ಕೊರಟಗೆರೆ: ಪುರಾಣ ಮತ್ತು ಇತಿಹಾಸದಲ್ಲಿ ಮಹತ್ವ ಪಡೆದಿರುವ ಕೊರಟಗೆರೆ ತಾಲ್ಲೂಕಿನ ಶ್ರೀ ಕ್ಷೇತ್ರ ಸಿದ್ಧರಬೆಟ್ಟವು ಸಾವಿರಾರು ವರ್ಷಗಳಿಂದ ಭಕ್ತರು, ಸಾಧಕರು ಹಾಗೂ ತಪಸ್ವಿಗಳಿಗೆ ಆಧ್ಯಾತ್ಮಿಕ ನೆಲೆಯಾಗಿ ಪ್ರಸಿದ್ಧಿ ಪಡೆದಿದೆ. ಶ್ರೀ ಗುರು ಸಿದ್ದೇಶ್ವರ ಸ್ವಾಮಿಗಳ ಕೃಪಾಕಟಾಕ್ಷದಿಂದ ಪಾವನಗೊಂಡಿರುವ ಈ ಕ್ಷೇತ್ರವು ಭಕ್ತರ ನಂಬಿಕೆ ಮತ್ತು ಆಧ್ಯಾತ್ಮಿಕ ಸಾಧನೆಗಳಿಗೆ ಆಶ್ರಯಸ್ಥಾನವಾಗಿದೆ.
ಸದ್ಭಕ್ತರ ಅಪೇಕ್ಷೆ ಹಾಗೂ ಶ್ರೀಮದ್ ರಂಭಾಪುರಿ ಜಗದ್ಗುರುಗಳ ದೂರದೃಷ್ಟಿ ಮತ್ತು ದಿವ್ಯ ಸಂಕಲ್ಪದ ಫಲವಾಗಿ, ವೀರಶೈವ ಪಂಚಪೀಠಗಳಲ್ಲಿ ಒಂದಾದ ಶ್ರೀಮದ್ ರಂಭಾಪುರಿ ಪೀಠದಿಂದ ಸಿದ್ಧರಬೆಟ್ಟದಲ್ಲಿ ಬಾಳೆಹೊನ್ನೂರು ಖಾಸಾ ಶಾಖಾ ಮಠವನ್ನು ಸ್ಥಾಪಿಸಲಾಯಿತು. ಪೂಜ್ಯ ಶ್ರೀ ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ ಅವರನ್ನು ಪ್ರಥಮ ಮಠಾಧಿಪತಿಗಳಾಗಿ ನಿಯುಕ್ತಿಗೊಳಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿ ಹಾಗೂ ಲೋಕಕಲ್ಯಾಣದ ಕಾರ್ಯಗಳಿಗೆ ಭದ್ರ ಅಡಿಪಾಯ ಹಾಕಲಾಯಿತು.

ನಿರಂತರ ದಾಸೋಹದ ಪರಂಪರೆ
ಪೂಜ್ಯ ಶ್ರೀಗಳ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ನಿತ್ಯ ದಾಸೋಹದ ಪರಂಪರೆಯನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಜಾತಿ, ಧರ್ಮ, ಬಡವ–ಶ್ರೀಮಂತ ಎಂಬ ಯಾವುದೇ ಭೇದವಿಲ್ಲದೆ ಎಲ್ಲ ಭಕ್ತರನ್ನು ಸಮಾನವಾಗಿ ಕಾಣುವ ಮೂಲಕ ಪ್ರಸಾದ ನೀಡಿ ಬೀಳ್ಕೊಡುವ ಶ್ರೀಮಠದ ಪರಂಪರೆ ಗಮನ ಸೆಳೆಯುತ್ತಿದೆ.
ಶ್ರೀಮಠದಲ್ಲಿ ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳ ಜೊತೆಗೆ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮೇಘಾಲಯದ ಬಡ ವಿದ್ಯಾರ್ಥಿಗಳಿಗೂ ಶಿಕ್ಷಣದ ಅವಕಾಶ ಕಲ್ಪಿಸಿರುವುದು ಮಠದ ಸೇವಾ ಕಾರ್ಯಗಳಿಗೆ ಸಾಕ್ಷಿಯಾಗಿದೆ.
ಆರಂಭದಲ್ಲಿ ದಾಸೋಹದಲ್ಲಿ ಭಾಗವಹಿಸುವ ಭಕ್ತರಿಗೆ ಅನ್ನ, ಸಾಂಬಾರು ಹಾಗೂ ಮಜ್ಜಿಗೆ ಪ್ರಸಾದ ವಿತರಿಸಲಾಗುತ್ತಿತ್ತು. ಭಕ್ತರ ಸಂಖ್ಯೆ ಹಾಗೂ ಮಠದ ಸೇವಾ ವ್ಯಾಪ್ತಿ ಹೆಚ್ಚಾದ ಹಿನ್ನೆಲೆಯಲ್ಲಿ ದಶಮಾನೋತ್ಸವದ ಸಂದರ್ಭದಲ್ಲಿ ದಾಸೋಹ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಲಾಯಿತು. ಬೆಳಗ್ಗೆ 10 ಗಂಟೆಯವರೆಗೆ ಲಘು ಉಪಹಾರ ಹಾಗೂ ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಅನ್ನ, ಸಾರು, ಸಾಂಬಾರು, ಮಜ್ಜಿಗೆ ಹಾಗೂ ಪಾಯಸ ಪ್ರಸಾದ ವಿತರಿಸುವ ವ್ಯವಸ್ಥೆ ರೂಪುಗೊಂಡಿದೆ.

ವಿಶಿಷ್ಟ ಹೋಳಿಗೆ–ತುಪ್ಪ ಆರಾಧನೆ
ಶ್ರೀ ಕ್ಷೇತ್ರ ಸಿದ್ಧರಬೆಟ್ಟದ ಮತ್ತೊಂದು ವಿಶೇಷ ಪರಂಪರೆಯೆಂದರೆ ಶ್ರೀ ಗುರು ಸಿದ್ದೇಶ್ವರ ಸ್ವಾಮಿಗಳಿಗೆ ಹೋಳಿಗೆ–ತುಪ್ಪ ಆರಾಧನೆ ಸಲ್ಲಿಸುವ ಸಂಪ್ರದಾಯ.
ಹಿಂದಿನ ಕಾಲದಲ್ಲಿ ದೂರದ ಊರುಗಳಿಂದ ಭಕ್ತರು ಎತ್ತಿನ ಬಂಡಿಗಳಲ್ಲಿ ಕುಟುಂಬ ಸಮೇತರಾಗಿ ಸಿದ್ಧರಬೆಟ್ಟಕ್ಕೆ ಆಗಮಿಸಿ, ಇಲ್ಲಿಯೇ ಹೋಳಿಗೆ ತಯಾರಿಸಿ ಶ್ರೀ ಗುರು ಸಿದ್ದೇಶ್ವರ ಸ್ವಾಮಿಗಳಿಗೆ ನೈವೇದ್ಯ ಅರ್ಪಿಸುತ್ತಿದ್ದರು. ನಂತರ ಅದನ್ನು ಭಕ್ತರಿಗೆ ದಾಸೋಹವಾಗಿ ವಿತರಿಸಿ ಹರಕೆ ಸಲ್ಲಿಸುತ್ತಿದ್ದರು.
ಆದರೆ ಇತ್ತೀಚಿನ ದಿನಗಳಲ್ಲಿ ಸಮಯದ ಅಭಾವ ಸೇರಿದಂತೆ ವಿವಿಧ ಕಾರಣಗಳಿಂದ ಭಕ್ತರು ವೈಯಕ್ತಿಕವಾಗಿ ಹೋಳಿಗೆ–ತುಪ್ಪ ಆರಾಧನೆ ಮಾಡಿಸುವುದು ಕಡಿಮೆಯಾಗುತ್ತಿದೆ.
ಈ ಪುರಾತನ ಪರಂಪರೆಯನ್ನು ಮುಂದುವರಿಸುವ ಉದ್ದೇಶದಿಂದ ಪೂಜ್ಯ ಶ್ರೀ ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿಗಳವರ ಒತ್ತಾಸೆ ಹಾಗೂ ದಿವ್ಯ ಸಂಕಲ್ಪದ ಮೇರೆಗೆ ಶ್ರೀಮಠದಲ್ಲಿ ನಿತ್ಯ ಹೋಳಿಗೆ–ತುಪ್ಪ ಆರಾಧನೆ ನಡೆಸುವ ಮಹತ್ವದ ಸೇವಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಭಕ್ತರ ಹರಕೆಗಳು ಸಾರ್ಥಕವಾಗಲಿ, ಮನೋರಥಗಳು ಈಡೇರಲಿ ಹಾಗೂ ಲೋಕಕಲ್ಯಾಣ ವೃದ್ಧಿಯಾಗಲಿ ಎಂಬ ಆಶಯದೊಂದಿಗೆ ಈ ಸೇವೆ ಮುಂದುವರಿಯಲಿದೆ.

ದಾಸೋಹಕ್ಕೆ ದಾನಿಗಳಿಂದ ಸಹಕಾರಕ್ಕೆ ಮನವಿ
ನಿತ್ಯ ದಾಸೋಹ ಮತ್ತು ಹೋಳಿಗೆ–ತುಪ್ಪ ಆರಾಧನೆಯ ಶಾಶ್ವತ ನಿರ್ವಹಣೆಗಾಗಿ ಶ್ರೀ ವೀರಭದ್ರೇಶ್ವರ ಸ್ವಾಮಿ ನಿತ್ಯ ದಾಸೋಹ ಸಮಿತಿ ವತಿಯಿಂದ ದೇಣಿಗೆ ಸಂಗ್ರಹ ಕಾರ್ಯ ಆರಂಭಿಸಲಾಗಿದೆ.
ಈ ಪುಣ್ಯ ಕಾರ್ಯದಲ್ಲಿ ಸದ್ಭಕ್ತರು ತಮ್ಮ ಶಕ್ತ್ಯಾನುಸಾರ ಕೈಜೋಡಿಸುವಂತೆ ಶ್ರೀಮಠ ಮನವಿ ಮಾಡಿದೆ.

ಯೋಜನೆಗೆ ₹11 ಲಕ್ಷ ದೇಣಿಗೆ ನೀಡುವವರನ್ನು ‘ಮಹಾಪೋಷಕ ದಾನಿಗಳು’, ₹5 ಲಕ್ಷ ದೇಣಿಗೆ ನೀಡುವವರನ್ನು ‘ಪೋಷಕ ಸದಸ್ಯರು’ ಹಾಗೂ ₹1 ಲಕ್ಷ ದೇಣಿಗೆ ನೀಡುವವರನ್ನು ‘ಸಾಮಾನ್ಯ ಸದಸ್ಯರು’ ಎಂದು ಗೌರವಿಸಲಾಗುವುದು.
₹1 ಲಕ್ಷ ದೇಣಿಗೆ ನೀಡುವ ಭಕ್ತರು ತಮಗೆ ವಿಶೇಷವಾಗಿರುವ ದಿನ—ಜನ್ಮದಿನ, ವಿವಾಹ ವಾರ್ಷಿಕೋತ್ಸವ ಅಥವಾ ತಂದೆ–ತಾಯಿಯ ಸ್ಮರಣಾರ್ಥ ದಿನ—ವನ್ನು ಆಯ್ಕೆ ಮಾಡಿಕೊಂಡು ಆ ದಿನದ ದಾಸೋಹವನ್ನು ತಮ್ಮ ಹೆಸರಿನಲ್ಲಿ ನಡೆಸುವ ಅವಕಾಶ ಕಲ್ಪಿಸಲಾಗಿದೆ. ಅಂದು ಶ್ರೀಮಠದ ವಿದ್ಯಾರ್ಥಿಗಳು ಹಾಗೂ ಆಗಮಿಸುವ ಭಕ್ತರಿಗೆ ದಾಸೋಹ ಸೇವೆ ನಡೆಯಲಿದೆ.
ಪೂಜ್ಯ ಶ್ರೀ ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿಗಳ ದಿವ್ಯ ನೇತೃತ್ವ ಹಾಗೂ ಘನ ಅಧ್ಯಕ್ಷತೆಯಲ್ಲಿ ರೂಪುಗೊಂಡಿರುವ ಈ ಯೋಜನೆಯನ್ನು ಸಾಕಾರಗೊಳಿಸಲು ಸದ್ಭಕ್ತರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡುವಂತೆ ಸಮಿತಿ ಮನವಿ ಮಾಡಿದೆ.
ವರದಿ: ನರಸಿಂಹಯ್ಯ ಹೊಸಕೋಟೆ
