ತುಮಕೂರು: ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಶ್ರೀ ಸತ್ಯಸಾಯಿ ಸೇವಾ ಆಶ್ರಮ ಸದಾ ಬದ್ಧವಾಗಿದೆ ಎಂದು ಶ್ರೀ ಸತ್ಯಸಾಯಿ ಸೇವಾಶ್ರಮದ ಮಧುಸೂಧನ್ ಸಾಯಿ ಹೇಳಿದರು.
ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಹಾಗೂ ಕೌಶಲ್ಯಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಕ್ತರ ಕೋರಿಕೆ ಮೇರೆಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆರೋಗ್ಯ ಮತ್ತು ಶಿಕ್ಷಣ ವ್ಯಾಪಾರೀಕರಣಗೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಗುಣಮಟ್ಟದ ಸೇವೆ ಪಡೆಯುವುದು ಕಷ್ಟಕರವಾಗಿದೆ ಎಂದರು.
ಮುದ್ದೇನಹಳ್ಳಿಯ ಶ್ರೀ ಸಾಯಿ ಗ್ರಾಮದಲ್ಲಿರುವ ಧರ್ಮಾಸ್ಪತ್ರೆಯ ಮಾದರಿಯಲ್ಲಿ ಗ್ರಾಮೀಣ ಭಾಗದಲ್ಲಿಯೂ ನುರಿತ ವೈದ್ಯರು ಹಾಗೂ ಸಿಬ್ಬಂದಿಯನ್ನು ಒಳಗೊಂಡ ಸಣ್ಣ ಆಸ್ಪತ್ರೆಗಳನ್ನು ಹಂತ ಹಂತವಾಗಿ ಆರಂಭಿಸುವ ಉದ್ದೇಶವಿದೆ. ತಾಲೂಕು ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಮಟ್ಟದಲ್ಲಿ 50 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ, ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಿಗೆ ಉಚಿತ ಆರೋಗ್ಯ ಸೇವೆಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಮ್ಮ ಮೆಡಿಕಲ್ ಕಾಲೇಜಿನ ನುರಿತ ತಜ್ಞ ವೈದ್ಯರು ನಿಗದಿತ ದಿನಗಳಲ್ಲಿ ಈ ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಲಿದ್ದಾರೆ. ಇದರಿಂದ ಗ್ರಾಮೀಣ ಜನರು ದೂರದ ನಗರಗಳಿಗೆ ತೆರಳುವ ಅನಿವಾರ್ಯತೆ ಕಡಿಮೆಯಾಗಲಿದೆ ಎಂದು ಹೇಳಿದರು.
ಮಧುಗಿರಿ–ದಾಬಸ್ಪೇಟೆ ಹೆದ್ದಾರಿ ವ್ಯಾಪ್ತಿಯಲ್ಲಿ ಆಸ್ಪತ್ರೆ ಆರಂಭಿಸಲು ಜಾಗದ ಹುಡುಕಾಟ ನಡೆಯುತ್ತಿದ್ದು, ಸೂಕ್ತ ಜಾಗ ದೊರೆತ ಕೂಡಲೇ ಆಸ್ಪತ್ರೆ ಆರಂಭಿಸಲಾಗುವುದು. ಶಿರಾ ತಾಲೂಕಿನ ಗಾಣದಹುಣಸೆ ಗ್ರಾಮದಲ್ಲಿರುವ ಸಂಸ್ಥೆಯ ಶಾಲೆಯಲ್ಲಿ ಮುಂದಿನ ವರ್ಷದಿಂದ ಪಿಯು ಶಿಕ್ಷಣ ಆರಂಭಿಸುವ ಗುರಿಯಿದೆ. ಸುಮಾರು 500 ವಿದ್ಯಾರ್ಥಿಗಳಿಗೆ ವಸತಿ ಸಹಿತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸುವ ಉದ್ದೇಶವಿದೆ ಎಂದು ಮಧುಸೂಧನ್ ಸಾಯಿ ತಿಳಿಸಿದರು.

ಆರೋಗ್ಯ ಮತ್ತು ಶಿಕ್ಷಣ ಒದಗಿಸುವುದು ಸರ್ಕಾರದ ಮಾತ್ರ ಜವಾಬ್ದಾರಿಯಲ್ಲ. ಸಮಾಜದ ಹಿರಿಯರು, ರಾಜಕೀಯ ನಾಯಕರು ಹಾಗೂ ವಿವಿಧ ಸಮುದಾಯಗಳ ಮುಖಂಡರು ಸಹಕಾರ ನೀಡಬೇಕು. ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯ ಭೂಮಿ ದೊರೆತರೆ ಒಂದೆರಡು ವರ್ಷಗಳಲ್ಲಿ ಆಸ್ಪತ್ರೆಯನ್ನು ರೋಗಿಗಳ ಸೇವೆಗೆ ಸಿದ್ಧಪಡಿಸಬಹುದು ಎಂದು ಹೇಳಿದರು.
ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಸೇವಾಶ್ರಮದ ವತಿಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಹಲವು ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ. ಅವುಗಳನ್ನು ತುಮಕೂರು ಜಿಲ್ಲೆಗೂ ವಿಸ್ತರಿಸಬೇಕು ಎಂಬುದು ನಮ್ಮ ಕೋರಿಕೆಯಾಗಿದೆ ಎಂದರು.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಾದರಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಶಿರಾ ತಾಲೂಕಿನ ಗಾಣದಹುಣಸೆ ಗ್ರಾಮದಲ್ಲಿರುವ ಶಿಕ್ಷಣ ಸಂಸ್ಥೆಯ ಉನ್ನತೀಕರಣ ಹಾಗೂ ಆರೋಗ್ಯ ಸೇವೆಗಳ ವಿಸ್ತರಣೆಗೆ ಕ್ರಮ ಕೈಗೊಂಡರೆ ಜಿಲ್ಲೆಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ತುಮಕೂರು ಜಿಲ್ಲೆ ಹಲವು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಿಲ್ಲೆಯಾಗಿದ್ದು, ಸುಮಾರು ಐದು ರಾಷ್ಟ್ರೀಯ ಹೆದ್ದಾರಿಗಳು ಜಿಲ್ಲೆಯ ಮೂಲಕ ಹಾದುಹೋಗುತ್ತವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಉಚಿತ ಆಸ್ಪತ್ರೆ ಆರಂಭಿಸಿದರೆ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮಧುಸೂಧನ್ ಸಾಯಿ ಅವರಲ್ಲಿ ಮನವಿ ಮಾಡಿದರು.
ಇದೇ ವೇಳೆ ಮಾಜಿ ಶಾಸಕರಾದ ಡಾ. ಎಸ್. ರಫೀಕ್ ಅಹಮದ್, ಡಾ. ಎಸ್. ಷಫಿ ಅಹಮದ್ ಸೇರಿದಂತೆ ಹಲವರು ಮಧುಸೂಧನ್ ಸಾಯಿ ಅವರ ದರ್ಶನ ಪಡೆದು ಆಶೀರ್ವಾದ ಪಡೆದರು.
