ರಾಮನಾಥಪುರ: ಪಟ್ಟಣದ ಶ್ರೀ ಉತ್ತರಾದಿ ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವ ಶುಕ್ರವಾರ ಸಂಜೆ ಭಕ್ತಿಭಾವದಿಂದ ನೆರವೇರಿತು.
ಕಳೆದ ಹತ್ತಾರು ವರ್ಷಗಳಿಂದ ಶ್ರೀಮಠದಲ್ಲಿ ರಾಯರ ಆರಾಧನಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಆರಾಧನಾ ಮಹೋತ್ಸವದ ಅಂಗವಾಗಿ ಮಠದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕ ಸೇವಾ ಕಾರ್ಯಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ. ದಿನದಿಂದ ದಿನಕ್ಕೆ ಮಠಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ದಾಸೋಹ ಕಾರ್ಯಕ್ರಮವೂ ಭಕ್ತರ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಕಾರಣವಾಗಿದೆ ಎಂದು ಶ್ರೀಮಠದ ವ್ಯವಸ್ಥಾಪಕ ವೇ. ಕನಕಾಚಾರ್ಯರು ತಿಳಿಸಿದರು.
ಆರಾಧನಾ ಮಹೋತ್ಸವದ ಅಂಗವಾಗಿ ಪೇಟೆ ಬೀದಿಯ ಮಕ್ಕಳು ಹಾಗೂ ಶ್ರೀ ವಿದ್ಯಾಮಿಕೇತನ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು. ಮಕ್ಕಳ ನೃತ್ಯ ಪ್ರದರ್ಶನ ಭಕ್ತರ ಮನಸೂರೆಗೊಂಡಿತು.

ಇದೇ ಸಂದರ್ಭದಲ್ಲಿ ಭಕ್ತರು ಸಮರ್ಪಿಸಿದ ವಿವಿಧ ದವಸ-ಧಾನ್ಯಗಳಿಗೆ ಪೂಜೆ ಸಲ್ಲಿಸಲಾಯಿತು. ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳನ್ನು ಶ್ರೀಮಠದ ವ್ಯವಸ್ಥಾಪಕ ವೇ. ಕನಕಾಚಾರ್ಯರು ಗೌರವಿಸಿದರು.
ನಂತರ ಮಠಕ್ಕೆ ಆಗಮಿಸಿದ ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಾಯರ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
– ಕುಮಾರಸ್ವಾಮಿ ಎಂ.ಎನ್.
