ಹಾಸನ: ಮನೆಗೊಂದು ಗ್ರಂಥಾಲಯ, ಮನಸ್ಸಿಗೊಂದು ಕೃತಿ ಎಂಬ ಆಶಯದೊಂದಿಗೆ ಹಾಸನ ನಗರದ ವಿದ್ಯಾನಗರದಲ್ಲಿರುವ ಮಾಳೇಟಿರ ಸೀತಮ್ಮ ವಿವೇಕ್ ಅವರ ನಿವಾಸದಲ್ಲಿ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ ಹಾಗೂ ‘ಮನಸ್ಸು’ ಕೃತಿ ಪರಿಚಯ ಕಾರ್ಯಕ್ರಮವನ್ನು ಸೆ. 12ರಂದು ಆಯೋಜಿಸಲಾಗಿದೆ.
ನಗರದ ಎಂ.ಜಿ. ರಸ್ತೆಯ ಜಿಲ್ಲಾ ಕ್ರೀಡಾಂಗಣ ಟೆನ್ನಿಸ್ ಕೋರ್ಟ್ ಎದುರಿನ ವಿಹಂಗಮಧಾಮದ ಮೊದಲ ಮಹಡಿಯಲ್ಲಿರುವ ನಿವಾಸದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಡಾ. ಕುಶಾಲ ಬರಗೂರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಜಾಗೃತ ಸಮಿತಿಯ ಸಂಚಾಲಕರು ಹಾಗೂ ಸಾಹಿತಿಗಳಾದ ಗೊರೂರು ಅನಂತರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಮಾಳೇಟಿರ ಸೀತಮ್ಮ ವಿವೇಕ್ ಅವರ ‘ಮನಸ್ಸು’ ಕೃತಿಯನ್ನು ಲೇಖಕಿ ಹಾಗೂ ಸಮಾಜ ಸೇವಕಿ ಕೆ.ಟಿ. ಜಯಶ್ರೀ ಅವರು ಪರಿಚಯಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಜಾಗೃತ ಸಮಿತಿಯ ಸದಸ್ಯರಾದ ಸುವರ್ಣ. ಸಿ ಹಾಗೂ ಝಲ್ಫಿಕರ್ ಅಹಮದ್ ಭಾಗವಹಿಸಲಿದ್ದಾರೆ.
ಮನೆಗಳಲ್ಲಿ ಪುಸ್ತಕ ಸಂಸ್ಕೃತಿ ಬೆಳೆಸುವ ಹಾಗೂ ಓದುವ ಹವ್ಯಾಸವನ್ನು ಉತ್ತೇಜಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
