ಕೊರಟಗೆರೆ:- ಬೆಂಗಳೂರಿನ ಅರಮನೆ ಮೈದಾನದ ಶೃಂಗಾರ ಪ್ಯಾಲೇಸ್ನಲ್ಲಿ ನಡೆದ ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಆರನೇ ರಾಜ್ಯಮಟ್ಟದ ಐಕ್ಯತಾ ಸಮಾವೇಶದಲ್ಲಿ ಕೊರಟಗೆರೆ ತಾಲ್ಲೂಕಿನ ಲಕ್ಷ್ಮಿಪುತ್ರ ವೀರಾಪುರ ಅವರು ರಚಿಸಿರುವ ‘ವೀಳ್ಯದೆಲೆ ಬಳ್ಳಿ–ನನ್ನ ಜೀವನ ಯಾನ’ ಕೃತಿಯನ್ನು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅವರು ಲೋಕಾರ್ಪಣೆ ಮಾಡಿದರು.
ಕೊರಟಗೆರೆ ತಾಲ್ಲೂಕಿನ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಬದುಕಿನೊಂದಿಗೆ ನಿಕಟವಾಗಿ ಬೆಸೆದುಕೊಂಡಿರುವ ಲಕ್ಷ್ಮಿಪುತ್ರ ವೀರಾಪುರ ಅವರ ಜೀವನಾನುಭವಗಳು, ಹೋರಾಟದ ಹಾದಿ ಹಾಗೂ ಸಾಮಾಜಿಕ ಕಳಕಳಿಯನ್ನು ಕೃತಿಯಲ್ಲಿ ದಾಖಲಿಸಲಾಗಿದೆ. ವೈಯಕ್ತಿಕ ಬದುಕಿನ ಅನುಭವಗಳ ಜತೆಗೆ ಸಮಾಜದ ವಿವಿಧ ಆಯಾಮಗಳನ್ನು ಪರಿಚಯಿಸುವ ಪ್ರಯತ್ನವನ್ನು ಕೃತಿಯಲ್ಲಿ ಮಾಡಲಾಗಿದೆ ಎಂದು ಸಮಾವೇಶದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಖ್ಯಾತ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಅವರು ಕೃತಿಗೆ ಮುನ್ನುಡಿ ಬರೆದಿದ್ದು, ಕಲಾವಿದ ಕಂಟಲಗೆರೆ ಸಣ್ಣ ಹೊನ್ನಯ್ಯ ಅವರು ಆಶಯ ನುಡಿ ಹಾಗೂ ಶಿಕ್ಷಣಾಧಿಕಾರಿ ವೇದಮೂರ್ತಿ ಅವರು ಬೆನ್ನುಡಿ ಬರೆದಿದ್ದಾರೆ. ಸಾಹಿತ್ಯ, ಕಲೆ ಹಾಗೂ ಶಿಕ್ಷಣ ಕ್ಷೇತ್ರದ ಗಣ್ಯರ ಬರಹಗಳು ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆಂಜನೇಯ, ಬೌದ್ಧ ಭಿಕ್ಕು ಬಂತೇಜಿ, ರಾಜ್ಯ ಸಮನ್ವಯ ಸಮಿತಿ ಅಧ್ಯಕ್ಷ ಡಿ. ಶಿವಶಂಕರ್, ಪ್ರಧಾನ ಕಾರ್ಯದರ್ಶಿ ಡಾ. ಕೆ. ವಿಜಯಕುಮಾರ್, ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಸಿ. ನರಸಿಂಹಮೂರ್ತಿ, ಎಂಜಿನಿಯರ್ ವಾಸುದೇವ ಪ್ರಸಾದ್, ರೇಷ್ಮೆ ಇಲಾಖೆ ಡಿಡಿಪಿಐ ಲಕ್ಷ್ಮಿನರಸಯ್ಯ, ಶಿಕ್ಷಕ ಜಿ. ತಿಪ್ಪೇಸ್ವಾಮಿ, ಶಿಕ್ಷಕಿ ರೇವತಿ, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಹೆಚ್. ನಾಗರಾಜು, ಉಪಾಧ್ಯಕ್ಷ ಎನ್.ಎ. ಹನುಮಂತರಾಜು, ಕಾರ್ಯದರ್ಶಿ ಕೋಟೆಕಲ್ಲಯ್ಯ ಪಿ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕೊರಟಗೆರೆ ತಾಲ್ಲೂಕಿನ ಲೇಖಕರೊಬ್ಬರ ಕೃತಿ ರಾಜ್ಯಮಟ್ಟದ ಪ್ರಮುಖ ಸಮಾವೇಶದಲ್ಲಿ ಉಪಮುಖ್ಯಮಂತ್ರಿಗಳಿಂದ ಲೋಕಾರ್ಪಣೆಗೊಂಡಿರುವುದು ತಾಲ್ಲೂಕಿನ ಸಾಹಿತ್ಯಾಸಕ್ತರು ಹಾಗೂ ಕನ್ನಡಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಕೃತಿಯು ಓದುಗರಿಗೆ ಜೀವನಾನುಭವಗಳ ಜತೆಗೆ ಸಾಮಾಜಿಕ ಚಿಂತನೆಗೆ ಪ್ರೇರಣೆ ನೀಡಲಿದೆ ಎಂಬ ಆಶಯವನ್ನು ಗಣ್ಯರು ವ್ಯಕ್ತಪಡಿಸಿದರು.
-ಶ್ರೀನಿವಾಸ್ ಕೊರಟಗೆರೆ.
