ಏನಾದರಾಗಲಿ ಎಂದು ಬ್ಯಾಗಿನಿಂದ ಚಿಪ್ಸ್ ಪ್ಯಾಕೆಟ್ ಹೊರತೆಗೆದು, ನಾನಿನ್ನೂ ಇದ್ದೇನೆ ಎಂಬ ಫೀಲಿಂಗಾದರೂ ಇರಲಿ ಎಂದು ತಿನ್ನತೊಡಗಿದೆ. ಇದ್ದಕ್ಕಿದ್ದಂತೆ ‘ಗಂವ್’ ಎಂಬ ಸದ್ದಿನೊಡನೆ ಪುಟ್ಟ ಬಡಕಲು ನಾಯಿಯೊಂದು ಕಾಲ ಸಮೀಪವೇ ತನ್ನ ಚೂಪಾದ ಹಲ್ಲುಗಳನ್ನು ತೋರಿಸುತ್ತಾ ದಾರಿಗಡ್ಡ ಬರಬೇಕೇ?
ಸುಮ್ಮನೆ ಕಾಲು ಗಂಟೆ ನಿಂತಲ್ಲೇ ನಿಂತಿದ್ದರೆ, ನಿಂತ ನಿಲುವಿನಲ್ಲಿಯೇ ಬೊಗಳಿ ಬೊಗಳಿಯೇ ಸಾಯುವಂತೆ ಕಾಣುತ್ತಿತ್ತು. ಮುಗಿಯದ ಕತ್ತಲಲ್ಲಿ, ಕೊನೆಯಿಲ್ಲದ ದಾರಿಯಲ್ಲಿ ಒಬ್ಬಂಟಿಯಾಗಿ ಹೀಗೇ ನಿರಂತರ ಗಾಬರಿ–ಗೊಂದಲದಲ್ಲಿ ನಡೆಯುತ್ತಿದ್ದವನಿಗೆ ಧಿಗ್ಗನೆ ಗಾಬರಿ ಬೀಳಿಸಿದ್ದು ಆ ಸದ್ದು.
ಆಗಲೋ ಈಗಲೋ ಸಾಯುವಂತಿದ್ದ ಬಡಕಲು ನಾಯಿಯೊಂದು ತನಗೊಂದಕ್ಕೆ ಬಾಯಿಯಿರುವುದು ಎನ್ನುವಂತೆ, ಅಗಾಧ ಶಿರಾಡಿ ಘಾಟಿಯನ್ನೇ ನುಂಗುವಂತೆ ಬೊಗಳತೊಡಗಿತು. ವರ್ಷಗಳಿಂದ ಬೊಗಳಲು ಅವಕಾಶವೇ ಸಿಕ್ಕಿರಲಿಲ್ಲವೇನೋ ಎಂಬಂತೆ, ಭೂಮ್ಯಾಕಾಶಗಳನ್ನೂ ಒಂದು ಮಾಡುವಂತೆ ಹಲ್ಲನ್ನು ಕಿಸಿದುಕೊಂಡು, ನನ್ನಿಂದ ಕೇವಲ ಎರಡೇ ಅಡಿ ದೂರದಲ್ಲಿ ನಿಂತು, ನನಗೆ ಒಂದೂ ಹೆಜ್ಜೆ ಮುಂದಿಡದಂತೆ ತಡೆ ಹಾಕಿತ್ತು.
ಗಾಬರಿ, ದಿಗ್ಭ್ರಮೆ, ಭಯದಲ್ಲಿ ನಿಂತಿದ್ದ ನನಗೆ ಒಂದು ರೀತಿಯ ಸಮಾಧಾನ ಸಿಗಲಾರಂಭಿಸಿತು. ಈ ಗೊಂಡಾರಣ್ಯದಲ್ಲಿ ಜನರಿಗೆ ಅಡ್ಡಗಟ್ಟಿ ಬೊಗಳುವ ನಾಯಿಯಿದೆ ಎಂದರೆ, ಇಲ್ಲೆಲ್ಲೋ ಮನುಷ್ಯರ ವಾಸ್ತವ್ಯವಿದೆಯೆಂದೇ ಅರ್ಥ. ಅನಿರೀಕ್ಷಿತವಾದ ನಾಯಿ ಪ್ರಹಾರಕ್ಕೆ ನಾನು ಆಘಾತಗೊಂಡರೂ, ನಾಯಿಯಿದ್ದ ಮೇಲೆ ಮನುಷ್ಯರ ವಾಸ್ತವ್ಯ ಇಲ್ಲೇ ಎಲ್ಲೋ ಇರಬಹುದೆಂಬ ಆಸೆ ಇಣುಕಿತು. ಅತ್ತ ಘಾಟಿಯೂ ಅಲ್ಲ, ಇತ್ತ ಘಟ್ಟವೂ ಅಲ್ಲದ ಈ ಅಂತರಾಳದಲ್ಲಿ ಅದ್ಯಾವನು ಮನೆ ಕಟ್ಟಿಕೊಂಡಿದ್ದಾನೋ ಎಂದು ಕುತೂಹಲ ಮೂಡಿತು.
ಇನ್ನೇನು ಕಚ್ಚಿಯೇಬಿಡುತ್ತದೆ ಎನ್ನುವಷ್ಟರ ಮಟ್ಟಿಗೆ ಮೈಮೇಲೆ ನೆಗೆಯುವಂತೆ ಕಾಣುತ್ತಿದ್ದ ನಾಯಿಮರಿಯ ಮುಖಕ್ಕೇ ಟಾರ್ಚ್ ಹಾಕಿ, ಕಚ್ಚಿಸಿಕೊಳ್ಳದಂತೆ ಸರ್ಕಸ್ ಮಾಡಲು ಶುರು ಮಾಡಿದ್ದೆ. ನಾಲ್ಕಾರು ಚಿಪ್ಸ್ಗಳನ್ನು ಎಸೆದು ನೋಡಿದೆ. ಆ ನಾಯಿಮರಿಗೆ ನನ್ನ ಮೇಲೆ ಎಷ್ಟು ರೋಷವಿತ್ತೆಂದರೆ, ಚಿಪ್ಸ್ಗಳನ್ನು ಮೂಸಿಯೂ ನೋಡದೆ, ಅದರ ಮೇಲೆಯೇ ನಿಂತು ಎಗರಿ ಎಗರಿ ಬೀಳುತ್ತಿತ್ತು.
ನನಗೆ ಒಂದು ಹೆಜ್ಜೆಯನ್ನೂ ಮುಂದೆ ಎತ್ತಿಡದಂತೆ ತಡೆದಿದ್ದ ನಾಯಿಮರಿಯ ಹಿಂಭಾಗದಿಂದ ಕತ್ತಲಿನಲ್ಲಿ ಏನೋ ‘ಕರ್ರ್… ಗಟಗಟ… ಕ್ರೀಂಚ್’ ಎಂಬ ಶಬ್ದ ಬಂದಂತಾಯ್ತು. ತಗಡಿನ ಗೇಟನ್ನು ತೆರೆದಂತೆ ಅನ್ನಿಸಿತು. ಆ ಕತ್ತಲಿನಲ್ಲಿ ಏನೂ ಕಾಣಿಸುತ್ತಿರಲಿಲ್ಲ. ಯಾರೋ ಕೆಮ್ಮಿ ಕ್ಯಾಕರಿಸಿದಂತಾಯ್ತು.
ನಾಯಿಮರಿ ಅತ್ತಕಡೆ ಒಮ್ಮೆ ಹಿಂತಿರುಗಿ ನೋಡಿ, ಇನ್ನೂ ಉತ್ತೇಜನಗೊಂಡು ಎಗರಾಡತೊಡಗಿತು. ಅಷ್ಟರಲ್ಲಿ ನನ್ನ ಎಡಭಾಗದಿಂದ ಯಾರೋ ಕೆಮ್ಮಿ, ಕ್ಯಾಕರಿಸಿ ಉಗಿದ ಸದ್ದಾಗಿ, ತಟ್ಟನೆ ಅತ್ತಕಡೆ ತಿರುಗಿದೆ.
ಸುಮಾರು ಐದು ಅಡಿ ಎತ್ತರದ ವ್ಯಕ್ತಿಯೊಬ್ಬರು ಕೈಯಲ್ಲಿ ಕ್ವಾರ್ಟರ್ ಬಾಟಲಿಯಿಂದ ಮಾಡಿದ ಸೀಮೆಎಣ್ಣೆ ದೀಪವನ್ನು ಹಿಡಿದು ನನ್ನೆಡೆಗೆ ಬರತೊಡಗಿದರು. ತೀರಾ ನನ್ನ ಮುಖದ ಸಮೀಪವೇ ದೀಪ ತಂದು, ಮನುಷ್ಯ ಪ್ರಾಣಿ ಹೌದೋ ಅಲ್ಲವೋ ಎಂದು ಖಚಿತಪಡಿಸಿಕೊಂಡರು. ಅದ್ಯಾವುದೋ ನನಗರ್ಥವಾಗದ ಭಾಷೆಯಲ್ಲಿ ನನ್ನ ಪೂರ್ವಾಪರಗಳನ್ನು ವಿಚಾರಿಸತೊಡಗಿದರು.
ಕೈಯಲ್ಲಿ ಕ್ವಾರ್ಟರ್ ಬಾಟಲಿಯ ಸೀಮೆಎಣ್ಣೆ ದೀಪ ಹಿಡಿದ ವ್ಯಕ್ತಿರೂಪದ ಆಕೃತಿಯೊಂದು, ದೀಪವನ್ನು ತಲೆಯ ಪಕ್ಕಕ್ಕಿಟ್ಟುಕೊಂಡು ಕತ್ತಲಲ್ಲಿ ನನ್ನನ್ನುದ್ದೇಶಿಸಿ, ‘ಯಾರು?’ ಎಂದಿತು.
ನಾನು ಮಾತನಾಡಲಿಲ್ಲ. ಇನ್ನೂ ದೆವ್ವದ ಗುಂಗಿನಲ್ಲಿದ್ದ ನಾನು, ಆ ಆಕೃತಿ ಮೂರು ಬಾರಿ ‘ಯಾರು?’ ಎನ್ನಲಿ ಎಂದು ಕಾಯ್ದೆ. ಎರಡನೇ ಬಾರಿ ‘ಯಾರು?’ ಎನ್ನುವ ದನಿ ಇನ್ನೂ ಗಡುಸಾಗಿತ್ತು. ಮೂರನೇ ಬಾರಿ ಗದರಿಸುವಂತಿತ್ತು.
ಆಗ ಬಾಯ್ಬಿಟ್ಟ ನಾನು, ನನ್ನ ಮಾರನಹಳ್ಳಿ ಯಾತ್ರೆಯ ಬಗ್ಗೆ ತಿಳಿಸಿದೆ. ಆ ಆಕೃತಿ ನಾಯಿಯನ್ನು ‘ಹಚಾ’ ಎಂದು ಕೂಡ ಎನ್ನದೇ ಸೀದಾ ಹಿಂದೆ ಹೋಗಿ, ಅದೇ ‘ಕರ್ರ್… ಗಟಗಟ… ಕ್ರೀಂಚ್’ ಎಂಬ ಸದ್ದಿನೊಂದಿಗೆ ಬೆಳಗಿನ ಬಾಗಿಲೊಂದನ್ನು ತೆರೆಯಿತು.
ನಾಯಿ ನಿರಂತರವಾಗಿ ತನ್ನ ಬೊಗಳುವಿಕೆಯನ್ನು ಮುಂದುವರೆಸಿತ್ತು. ಅದನ್ನೊಮ್ಮೆ ಅವನದೇ ಭಾಷೆಯಲ್ಲಿ ಗದರಿಸಿದ. ಮತ್ತಾದರೂ ನಾಯಿ ತನ್ನ ಕಾಯಕವನ್ನು ಮುಂದುವರೆಸಿದ್ದರಿಂದ, ತನ್ನ ಕೈಯಲ್ಲಿ ದೀಪವಿರುವುದನ್ನೇ ಮರೆತು ಕೈ ಬೀಸಿದ. ದೀಪ ಪಳಕ್ಕೆಂದು ಆರಿಹೋಗಿ, ಇದ್ದ ಅಲ್ಪಸ್ವಲ್ಪ ಬೆಳಕೂ ನಂದಿಹೋಯಿತು.
ತಾನು ಬಂದೆಡೆಗೆ ತಿರುಗಿ, ಅದೇನೋ ನನಗೆ ತಿಳಿಯದ ಭಾಷೆಯಲ್ಲಿ ಏನೆನ್ನನ್ನೋ ಕೂಗಿ ಹೇಳಿದ. ಹೆಚ್ಚಿನಾಂಶ ಬೆಂಕಿಪೊಟ್ಟಣ ತರಲೆಂದು ಕೂಗಿದನೇನೋ! ಮತ್ತೆ ನನ್ನೆಡೆಗೆ ತಿರುಗಿ, ನನ್ನ ಟಾರ್ಚ್ ಬೆಳಕಿನಲ್ಲೇ ಅವನದೇ ಆದ ಭಾಷೆಯಲ್ಲಿ ಸಂಪರ್ಕ ಸಾಧಿಸಲು ಪ್ರಯತ್ನಿಸಲಾರಂಭಿಸಿದ.
ಅವನ ಹಿಂಭಾಗದ ಕತ್ತಲೆಯಿಂದ ದೀಪವೊಂದು ನಿಧಾನವಾಗಿ ನಮ್ಮೆಡೆಗೆ ಬರತೊಡಗಿತು. ಸುಮಾರು ನಲವತ್ತರ ಪ್ರಾಯದ ಹೆಂಗಸು, ಜೊತೆಗೆ ಹದಿನಾರು–ಹದಿನೇಳರ ತರುಣಿಯೊಬ್ಬಳು, ಅಚ್ಚರಿಯ ಕಣ್ಣುಗಳನ್ನು ತೆರೆದುಕೊಂಡು ನನ್ನೆಡೆಗೆ ನೋಡುತ್ತಾ ಬಂದರು. ಅಲ್ಲೇ ಎಲ್ಲೋ ಹತ್ತಿರದ ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದುದರಿಂದ, ಅವರಿಬ್ಬರಿಗೆ ಅಲ್ಪಸ್ವಲ್ಪ ಕನ್ನಡ ಬರುತ್ತಿತ್ತು.
ಹೊರಗೆ ಬಂದ ಗಂಡಸು ಈಗ ಸ್ವಲ್ಪ ಅಧಿಕಾರವಾಣಿಯಿಂದ ನನ್ನನ್ನು ಯಾರು, ಏನು, ಎತ್ತ ಎಂಬ ಎಲ್ಲಾ ವೃತ್ತಾಂತವನ್ನು ತನ್ನ ಮಲಯಾಳಿ ಮಿಶ್ರಿತ ಕನ್ನಡದಲ್ಲಿ ಕೇಳಿ ತಿಳಿದುಕೊಂಡ.
ಹಾಗೂ ಹೀಗೂ ಮಾಡಿ ನನ್ನ ಪ್ರಯಾಣದ ಬಗ್ಗೆ ಅವರಿಗೆ ತಿಳಿಸಿ, ರೈಲ್ವೆ ಹಾದಿಯ ವಿವರ ಪಡೆದೆ. ನಂತರ, “ನಿಮಗೆ ರೈಲ್ವೆ ಟ್ರ್ಯಾಕ್ಗೆ ನೇರವಾಗಿ ಹೋಗಬೇಕೆಂದರೆ ಹೀಗೇ ಸುಮಾರು ಎರಡು ಕಿಲೋಮೀಟರ್ ರಸ್ತೆಯಲ್ಲಿಯೇ ಹೋಗಿ, ಬಲಕ್ಕೆ ತಿರುಗಿ ದನ ತಿರುಗಾಡುವ ಕಾಲುದಾರಿಯಲ್ಲಿ ಹೋದರೆ ರೈಲ್ವೆ ಸೇತುವೆಯೊಂದು ಕಾಣುತ್ತೆ,” ಎಂದ.
ಆ ತರುಣಿಯೂ, “ನಾವು ನಿಂತಲ್ಲಿಂದ ಸಕಲೇಶಪುರದೆಡೆಗೆ ಎರಡು ಕಿಲೋಮೀಟರ್ ನಡೆದರೆ, ಬಲಭಾಗದಲ್ಲಿ ದನ ತಿರುಗಾಡಿ ಆಗಿರುವ ದಾರಿಯೊಂದಿದೆ. ಅದರಲ್ಲೇ ಮುಂದೆ ಹೋದರೆ ಈಚಲಹರ ಸಿಗುತ್ತದೆ. ಹರ ಹತ್ತಿ ಇಳಿದರೆ ರಸ್ತೆ ಎರಡು ಕವಲಾಗುತ್ತದೆ. ಬಲದಾರಿಯಲ್ಲಿ ಹೋದರೆ ಒಂದು ಹೊಳೆ ಸಿಗುತ್ತೆ. ಆ ಹೊಳೆಯ ಮೇಲೆಯೇ ರೈಲ್ವೆ ಸೇತುವೆ ಹಾದುಹೋಗಿದೆ,” ಎಂಬ ವಿವರಣೆಯನ್ನು ಸವಿಸ್ತಾರವಾಗಿ ಹೇಳಿದಳು.
ಅವರಿಂದ ಬೀಳ್ಕೊಂಡು ನಾನು ಹೊರಡುವಷ್ಟರಲ್ಲಿ, ಬೆಳಗಾಗುವ ಲಕ್ಷಣಗಳು ಪ್ರಾರಂಭವಾಗಿದ್ದವು.
ಮುಂದುವರೆಯುವುದು…….!

