ರಾಮನಾಥಪುರ: ಪರಿಸರ ಸ್ನೇಹಿ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಬಳಸುವ ಮೂಲಕ ಪ್ರಕೃತಿಗೆ ನಮ್ಮದೇ ಆದ ಕೊಡುಗೆ ನೀಡುವುದರ ಜೊತೆಗೆ ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಮಾಜಿ ಸಚಿವ ಹಾಗೂ ಶಾಸಕ ಎ. ಮಂಜು ಹೇಳಿದರು.
ರಾಮನಾಥಪುರದ ಶ್ರೀ ವರದಾನ ಬಸವೇಶ್ವರ ದೇವಾಲಯದಲ್ಲಿ ಗೌರಿ–ಗಣೇಶ ಹಬ್ಬದ ಅಂಗವಾಗಿ ಶ್ರೀ ವರದಾನ ಬಸವೇಶ್ವರ ಭಕ್ತ ಬಳಗದ ವತಿಯಿಂದ ಆಯೋಜಿಸಿದ್ದ 60ನೇ ವರ್ಷದ ಗೌರಿ–ಗಣೇಶ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪೂಜಾ ಕೈಂಕರ್ಯದಲ್ಲಿ ಗೌರವ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ನೋಡುವುದೇ ಸಂತೋಷದ ವಿಚಾರ. ಪಿಒಪಿ ಮೂರ್ತಿಗಳನ್ನು ತ್ವರಿತವಾಗಿ ತಯಾರಿಸಬಹುದಾದರೂ ಅವುಗಳನ್ನು ವಿಸರ್ಜಿಸುವ ಸಂದರ್ಭದಲ್ಲಿ ಪರಿಸರಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿ, ವಿಸರ್ಜಿಸುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಎ. ಮಂಜು ಮೆಚ್ಚುಗೆ ವ್ಯಕ್ತಪಡಿಸಿದರು.
ಜಲ ಸಂಪನ್ಮೂಲಗಳನ್ನು ಸಂರಕ್ಷಿಸುವುದು, ಪ್ರಾಣಿ–ಪಕ್ಷಿಗಳು ಹಾಗೂ ಮಾನವ ಸಂಕುಲಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಹಬ್ಬಗಳನ್ನು ಆಚರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪರಿಸರ ಸ್ನೇಹಿ ರೀತಿಯಲ್ಲಿ ಗೌರಿ–ಗಣೇಶ ಹಬ್ಬವನ್ನು ಆಚರಿಸುವ ಮೂಲಕ ಮುಂದಿನ ಪೀಳಿಗೆಗೂ ಉತ್ತಮ ಪರಿಸರವನ್ನು ಉಳಿಸಿಕೊಡಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅರ್ಚಕ ರಘವೇಂದ್ರ ಭಟ್ ಅವರು ಪೂಜಾ ಕೈಂಕರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀ ವರದಾನ ಬಸವೇಶ್ವರ ಭಕ್ತ ಬಳಗದ ಸದಸ್ಯರಾದ ಪ್ರವೀಣ್, ನಾಗೇಶ್, ಅಭಿಷೇಕ್, ಸಹನಾ, ಪುಷ್ಪ, ಹರೀಶ್, ರಾಧಾಕೃಷ್ಣ, ರಾಮು, ನೀತೀಶ್, ಅರ್ಷಿತ್, ರವಿ, ಸುಭಾಷ್, ಶಿವ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಕುಮಾರಸ್ವಾಮಿ ಎಂ.ಎನ್.
