ತುಮಕೂರು:ಯೋಗ ಮಾಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ಮತ್ತು ಸ್ಫೂರ್ತಿ ಬರುತ್ತದೆ,ಈ ನಿಟ್ಟಿನಲ್ಲಿ ಕಳೆದ 46ವರ್ಷಗಳಿಂದ ಪತಂಜಲಿ ಯೋಗ ಶಿಕ್ಷಣ ಸಮಿತಿ ತುಮಕೂರು ನಗರದಲ್ಲಿ ಲಕ್ಷಾಂತರ ಜನರಿಗೆ ಉಚಿತ ಯೋಗ ಶಿಕ್ಷಣವನ್ನು ನೀಡುತ್ತಾ ಬಂದಿದೆ,ಮಹಿಳೆಯರು,ಪುರುಷರು,ಯುವಕ-ಯುವತಿಯರು ಉತ್ತಮ ಯೋಗಪಟುಗಳಾಗಿದ್ದಾರೆ,ಇಂದು ದುಡ್ಡು ಇದ್ದವನು ಶ್ರೀಮಂತನಲ್ಲ ಉತ್ತಮ ಆರೋಗ್ಯವಿದ್ದವನು ಶ್ರೀಮಂತ,ಆರೋಗ್ಯವೇ ಭಾಗ್ಯವೆಂಬಂತೆ ಉತ್ತಮ ಆರೋಗ್ಯಕ್ಕೆ ಯೋಗ ಒಂದು ವರದಾನವಾಗಿದೆ.
ಮಾತೃ ಭೋಜನ ಕಾರ್ಯಕ್ರಮದಿಂದ ಇಂದಿನ ಮಕ್ಕಳಿಗೆ ತಾಯಿಯ ಪ್ರೀತಿ ಆರೈಕೆ,ನಿಸ್ವಾರ್ಥತೆ ತಿಳಿಯುತ್ತಿದೆ,ತಾಯಿಯ ಅಂತಃಕರಣ ಮಕ್ಕಳಿಗೆ ತಿಳಿದಾಗ ಮಾತ್ರ ಉತ್ತಮ ಸಮಾಜ ರೂಪುಗೊಳ್ಳುತ್ತದೆ,ಈ ನಿಟ್ಟಿನಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯವರು ಯೋಗದ ಜೊತೆ ಸಮಾಜಕ್ಕೆ ಉತ್ತಮ ಸಂಸ್ಕಾರವನ್ನು ಸಹ ಕಲಿಸುತ್ತಿದೆ ಎಂದು ವೈಷ್ಣವ ಸಮಾಜದ ಅಧ್ಯಕ್ಷರು ಮತ್ತು ಮಾಜಿ ನಗರಸಭಾ ಸದಸ್ಯರೂ ಆದ ಟಿ.ಎಸ್.ಮೋಹನ್ ಕುಮಾರ್ ತಿಳಿಸಿದರು.

ಅವರು ಇಂದು ನಗರದ ಮಾರುತಿ ನಗರದಲ್ಲಿರುವ ಶ್ರೀವೈಷ್ಣವ ಸಮಾಜದ ಸಭಾಭವನದಲ್ಲಿ ಪತಂಜಲಿ ಯೋಗಶಿಕ್ಷಣ ಸಮಿತಿಯವರು ಆಯೋಜಿಸಿದ್ದ ಸಾಮೂಹಿಕ ಭಜನೆ,ಮಾತೃಭೋಜನ ಕಾಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಎನ್.ಎಸ್.ಮಹೇಶ್ ರವರು ಭಜನೆ ಮಾಡುವುದರಿಂದ ನಮ್ಮ ಶರೀರದಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ಕಾಣಬಹುದು,ಭಜನೆಗಳಿಂದ ಆನಂದ,ಸಂತೃಪ್ತಿ ಸಿಗುತ್ತದೆ,ಶಾಂತಿ ದೊರೆಯುತ್ತದೆ.
ಯೋಗ ಕಲಿತವರು ಬೇರೆಯವರಿಗೆ ಹೇಳಿಕೊಡಿ ಸಮಾಜಕ್ಕೆ ನಮ್ಮ ಋಣ ತೀರಿಸಿದಾಗ ಮಾತ್ರ ಮಾನವ ಜನ್ಮ ಶ್ರೇಷ್ಠವಾಗುತ್ತದೆ,ಕಲಿತ ಋಣವನ್ನು ಕಲಿಸಿ ಕಳೆಯಬೇಕು,ಮಾತೃ ಭೋಜನದಿಂದ ತಾಯಿ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುತ್ತಾಳೆ,ಸಂಸ್ಕಾರವಂತ ಮಕ್ಕಳು ಈ ದೇಶದ ನಿಜವಾದ ಆಸ್ತಿ,ಪ್ರತಿ ದಿನ ಮುಂಜಾನೆ ಎಲ್ಲರೂ ಯೋಗ ಮಾಡಿ,ಯೋಗದಿಂದ ಉತ್ತಮ ಆರೋಗ್ಯ ದೊರೆಯುತ್ತದೆ,ಆರೋಗ್ಯವಂತ ಜನರು ಈ ಸಮಾಜದ ನಿಜವಾದ ಆಸ್ತಿ ಎಂದು ತಿಳಿಸಿದರು.
ನಾಗೇಂದ್ರರವರು ಸ್ವಾಗತಿಸಿದರು, ಉಮಾರವರು ನಿರೂಪಿಸಿದರು. ಜಯಂತಿರವರು ವಂದಿಸಿದರು.
– ಚಂದ್ರಚೂಡ ಕೆ.ಬಿ.
