ಕೆ.ಆರ್. ಪೇಟೆ: ಹಾಲು ಅಮೃತ ಸಮಾನವಾಗಿದ್ದು, ಹಾಲು ಉತ್ಪಾದಕರು ಯಾವುದೇ ಕಾರಣಕ್ಕೂ ಕಲಬೆರಕೆ ಮಾಡಬಾರದು ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ಹೇಳಿದರು.
ತಾಲ್ಲೂಕಿನ ಶೀಳನೆರೆ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಹಾಲಿಗೆ ಕಲಬೆರಕೆ ಮಾಡುವುದರಿಂದ ಗ್ರಾಹಕರ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ, ಕಾನೂನು ಕ್ರಮಕ್ಕೂ ಒಳಗಾಗಬೇಕಾಗುತ್ತದೆ. ಆಹಾರ ಸುರಕ್ಷತಾ ನಿಯಮಗಳ ಪ್ರಕಾರ ಕಲಬೆರಕೆ ಪ್ರಕರಣಗಳಲ್ಲಿ ದಂಡ ಹಾಗೂ ಜೈಲು ಶಿಕ್ಷೆಗೆ ಅವಕಾಶವಿದೆ. ಆದ್ದರಿಂದ ಉತ್ಪಾದಕರು ಗುಣಮಟ್ಟದ ಹಾಲನ್ನೇ ಡೇರಿಗೆ ಪೂರೈಸಬೇಕು ಎಂದು ಸಲಹೆ ನೀಡಿದರು.

ಹಾಲು ಉತ್ಪಾದಕರು ತಮ್ಮ ಹಸು-ಎಮ್ಮೆ ಸೇರಿದಂತೆ ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳಬೇಕು. ಸಾಲ ಮಾಡಿ ಸಾವಿರಾರು ರೂಪಾಯಿ ವೆಚ್ಚದಲ್ಲಿ ರಾಸುಗಳನ್ನು ಖರೀದಿಸುವ ರೈತರಿಗೆ, ಅನಿರೀಕ್ಷಿತವಾಗಿ ರಾಸುಗಳು ಮೃತಪಟ್ಟರೆ ವಿಮೆ ನೆರವು ಆರ್ಥಿಕವಾಗಿ ಸಹಕಾರಿಯಾಗಲಿದೆ ಎಂದು ಹೇಳಿದರು.
ಇಂದಿನ ತಂತ್ರಜ್ಞಾನ ವ್ಯವಸ್ಥೆಯಲ್ಲಿ ರೈತರು ಡೇರಿಗೆ ಪೂರೈಸಿದ ಹಾಲಿನ ಪ್ರಮಾಣ ಹಾಗೂ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮೊಬೈಲ್ನಲ್ಲೇ ವೀಕ್ಷಿಸಲು ಸಾಧ್ಯವಾಗುತ್ತಿದೆ. ಕೆಎಂಎಫ್ ಮೂಲಕ ಇಂತಹ ವ್ಯವಸ್ಥೆಗಳನ್ನು ಜಾರಿಗೆ ತರಲಾಗುತ್ತಿದ್ದು, ಹಾಲು ಉತ್ಪಾದಕರಿಗೆ ಹೆಚ್ಚಿನ ಪಾರದರ್ಶಕತೆ ದೊರೆಯುತ್ತಿದೆ ಎಂದರು.
ಸಂಘದ ಮೇಲ್ವಿಚಾರಕರು ಮಾತನಾಡಿ, ಗ್ರಾಮದ ಡೇರಿಯನ್ನು ಉಳಿಸಿ ಬೆಳೆಸುವುದು ಹಾಲು ಉತ್ಪಾದಕರ ಕೈಯಲ್ಲಿದೆ. ಉತ್ಪಾದಕರು ಗುಣಮಟ್ಟದ ಹಾಲನ್ನು ಹೆಚ್ಚಿನ ಪ್ರಮಾಣದಲ್ಲಿ ಡೇರಿಗೆ ಪೂರೈಸಿದಷ್ಟೂ ಸಂಘಕ್ಕೆ ಆದಾಯ ಹೆಚ್ಚಾಗಲಿದೆ ಎಂದು ತಿಳಿಸಿದರು.

2025-26ನೇ ಸಾಲಿನಲ್ಲಿ ಹೊನ್ನೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವು ಸುಮಾರು ₹4.98 ಲಕ್ಷ ಆದಾಯ ಗಳಿಸಿದೆ. ಇದೇ ರೀತಿ ಗುಣಮಟ್ಟದ ಹಾಲನ್ನು ಪೂರೈಸುವುದನ್ನು ಮುಂದುವರಿಸಿದರೆ ಸಂಘದ ಆದಾಯ ಮತ್ತಷ್ಟು ಹೆಚ್ಚಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷೆ ಜಯಮ್ಮ, ನಿರ್ದೇಶಕರಾದ ಸುಜಾತಾ, ಪ್ರಮೀಳಾ, ದಿನಾಮಣಿ, ಕಲಾವತಿ, ವಿಜಯಲಕ್ಷ್ಮಿ, ರತ್ನ, ಪಾರ್ವತಮ್ಮ, ಯಶೋಧ, ಕಾರ್ಯದರ್ಶಿ ಚಂದುರಾಣಿ, ಹಾಲು ಪರೀಕ್ಷಕಿ ಲಕ್ಷ್ಮಿ ಸೇರಿದಂತೆ ಸಂಘದ ಶೇರುದಾರರು ಹಾಗೂ ಗ್ರಾಮ ಮುಖಂಡರು ಉಪಸ್ಥಿತರಿದ್ದರು.
