ಕೆ.ಆರ್.ಪೇಟೆ: ಮಿತಿ ಮೀರಿ ಕಬ್ಬು ತುಂಬಿ ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಡಬಲ್ ಟ್ರೈಲರ್ ಟ್ರ್ಯಾಕ್ಟರ್ ಹರಿದು ಬೆಳಗಾವಿ ಮೂಲದ ಯುವಕ ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾದ ಘಟನೆ ಕೆ. ಆರ್ ಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಕುಂದನಹಳ್ಳಿ ಗೇಟ್ ಬಳಿ ನಡೆದಿದೆ.
ಮೃತ ಯುವಕ ಕಬ್ಬು ಕಟಾವು ಮಾಡುವ ಕಾರ್ಮಿಕ ಎಂದು ಶಂಕಿಸಲಾಗಿದೆ ಮೃತ ಯುವಕ ಬೆಳಗಾವಿ ಮೂಲದವನಾಗಿದ್ದು, ಡಬಲ್ ಟ್ರೈಲರ್ ನಲ್ಲಿ ಅತಿಯಾಗಿ ಕಬ್ಬು ತುಂಬಿಕೊಂಡು ಮಾಕವಳ್ಳಿಯ ಹೇಮಗಿರಿ ಶುಗರ್ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆಯಿಂದ ಯುವಕನ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ತಾಲ್ಲೂಕಿನಲ್ಲಿ ಈ ಡಬಲ್ ಟ್ರೈಲರ್ ಟ್ರ್ಯಾಕ್ಟರ್ ಗಳ ಹಾವಳಿ ಮಿತಿ ಮೀರಿದೆ. ಬಹುತೇಕ ಮಹಾರಾಷ್ಟ್ರ ಮೂಲದ ಈ ಡಬಲ್ ಟ್ರೈಲರ್ ಟ್ರ್ಯಾಕ್ಟರ್ ಗಳು ಮಿತಿಮೀರಿ ಕಬ್ಬು ತುಂಬಿಕೊಂಡು ರಸ್ತೆಯಲ್ಲಿ ಸಂಚರಿಸುವುದರಿಂದ ತಾಲ್ಲೂಕಿನಲ್ಲಿ ಈಗಾಗಲೇ ಹಲವು ಅಪಘಾತಗಳು ಸಂಭವಿಸಿವೆ.

ಅತಿಯಾದ ಕಬ್ಬು ತುಂಬುವುದರಿಂದ ರಸ್ತೆದುದ್ದಕ್ಕೂ ಕಬ್ಬು ಚೆಲ್ಲಿ ರಸ್ತೆಪಾಲಾಗಿ, ರೈತರು ಬೆಳೆದ ಬೆಳೆ ರಸ್ತೆಯಲ್ಲೇ ಹಾಳಾಗಿ ರೈತರ ಬದುಕು ಮೂರಾಬಟ್ಟೆಯಾಗುತ್ತಿದೆ.ಜೊತೆಗೆ ಎಲ್ಲೆಂದರಲ್ಲಿ ಟ್ರ್ಯಾಕ್ಟರ್ ಗಳನ್ನು ನಿಲ್ಲಿಸಿ ವಾಹನ ಸವಾರರಿಗೆ,ಶಾಲಾ ಮಕ್ಕಳಿಗೆ ತೀವ್ರ ತೊಂದರೆ ನೀಡುತ್ತಿದ್ದು, ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿವೆ.
ಇಷ್ಟೆಲ್ಲಾ ಅನಾಹುತ ಸೃಷ್ಟಿಸುತ್ತಿರುವ ಈ ಡಬಲ್ ಟ್ರೈಲರ್ ಟ್ರ್ಯಾಕ್ಟರ್ ಗಳ ವಿರುದ್ಧ ಸಂಬಂಧಪಟ್ಟ ಇಲಾಖೆ ಹಾಗೂ ಕಾರ್ಖಾನೆ ಆಡಳಿತ ಮಂಡಳಿ ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಹಾಗೂ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸದ್ಯ ಘಟನಾ ಸ್ಥಳಕ್ಕೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಮೃತದೇಹವನ್ನು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ, ಮೃತ ಯುವ ಕಾರ್ಮಿಕನ ಮಾಹಿತಿ ಕಲೆಹಾಕಿ ಕುಟುಂಬಸ್ಥರಿಗೆ ಮಾಹಿತಿ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
