ಪ್ರಕರಣದಲ್ಲಿ ನೀಡಲಾದ ಈ ತೀರ್ಪು ಹಿಂದೂ ಉತ್ತರಾಧಿಕಾರ ಕಾಯ್ದೆ 1956 ರ ಸೆಕ್ಷನ್ 22 ಕೃಷಿ ಭೂಮಿಗೂ ಅನ್ವಯವಾಗುತ್ತದೆ ಎಂದು ಹೇಳುವ ಮೂಲಕ ಬಹಳ ಸಮಯದಿಂದ ಇದ್ದ ಕಾನೂನು ಗೊಂದಲವನ್ನು ನಿವಾರಿಸಿದೆ.
ಕಳೆದ ಹಲವು ದಶಕಗಳಿಂದ, ಭಾರತದ ನ್ಯಾಯಾಲಯಗಳು ಕೃಷಿ ಭೂಮಿಯು ಕಾನೂನುಬದ್ಧ ವಾರಸುದಾರರ ಆದ್ಯತೆಯ ಆದ್ಯತೆಯ ಹಕ್ಕಿನ ವ್ಯಾಪ್ತಿಗೆ ಬರುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಬೇರೆ ಬೇರೆ ತೀರ್ಪುಗಳನ್ನು ನೀಡಿದ್ದವು.
ಕೆಲವು ಹೈಕೋರ್ಟ್ಗಳು, ಸೆಕ್ಷನ್ 22 ಕೇವಲ ಕೃಷಿಯೇತರ ಆಸ್ತಿಗಳಿಗೆ ಮಾತ್ರ ಸೀಮಿತ ಎಂದು ಹೇಳಿದರೆ ಇನ್ನು ಕೆಲವು ಹೈಕೋರ್ಟ್ಗಳು ಕೃಷಿ ಭೂಮಿಯನ್ನೂ ಒಳಗೊಂಡಂತೆ ಸ್ಥಿರಾಸ್ತಿಗಳಿಗೂ ಇದು ಅನ್ವಯಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದವು.
ಆದರೆ ಸುಪ್ರೀಂ ಕೋರ್ಟ್ನ ಈ ತೀರ್ಪು, ಈ ಗೊಂದಲವನ್ನು ಸಂಪೂರ್ಣವಾಗಿ ನಿವಾರಿಸಿತು. ಇದರಿಂದಾಗಿ ಕುಟುಂಬದ ಒಡೆತನದಲ್ಲಿರುವ ಕೃಷಿ ಭೂಮಿಯನ್ನು ಕಾನೂನುಬದ್ಧ ವಾರಸುದಾರರಿಗೆ ಮೊದಲು ಕೇಳದೆ ಮೂರನೇ ವ್ಯಕ್ತಿಗಳಿಗೆ ಸುಲಭವಾಗಿ ಮಾರಾಟ ಮಾಡುವುದನ್ನು ತಪ್ಪಿಸುತ್ತದೆ.

ಸುಪ್ರೀಂ ಕೋರ್ಟ್ ತೀರ್ಪು :-
ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಸೆಕ್ಷನ್ 22 ಕೃಷಿ ಭೂಮಿಗೂ ಅನ್ವಯಿಸುತ್ತದೆ. ಉತ್ತರಾಧಿಕಾರದ ವಿಷಯದಲ್ಲಿ ಹಿಂದೂ ಕಾನೂನು ಸ್ಥಿರಾಸ್ತಿಯ ಪ್ರಕಾರಗಳನ್ನು ಬೇರ್ಪಡಿಸುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತು. ಆಸ್ತಿಯು ಮನೆಯೇ ಆಗಿರಲಿ, ವಾಣಿಜ್ಯ ಕಟ್ಟಡವಾಗಿರಲಿ ಅಥವಾ ಕೃಷಿ ಭೂಮಿಯೇ ಆಗಲಿ, ಉತ್ತರಾಧಿಕಾರದ ನಿಯಮಗಳು ಒಂದೇ ಆಗಿರುತ್ತವೆ ಎಂದಿತು.
ಮುಂದುವರೆದು, ರಾಜ್ಯ ಸರ್ಕಾರಗಳು ಭೂ ವರ್ಗಾವಣೆಗೆ ಸಂಬಂಧಿಸಿದ ಕಾನೂನುಗಳನ್ನು ಮಾಡಬಹುದು. ಆದರೆ ಉತ್ತರಾಧಿಕಾರದ ಕಾನೂನುಗಳು ಬೇರೆ ರೀತಿಯಲ್ಲಿವೆ, ಕೃಷಿ ಭೂಮಿಯ ಮಾರಾಟ ಮತ್ತು ಹಂಚಿಕೆಯನ್ನು ರಾಜ್ಯ ಸರ್ಕಾರಗಳು ನಿಯಂತ್ರಿಸಬಹುದು ಎಂಬುದನ್ನು ಕೋರ್ಟ್ ಒಪ್ಪಿಕೊಂಡಿತು ಆದರೆ ಉತ್ತರಾಧಿಕಾರದ ವಿಷಯವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಬರುವುದರಿಂದ, ಈ ಬಗ್ಗೆ ಕಾನೂನುಗಳನ್ನು ರೂಪಿಸಲು ಸಂಸತ್ತಿಗೆ ಅಧಿಕಾರವಿದೆ ಎಂದು ಹೇಳಿತು.
ಬಾಬು ರಾಮ್ ಜೊತೆಗಿನ ಜಮೀನಿನ ಮಾರಾಟವು ಕಾನೂನು ಬಾಹಿರವಾಗಿದೆ ಎಂದು ಹೇಳಿ ಕೆಳ ನ್ಯಾಯಾಲಯಗಳು ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯಿತು ಆ ಮೂಲಕ ಕಾನೂನುಬದ್ಧ ವಾರಸುದಾರರಾದ ಸಂತೋಖ್ ಸಿಂಗ್ಗೆ ಪಿತ್ರಾರ್ಜಿತ ಭೂಮಿಯನ್ನು ಖರೀದಿಸುವ ಮೊದಲ ಆದ್ಯತೆಯ ಹಕ್ಕು ಸಿಕ್ಕಂತಾಯಿತು. ಇದರಿಂದ ಭೂಮಿ ಆ ಕುಟುಂಬದಲ್ಲಿಯೇ ಉಳಿಯುವಂತಾಯಿತು.
_0_1200.jpg)
ಈ ತೀರ್ಪು ಲಕ್ಷಾಂತರ ಕುಟುಂಬಗಳಿಗೆ ಏಕೆ ಮುಖ್ಯ?
ಈ ತೀರ್ಪು ಭಾರತದಲ್ಲಿ ಆಸ್ತಿಯ ಉತ್ತರಾಧಿಕಾರದ ವಿಷಯದಲ್ಲಿ ಬಹಳ ಮುಖ್ಯವಾದದ್ದು. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ, ಕೃಷಿ ಭೂಮಿಯೇ ಮುಖ್ಯ ಆಸ್ತಿಯಾಗಿದೆ ಇದು ಅವರ ಜೀವನ ಆಧಾರವೂ ಆಗಿರುವುದರಿಂದ ಜನರಿಗೆ ಇದು ತುಂಬಾ ಸಹಾಯಕವಾಯಿತು.
ಇನ್ನು ಈ ತೀರ್ಪು ಪಿತ್ರಾರ್ಜಿತ ಆಸ್ತಿಯನ್ನು ಕುಟುಂಬದ ಸದಸ್ಯರೇ ಉಳಿಸಿಕೊಳ್ಳಲು ಸಹಾಯ ಮಾಡಿತು ಹಾಗೂ ಇದರಿಂದಾಗಿ ಆಸ್ತಿ ವಿಭಜನೆ ಆಗುವುದು ಮತ್ತು ಕುಟುಂಬದ ಹೊರಗಿನ ಮೂರನೇ ವ್ಯಕ್ತಿಗಳಿಗೆ ಬಲವಂತವಾಗಿ ಮಾರಾಟ ಮಾಡುವುದು ತಪ್ಪಿತು.
ಹಲವಾರು ಕಾನೂನು ಗೊಂದಲ ನಿವಾರಣೆ:-
ಸುಪ್ರೀಂ ಕೋರ್ಟ್ನ ಈ ತೀರ್ಪು, ಉತ್ತರಾಧಿಕಾರ ಕಾನೂನಿನ ಬಗ್ಗೆ ಇದ್ದ ಗೊಂದಲವನ್ನು ನಿವಾರಿಸಿತು ಹಾಗೂ ಹೈಕೋರ್ಟ್ಗಳು ಈ ಹಿಂದೆ ನೀಡಿದ್ದ ಬೇರೆ ಬೇರೆ ತೀರ್ಪುಗಳಿಂದ ಉಂಟಾಗಿದ್ದ ಸಮಸ್ಯೆಗಳನ್ನು ಸರಿಪಡಿಸಿ, ಉತ್ತರಾಧಿಕಾರಕ್ಕೆ ಸಂಬಂಧಿಸಿದ ಎಲ್ಲಾ ವಿವಾದಗಳಿಗೂ ಒಂದೇ ರೀತಿಯ ಕಾನೂನು ಅನ್ವಯವಾಗುವಂತೆ ಮಾಡಿತು.
ಅನೇಕ ಸಹೋದರರು, ಸಹೋದರಿಯರು, ಕುಟುಂಬದ ವಿಧವೆಯರು, ಹೆಣ್ಣುಮಕ್ಕಳು ಮತ್ತು ಇತರ ವಾರಸುದಾರರು ತಮ್ಮ ಪಿತ್ರಾರ್ಜಿತ ಭೂಮಿಯನ್ನು ಕುಟುಂಬದ ಕಲಹಗಳಲ್ಲಿ ತಮ್ಮವರನ್ನೇ ಹಿಂದಕ್ಕೆ ತಳ್ಳಿ ಮೂರನೇ ವ್ಯಕ್ತಿಗಳಿಗೆ ಮಾರಾಟ ಮಾಡಿ ಹಗೆತನವನ್ನು ಬೆಳೆಸುವ ಪರಂಪರೆಗೆ ತಡೆ ನೀಡಿತು.
ಆದ್ಯತೆಯ ಹಕ್ಕು ಸಂಪೂರ್ಣ ಹಕ್ಕಲ್ಲ:-
ಆದ್ಯತೆಯ ಹಕ್ಕುಗಳು ಒಂದು ಅನುಕೂಲಕರವಾದ ಹಕ್ಕಾಗಿವೆ ಆದರೆ ಅವು ಅನಿಯಂತ್ರಿತವಲ್ಲ, ಅವುಗಳು ಕೆಲವು ಮಿತಿಗಳನ್ನು ಹೊಂದಿವೆ.
* ಪಿತ್ರಾರ್ಜಿತ ಆಸ್ತಿ ಪ್ರಕರಣದಲ್ಲಿ, ವಾರಸುದಾರರು ಮಾರುಕಟ್ಟೆ ಬೆಲೆಗೆ ಆಸ್ತಿಯನ್ನು ಖರೀದಿಸಲು ಸಿದ್ಧರಿರಬೇಕು. ಉಚಿತವಾಗಿ ಅಥವಾ ಕಡಿಮೆ ಬೆಲೆಗೆ ಆಸ್ತಿ ಸಿಗಬೇಕೆಂದು ಅವರು ನಿರೀಕ್ಷಿಸಲು ಸಾಧ್ಯವಿಲ್ಲ.
* ಒಂದು ವೇಳೆ ಮಾರುವ ಮೊದಲು ವಾರಸುದಾರರು ಒಪ್ಪಿಗೆ ನೀಡಿ ಈಗ ಸೆಕ್ಷನ್ 22 ರಡಿಯಲ್ಲಿ ತನಗೆ ಮಾರುವಂತೆ ಕೇಳಲು ಸಾಧ್ಯವಿಲ್ಲ.
* ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 22 ಕೇವಲ ಸಹ-ವಾರಸುದಾರರ ನಡುವಿನ ಮಾರಾಟಕ್ಕೆ ಮಾತ್ರ ಅನ್ವಯಿಸುತ್ತದೆ.
* ಕಾಲಮಿತಿ ಕಾಯ್ದೆಯ ಅಡಿಯಲ್ಲಿ ನಿಗದಿ ಪಡಿಸಿದ ಸಮಯದಲ್ಲಿ ಮಾತ್ರ ಈ ಆದ್ಯತೆಯ ಹಕ್ಕು ದೊರೆಯುತ್ತದೆ ಹೊರತು ಹತ್ತಾರು ವರ್ಷಗಳ ನಂತರ ಮಾರಾಟ ಪ್ರಶ್ನಿಸಲು ಬರಲಾರದು.

ಈ ತೀರ್ಪು ಐತಿಹಾಸಿಕ ಮೈಲಿಗಲ್ಲು:-
ಬಾಬು ರಾಮ್ ಮತ್ತು ಸಂತೋಖ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಭಾರತದ ಆಸ್ತಿ ಕಾನೂನಿನಲ್ಲಿ ಒಂದು ಹೊಸ ಅಧ್ಯಾಯವನ್ನು ಬರೆದಿದೆ. ಪಿತ್ರಾರ್ಜಿತ ಭೂಮಿಯನ್ನು ಕುಟುಂಬದ ಸದಸ್ಯರೇ ಉಳಿಸಿಕೊಳ್ಳಬೇಕು ಎಂಬ ತತ್ವವನ್ನು ಇದು ಬಲವಾಗಿ ಪ್ರತಿಪಾದಿಸುತ್ತದೆ. ಕೃಷಿ ಭೂಮಿಯನ್ನು ಉತ್ತರಾಧಿಕಾರ ಕಾನೂನಿನ ಅಡಿಯಲ್ಲಿ ಇತರ ಸ್ಥಿರಾಸ್ತಿಗಳಂತೆಯೇ ಪರಿಗಣಿಸುವಂತೆ ಮಾಡಿ ಪೂರ್ವಜರ ಆಸ್ತಿಯನ್ನೇ ನಂಬಿ ಬದುಕುತ್ತಿರುವ ಕುಟುಂಬಗಳಿಗೆ ನ್ಯಾಯ ಒದಗಿಸಿದೆ.
ಈ ತೀರ್ಪು ಮುಂದಿನ ದಿನಗಳಲ್ಲಿ ಉತ್ತರಾಧಿಕಾರಕ್ಕೆ ಸಂಬಂಧಿಸಿದ ವಿವಾದಗಳನ್ನು ಕಡಿಮೆ ಮಾಡುತ್ತದೆ. ವಾರಸುದಾರರ ಕಾನೂನು ಹಕ್ಕುಗಳನ್ನು ಬಲಪಡಿಸಿ ಕುಟುಂಬದ ಆಸ್ತಿ ಅನಗತ್ಯವಾಗಿ ವಿಭಜನೆಯಾಗುವುದನ್ನು ತಪ್ಪಿಸುತ್ತದೆ. ಕಾನೂನು ತಜ್ಞರು ಮತ್ತು ಗ್ರಾಮೀಣ ಭಾಗದ ಭೂಮಾಲೀಕರಿಗೆ, ಈ ತೀರ್ಪು ಆಸ್ತಿ ಉತ್ತರಾಧಿಕಾರ ಕಾನೂನಿನ ಕ್ಷೇತ್ರದಲ್ಲಿ ಒಂದು ಪ್ರಮುಖ ಉಲ್ಲೇಖವಾಗಿದೆ.
