ಮುಳುಗುತ್ತಿದ್ದವನಿಗೆ ಹುಲ್ಲುಕಡ್ಡಿ ಸಿಕ್ಕಿದವನಂತೆ ಒಳಸೇರಿಕೊಂಡವನಿಗೆ ಮುಂದೆ ಎದುರಾಗಬಹುದಾದ ಸನ್ನಿವೇಶದ ಕಲ್ಪನೆಯೇ ಇರಲಿಲ್ಲ. ಸ್ಥಳೀಯವಲ್ಲದ ಈ ಲಾರಿಯೊಳಗಿನ ವಾತಾವರಣ ಗಾಬರಿ ಹುಟ್ಟಿಸುವಂತಿತ್ತು. ಡ್ರೈವರ್ ಯಾವುದೋ ಮಲಯಾಳಿ ಹಾಡನ್ನು ಸ್ಟೀರಿಯೋದಲ್ಲಿ ಹಾಕಿಕೊಂಡಿದ್ದ. ನನಗೋ ಒಳಗೊಳಗೇ ದಿಗಿಲು. ದಿಕ್ಕಿಲ್ಲದವ ದೆವ್ವ ತಬ್ಬಿಕೊಂಡಂತೆ ಈ ಡ್ರೈವರ್, ಕ್ಲೀನರ್ಗಳ ಕೈಗೆ ಸಿಕ್ಕಿಕೊಂಡೆನಲ್ಲಾ ಎಂದು ಒಳಗೊಳಗೇ ಹಳಹಳಿಸಿದೆ.
ಹೋಟೆಲ್ ಹುಡುಗ ಹೇಳಿದಂತೆ ಹನ್ನೆರಡು ಕಿಲೋಮೀಟರ್ ದೂರದಲ್ಲಿ ಮಾರನಹಳ್ಳಿ ಇರುವುದರಿಂದ ಇವರು ಲಾರಿ ನಿಲ್ಲಿಸಬೇಕಿತ್ತು. ಅರ್ಧ ಗಂಟೆ ಚಲಿಸಿದರೂ ಈ ಲಾರಿ ನಿಲ್ಲಿಸಲಿಲ್ಲ. ಇನ್ನೂ ಮಾರನಹಳ್ಳಿ ಸಿಕ್ಕಿಲ್ಲವೇನೋ ಎಂದು ಸುಮ್ಮನಾದೆ. ಹೋಟೆಲಿನವನು ಅಂದಾಜಿನಲ್ಲಿ ಹೇಳಿದನೇನೋ ಎಂದುಕೊಂಡೆ ಸಹಾ.
ಡ್ರೈವರ್ ತನಗೇನೂ ಗೊತ್ತಿಲ್ಲವೆಂಬಂತೆ ಹಾಡಿಗೆ ತಲೆದೂಗುತ್ತಾ ಹೋಗುತ್ತಲೇ ಇದ್ದ. ಕ್ಲೀನರ್ ನನ್ನ ಮುಖವನ್ನೊಮ್ಮೆ, ಡ್ರೈವರ್ನನ್ನೊಮ್ಮೆ ನೋಡಲಾರಂಭಿಸಿದ. ನನಗ್ಯಾಕೋ ಇವರ ಮೇಲೆ ಅನುಮಾನ ಬರಲಾರಂಭಿಸಿತು. ನನ್ನ ಬೆನ್ನ ಮೇಲಿದ್ದ ಬ್ಯಾಗಿನಲ್ಲಿ ಬೆಲೆಬಾಳುವ ವಸ್ತುಗಳನ್ನು ಕಲ್ಪಿಸಿಕೊಂಡಿದ್ದರೇನೋ. ಬೆಂಕಿಯಿಂದ ಬಾಣಲೆಗೆ ಬಿದ್ದಂತಾಯ್ತಲ್ಲ ಎಂದುಕೊಂಡೆ.
ಇವರಿಗೇನು ಗೊತ್ತು, ನಾನು ಕೆ.ಜಿ. ಸೇಬು, ಬ್ರೆಡ್, ಚಿಪ್ಸ್ಗಳೊಂದಿಗೆ ಕಾಡಿಗೆ ಹೊರಟಿರುವ ಅಲೆಮಾರಿಯೆಂದು! ಅದೇನು ಗೊತ್ತಾಗುವುದಿದ್ದರೂ, ತಿಕದ ಮೇಲೆ ನಾಲ್ಕು ಒದೆಸಿಕೊಂಡು ಲಾರಿಯಿಂದ ಕೆಳಕ್ಕೆ ತಳ್ಳಿಸಿಕೊಂಡು, ಅವರು ನನ್ನ ಬ್ಯಾಗ್ ಜಾಲಾಡಿದಾಗ ತಾನೇ ಎಂದು ಗಾಬರಿ, ಭಯದಿಂದ ತಳಮಳಿಸಿದೆ.
ಆದರೂ ಇದ್ದಬದ್ದ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ, “ನನಗೆ ಮಾರನಹಳ್ಳಿಯಲ್ಲಿ ಇಳಿಯಕ್ಕಿರೋದು; ಅಲ್ಲೇ ಇಳಿಸಿ,” ಎಂದೆ.
ಡ್ರೈವರ್ ಏನೂ ಅರ್ಥವಾಗದಂತೆ ಕ್ಲೀನರ್ ಕಡೆಗೆ ನೋಡಿದ. ಕ್ಲೀನರ್ ತುಳು ಮಿಶ್ರಿತ ಕನ್ನಡದಲ್ಲಿ, “ಎಂಥಾ ಮಾರಾಯ್ರೇ, ನೀವು ಮುಂಚೆಯೇ ಹೇಳೋದಲ್ವಾ? ಅದು ತುಂಬಾ ಹಿಂದೆಯೇ ಆಯ್ತಲ್ಲೋ,” ಎಂದ. ಡ್ರೈವರ್ಗೆ ಮಲಯಾಳಂ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ ಎಂದು ನನ್ನ ಮೇಲೇ ಆರೋಪಿಸತೊಡಗಿದ.
ನನಗೆ ಮೈಯೆಲ್ಲಾ ಉರಿದು, ಮನಸ್ಸಿನಲ್ಲೇ ಬೈದುಕೊಳ್ಳುತ್ತಾ ಲಾರಿಯಿಂದ ಕೆಳಗಿಳಿದು, ಕ್ಲೀನರ್ಗೆ ಹತ್ತು ರೂಪಾಯಿ ನೀಡಿ, ಬಂದ ದಾರಿಯ ವಿರುದ್ಧ ದಿಕ್ಕಿನಲ್ಲಿ ನಡೆಯಲು ಸಿದ್ಧನಾದೆ.
ಲಾರಿಯು ನಿರ್ಗಮಿಸಿದ ನಂತರ ನಿಧಾನವಾಗಿ ವಾಸ್ತವದ ಅರಿವಾಗತೊಡಗಿತು. ಕಂಡು ಕೇಳರಿಯದ ಜಾಗ. ಅದೂ ಕಗ್ಗಾಡಿನ ನಡುವಿನ ಕತ್ತಲಿನ ಸಮಯ. ಇದೊಳ್ಳೆ ಅವಸ್ಥೆಯಾಯ್ತಲ್ಲ ಎಂದುಕೊಂಡು ನನ್ನನ್ನೇ ನಾನು ಹಳಿದುಕೊಂಡೆ.
ಎತ್ತ ನೋಡಿದರೂ ಒಂದೇ ತರ ಕಾಣುತ್ತಿತ್ತು. ಹೆದ್ದಾರಿಯೆಂಬ ಹೆಬ್ಬಾವು ಕಾರ್ಗತ್ತಲಿನೊಳಗೆ ಒಂದಾಗಿ, ಎಂದಿನಂತೆ ಮತ್ತೇರಿ ಮಲಗಿಕೊಂಡಿತ್ತು. ನನಗೋ ಭಯ, ಆತಂಕ, ಗಾಬರಿ, ಗೊಂದಲ, ಕಳವಳ—ಅಷ್ಟೂ ತಾಳಮೇಳೈಸಿ ಗಾಬರಿಯಾಯಿತು. ನನ್ನ ಹೆಜ್ಜೆಯ ಸದ್ದೇ ಅಪರಿಚಿತ ಹಾಗೂ ಅಸಹಜವೆನಿಸಿತು.
ಅಂತೂ ವಿರುದ್ಧ ದಿಕ್ಕಿನಲ್ಲಿ ನಡೆಯುವುದು, ಮಾರನಹಳ್ಳಿ ಬಸ್ಸ್ಟಾಪ್ ತಲುಪಿದ ನಂತರ ಮುಂದಿನದನ್ನು ಯೋಚಿಸುವುದೆಂದು ಮನಸ್ಸನ್ನು ಗಟ್ಟಿಗೊಳಿಸಿಕೊಂಡೆ. ನೀರವ ಕತ್ತಲಿನಲ್ಲಿ ಹತ್ತು-ಹದಿನೈದು ಹೆಜ್ಜೆ ನಡೆಯುವುದು; ಕಳ್ಳನಂತೆ ಯಾರಿಗೂ ಗೊತ್ತಾಗದಂತೆ, ಹೆದರಿಕೆಯಿಂದ ಹಿಂದಕ್ಕೆ ವಾರೆಗಣ್ಣಿನಲ್ಲಿ ತಿರುಗಿ ನೋಡುವುದು. ಹಿಂಭಾಗದಿಂದ ಏನಾದರೂ ನನ್ನ ಜೊತೆಯೇ ಹೆಜ್ಜೆ ಹಾಕಿಕೊಂಡು ಬರುತ್ತಿದೆಯೋ, ಬರೀ ಅಂಗೈ ಮಾತ್ರ ನನ್ನ ಷರಟಿನ ಕಾಲರನ್ನು ಹಿಂಬದಿಯಿಂದ ಹಿಡಿದೆಳೆಯುವುದೋ ಅಥವಾ ನನ್ನ ಬೆನ್ನ ಮೇಲಿದ್ದ ಬ್ಯಾಗಿನ ಝಿಪ್ ಎಳೆಯುವುದೋ ಎಂದು ಭೀತಿಯಿಂದಲೇ ಹೆಚ್ಚು ಸದ್ದಾಗದಂತೆ ಹೆಜ್ಜೆ ಹಾಕತೊಡಗಿದೆ.
ನನ್ನ ಹಿಂದೆಯೇ ಇನ್ನೊಂದು ಜೊತೆ ಬರೀ ಪಾದಗಳು ನನ್ನನ್ನು ಹಿಂಬಾಲಿಸುತ್ತಾ ಬರುತ್ತಿವೆ. ಅದರ ಸದ್ದು ಕೇಳಲೆಂದು ನನ್ನ ನಡಿಗೆಯನ್ನು ವೇಗವಾಗಿ, ಕೆಲವೊಮ್ಮೆ ನಿಧಾನವಾಗಿ ಮಾಡುತ್ತಾ, ಹಿಂಬಾಲಿಸುತ್ತಿದ್ದ ಪಾದಗಳ ಸದ್ದು ಕೇಳಿಸಿಕೊಳ್ಳಲು ಲಯ ತಪ್ಪಿಸಲು ಅನುಕೂಲವಾಗುವಂತೆ ನಡೆಯುತ್ತಿದ್ದೆ.
ದೆವ್ವಗಳೂ ಕೂಡ ತಿರುಗಾಡಲು ಬಾರದಂಥಾ ಸಮಯ. ಆ ಚಳಿಯಲ್ಲೂ ಮೈಯೆಲ್ಲಾ ಆತಂಕದಿಂದ ಬೆವರಿಳಿಸುತ್ತಿತ್ತು.
ನನ್ನ ಬೆನ್ನ ಮೇಲಿದ್ದ ಬ್ಯಾಗ್ನಲ್ಲಿ ಮೂರು ಸೆಲ್ಗಳ ಒಂದು ಸ್ಟೀಲ್ ಟಾರ್ಚ್ ಹಾಗೂ ಉದ್ದನೆಯ ಕತ್ತಿಯಿತ್ತು. ಕಾಡಿನಲ್ಲಿ ದಿನಗಟ್ಟಲೆ ಚಾರಣ ಮಾಡುವವರಿಗೆ ಈ ಎರಡೂ ವಸ್ತುಗಳು ಕುಡಿಯುವ ನೀರಿನಷ್ಟೇ ಮುಖ್ಯ. ಬ್ಯಾಗಿನೊಳಗೆ ಟಾರ್ಚ್, ಕತ್ತಿಯಿದ್ದರೂ ಹೊರತೆಗೆಯಲೂ ಭಯ.
ಝಿಪ್ ತೆಗೆಯಲು ಕೈ ಹಿಂದೆ ಹಾಕಿದರೆ ನನ್ನ ಕೈಯನ್ನೇ ಬೇರೆ ಯಾವುದಾದರೂ ತಣ್ಣನೆಯ ಕೈ ಹಿಡಿದುಕೊಂಡರೇ?! ಹೀಗೆ ತಲೆ ತುಂಬಾ ಭಯಾನಕ ಕಲ್ಪನೆಗಳೇ ತುಂಬಿ ಹರಿಯುತ್ತಿದ್ದವು.
ದೇವರೇ ಗತಿಯೆಂದು ಮೈಯನ್ನೆಲ್ಲಾ ಕಲ್ಲು ಮಾಡಿಕೊಂಡು, ಹಲ್ಲುಗಳನ್ನು ಗಟ್ಟಿಯಾಗಿ ಕಚ್ಚಿಕೊಂಡು, ಕಾಲ್ಬೆರಳುಗಳನ್ನು ಒಂದಕ್ಕೊಂದು ಬಲವಾಗಿ ಮುರಿದುಹೋಗುವಂತೆ ಒತ್ತಿಕೊಂಡು, ಯೋಗಾಭ್ಯಾಸದಲ್ಲಿರುವ ಮಹಾಬಂಧಕ್ಕೆ ಹೋಗಿ, ಆ ಕತ್ತಲಲ್ಲೂ ಏನೂ ಕಾಣಿಸಬಾರದೆಂದು ಅಂಟಿಕೊಳ್ಳುವಂತೆ ಕಣ್ಣುರೆಪ್ಪೆಗಳನ್ನೂ ಅಮುಕಿಕೊಂಡು, ದೆವ್ವಕ್ಕೂ ಗಾಬರಿಯಾಗಬಹುದಾದ ವೇಗದಲ್ಲಿ ಬೆನ್ನ ಮೇಲಿನ ಬ್ಯಾಗನ್ನು ಮುಂದಕ್ಕೆ ತೆಗೆದುಕೊಂಡೆ.
ನನ್ನನ್ನಾವರಿಸಿದ ಭೀತಿ ಎಷ್ಟಿತ್ತೆಂದರೆ, ಟಾರ್ಚ್ ಹೊರತೆಗೆಯಲು ಬ್ಯಾಗ್ನ ಝಿಪ್ ಎಳೆಯಬೇಕಾಗಿದ್ದರಿಂದ ಆ ಸದ್ದಿಗೇನಾದರೂ ಹೆದ್ದಾರಿಯ ಪ್ರೇತಾತ್ಮಗಳಿಗೆ ಎಚ್ಚರವಾಗುತ್ತದೆಯೋ ಅನ್ನಿಸಿ, ಕಣ್ಣು ಮುಚ್ಚಿಕೊಂಡು, ಹಲ್ಲುಗಳನ್ನು ಕಚ್ಚಿಹಿಡಿದು ಬಿಗಿಯಾಗಿಸಿ, ಸ್ವತಃ ಆ ಬ್ಯಾಗಿಗೇ ಝಿಪ್ ತೆರೆದಿದ್ದು ತಿಳಿಯಿತೋ ಇಲ್ಲವೋ ಎನಿಸುವಂತೆ, ಮೇಲ್ಭಾಗದಲ್ಲೇ ಇಟ್ಟಿದ್ದ ಟಾರ್ಚನ್ನು ಹಾಗೂ ಬ್ಯಾಗಿನುದ್ದಕ್ಕೂ ತೂರಿಸಿದ್ದ ಉದ್ದನೆಯ ಕತ್ತಿಯನ್ನು ಎಳೆದುಕೊಂಡು, ಹಿಂದಿನಷ್ಟೇ ಆತಂಕದಿಂದ ಝಿಪ್ ಹಾಕಿದೆ.
ಬ್ಯಾಗನ್ನು ಬೆನ್ನಿಗೇರಿಸಿದವನೇ, ಕತ್ತಿಯ ಹಿಡಿಯೇ ಒಡೆದುಹೋಗುತ್ತದೆಯೇನೋ, ಟಾರ್ಚ್ ನನ್ನ ಕೈಯಲ್ಲಿಯೇ ಲಗ್ಗಿಹೋಗುತ್ತದೆಯೋ ಅನ್ನುವಷ್ಟರ ಮಟ್ಟಿಗೆ ಭಯದಿಂದ ಬಿಗಿಯಾಗಿ ಹಿಡಿದು ದಾಪುಗಾಲು ಹಾಕತೊಡಗಿದೆ.
ನನ್ನ ಮುಂದಕ್ಕೆ ಮಾತ್ರ ಲೈಟ್ ಬಿಟ್ಟುಕೊಂಡು, ಕರೀ ರಸ್ತೆಯನ್ನು ವೈರಿಯೇನೋ ಎನ್ನುವಂತೆ ದಿಟ್ಟಿಸುತ್ತಾ, ಏದುಸಿರು ಬಂದರೂ ಉಸಿರನ್ನು ಸಹಾ ಜೋರಾಗಿ ಬಿಡದೇ, ಬಿಟ್ಟರೆ ಅಕ್ಕಪಕ್ಕ ಸುಳಿದಾಡುತ್ತಿರಬಹುದಾದ ಆತ್ಮಗಳಿಗೆ ಕೇಳಿಸಿದರೆಂಬಂತೆ ಹುಷಾರಾಗಿ ಸದ್ದಾಗದಂತೆ ನಡೆಯುವ ನನ್ನ ಅವಸ್ಥೆಯನ್ನು ವಿವರಿಸುವುದಿರಲಿ, ಅನುಭವಿಸಿಯೇ ತಿಳಿಯಬೇಕು.
ಚಂದಿರ ಮೋಡದ ಮರೆಯಿಂದ ಆಗಾಗ ಇಣುಕಿ ಬೆಳದಿಂಗಳನ್ನು ಚೆಲ್ಲುತ್ತಾ, ಪರಿಸ್ಥಿತಿಯನ್ನು ಮತ್ತೂ ಭಯಾನಕ ಮಾಡುತ್ತಿದ್ದ. ಕಡು ಕತ್ತಲೆಯಿದ್ದೆಡೆ ಇದ್ದಕ್ಕಿದ್ದಂತೆ ಬೆಳಕಿನ ಲಂಬಲಂಬ ಆಕೃತಿಗಳು ಮೂಡಿ, ಮರದ ರೆಂಬೆಗಳ ಅಲುಗಾಟದಿಂದ ಚಲಿಸುವ ನೆರಳುಗಳ ಭೂತದ ಕುಣಿತ ನನ್ನ ಕಲ್ಪನೆಯ ಭಯಕ್ಕೆ ಬೀಭತ್ಸ ದೃಶ್ಯ ಸಂಯೋಜನೆ ಮಾಡತೊಡಗಿತು.
ಟಾರ್ಚಿನ ಬೆಳಕನ್ನೂ ಸಹಾ ರಸ್ತೆಯ ಅಕ್ಕಪಕ್ಕಕ್ಕೆ ಬಿಡುತ್ತಿರಲಿಲ್ಲ. ಎಲ್ಲಿ ಏನು ಕಾಣಿಸುವುದೋ ಎಂಬ ಭಯ.
ಧೈರ್ಯ ತಂದುಕೊಳ್ಳಲು ಹಾಡನ್ನಾದರೂ ಹೇಳಿಕೊಳ್ಳಲೇ ಎಂದರೆ ನೆನಪಿಗೆ ಬರುತ್ತಿರೋದು, “ತಂಗಾಳಿಯಲ್ಲಿ ನಾನು ತೇಲಿ ಬಂದೆ” ಎಂಬ ದೆವ್ವದ ಹಾಡೇ ಆಗಬೇಕೇ?!!! ಪರಿಸ್ಥಿತಿ ಇನ್ನೂ ಬಿಗಡಾಯಿಸಿತು.
ಇದ್ದಕ್ಕಿದ್ದಂತೆ ರಸ್ತೆ ಪಕ್ಕದಿಂದ ಏನೋ ಹೂಂಕರಿಸಿದ ಸದ್ದು!!!
ಬೆವರಿನಿಂದಲೇ ಆದಷ್ಟು ಹೊರಹೋಗಿದ್ದರಿಂದಲೋ ಏನೋ, ಉಚ್ಚೆ ಹೊಯ್ಕಳಲಿಲ್ಲ. ಯಾವುದೋ ಕಾಡುಪ್ರಾಣಿ ದಿನವೂ ತಿರುಗುವ ಗಂಡಿಯಿರಬೇಕು. ಎಂದಿನಂತೆ ರಸ್ತೆ ದಾಟಲು ಬಂದದ್ದು, ನನ್ನನ್ನು ಗಮನಿಸಿ ಸರಕ್ಕನೇ ಹಿಂದೆ ತಿರುಗಿ, ತರಗೆಲೆಗಳ ಮೇಲೆ ಜರಜರ ಸದ್ದು ಮಾಡುತ್ತಾ ಓಡಿ ಹೋಯಿತು.
ಆ ಸದ್ದಿಗೆ ಅಲ್ಲೆಲ್ಲೋ ಮರದ ಮೇಲೆ ನಿದ್ರಿಸುತ್ತಿದ್ದ ಹಕ್ಕಿಗಳೂ ಗಡಬಡಿಸಿ ಎಚ್ಚರಗೊಂಡು, ಬರ್ರನೇ ಹಾರಿ ಹತ್ತಿರದ ಮರಗಳ ಮೇಲೆ ಜಲಜಲ ಸದ್ದು ಮಾಡುತ್ತಾ ಕುಳಿತವು.
ಹೆದರಿದವನ ಮೇಲೆ ಹಾವೆಸೆದಂತಾಯ್ತು!!
ಮುಂದುವರೆಯುವುದು…….

