ಹಾಸನ: ರಾಜ್ಯ ಸರ್ಕಾರ ಘೋಷಿಸಿರುವ ಬರಪೀಡಿತ ತಾಲೂಕುಗಳ ಪಟ್ಟಿಗೆ ಜಿಲ್ಲೆಯ ಆಲೂರು ಮತ್ತು ಬೇಲೂರು ತಾಲೂಕುಗಳನ್ನು ಸೇರ್ಪಡೆಗೊಳಿಸಬೇಕು ಎಂದು ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಐದು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿರುವುದು ಸ್ವಾಗತಾರ್ಹ. ಆದರೆ ಮಳೆ ಕೊರತೆ ಹಾಗೂ ಬಿತ್ತನೆ ಸಮಸ್ಯೆ ಎದುರಿಸುತ್ತಿರುವ ಆಲೂರು ಮತ್ತು ಬೇಲೂರು ತಾಲೂಕುಗಳನ್ನೂ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಕಳೆದ ಮೇ ತಿಂಗಳಿನಿಂದ ಈವರೆಗೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆಯಾಗಿಲ್ಲ. ಇದರಿಂದ ಬಿತ್ತನೆ ಕಾರ್ಯವೂ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಮಳೆ ಕೊರತೆಯ ಪರಿಣಾಮ ಕಂಡುಬಂದಿದ್ದರೂ, ಸುಮಾರು ಮೂರೂವರೆ ತಿಂಗಳು ಕಳೆದರೂ ಸಮರ್ಪಕವಾಗಿ ಬರ ಘೋಷಣೆ ಮಾಡಿಲ್ಲ ಎಂದು ಅವರು ದೂರಿದರು.
ಆಲೂರು ತಾಲೂಕಿನಲ್ಲಿ ಒಂದು ಹೋಬಳಿ ಹೊರತುಪಡಿಸಿ ಬಹುತೇಕ ಭಾಗಗಳಲ್ಲಿ ಬರದ ಪರಿಸ್ಥಿತಿ ಇದೆ. ಹಾಗಿದ್ದರೂ ಯಾವ ಆಧಾರದ ಮೇಲೆ ಆಲೂರನ್ನು ಬರಪೀಡಿತ ಪಟ್ಟಿಯಿಂದ ಕೈಬಿಡಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ. ಬೇಲೂರು ತಾಲೂಕಿಗೂ ಇದೇ ಪರಿಸ್ಥಿತಿ ಇದ್ದು, ಎರಡೂ ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಬೇಕು ಎಂದು ಹೇಳಿದರು.
ಆಲೂರು ತಾಲೂಕಿನ ವಾಟೆಹೊಳೆ ಜಲಾಶಯ ಕಳೆದ ಎರಡು ವರ್ಷಗಳಿಂದ ಭರ್ತಿಯಾಗುತ್ತಿದ್ದರೂ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ಸಮರ್ಪಕವಾಗಿ ನೀರು ಹರಿಸಿಲ್ಲ. ಕೆರೆಕಟ್ಟೆಗಳನ್ನೂ ತುಂಬಿಸಿಲ್ಲ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಮತ್ತು ಇಚ್ಛಾಶಕ್ತಿ ಇಲ್ಲವೇ ಎಂದು ಪ್ರಶ್ನಿಸಿದರು.
ಬೇಲೂರಿನ ಯಗಚಿ ಜಲಾಶಯದಿಂದ ನೀರು ಹರಿಸಲಾಗಿದೆ ಎಂದು ಹೇಳಲಾಗುತ್ತಿದ್ದರೂ, ಅಂಕಪುರ ಭಾಗಕ್ಕೆ ಇನ್ನೂ ಸಮರ್ಪಕವಾಗಿ ನೀರು ತಲುಪಿಲ್ಲ. ನೀರು ಹರಿಸಿದಂತೆ ಮಾಡಿ ಕಡಿಮೆ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ ಎಂದು ಆರೋಪಿಸಿದರು. ತಾರತಮ್ಯ ಮಾಡದೆ ಯಗಚಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಬೇಕು. ವಾಟೆಹೊಳೆಯಿಂದಲೂ ನಾಲೆಗಳಿಗೆ ನೀರು ಬಿಡಬೇಕು ಎಂದು ಆಗ್ರಹಿಸಿದರು.
ಮುಂದಿನ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಆಲೂರು ಮತ್ತು ಬೇಲೂರನ್ನು ಕಡ್ಡಾಯವಾಗಿ ಸೇರ್ಪಡೆಗೊಳಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ಬೆಳೆ ವಿಮೆ ಮಾಡಿಸಿಕೊಳ್ಳುವ ಅವಧಿಯನ್ನು ಸೆಪ್ಟೆಂಬರ್ವರೆಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಅನಾವೃಷ್ಟಿಯ ಸಮಸ್ಯೆ ಹೆಚ್ಚಾಗಿ ಇಲ್ಲದ ಸೋಮವಾರಪೇಟೆ ತಾಲೂಕನ್ನು ಬರ ಪಟ್ಟಿಗೆ ಸೇರಿಸಿರುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಬರ ಘೋಷಣೆಯಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ಆಲೂರು ಮತ್ತು ಹಾಸನ ಭಾಗದಲ್ಲಿ ರೈತರ ಸಮಸ್ಯೆ ಬಗೆಹರಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್.ಕೆ. ಕುಮಾರಸ್ವಾಮಿ ಎಚ್ಚರಿಸಿದರು.
ಆಲೂರು–ಸಕಲೇಶಪುರ ಕ್ಷೇತ್ರವನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಆಯಾ ಕ್ಷೇತ್ರದ ಹಾಲಿ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಬೇಕಿತ್ತು ಎಂದು ಇದೇ ವೇಳೆ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಚ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್, ತಾಲೂಕು ಅಧ್ಯಕ್ಷರಾದ ಎಸ್. ದ್ಯಾವೇಗೌಡ, ಕೆ.ಎಸ್. ಮಂಜೇಗೌಡ, ಹೊನ್ನವಳ್ಳಿ ಸತೀಶ್, ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ, ಚಿಕ್ಕಡಲೂರು ಬೋರೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
