ತುಮಕೂರು- ನಗರದ ವಿನಾಯಕ ನಗರದಲ್ಲಿ ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ ವತಿಯಿಂದ 50ನೇ ವರ್ಷದ 31 ದಿನಗಳ ಅದ್ಧೂರಿ ಗಣೇಶೋತ್ಸವಕ್ಕೆ ಸೋಮವಾರ ಸಂಜೆ 6 ಗಂಟೆಗೆ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಚಾಲನೆ ನೀಡಲಾಯಿತು.
ಪ್ರತಿ ವರ್ಷವೂ ಒಂದೊಂದು ಪರಿಕಲ್ಪನೆಯೊಂದಿಗೆ ದೃಶ್ಯಾವಳಿಯನ್ನು ಆಯೋಜಿಸಿ ಅದರ ಮಹತ್ವ ತಿಳಿಸುವ ಕಾರ್ಯ ಮಾಡಲಾಗುತ್ತಿದೆ. ಹಬ್ಬಗಳ ಆಚರಣೆ ಹಿನ್ನೆಲೆ ನಮ್ಮ ದೇಹ, ಮನಸ್ಸು, ಭಾವ ಶುದ್ಧಿ ಮಾಡಿಕೊಳ್ಳಬೇಕು ಎಂಬುದಾಗಿದೆ. ದೇವರು ಎಲ್ಲ ಕಡೆ ಇದ್ದಾನೆ. ದೇವರು ಇಲ್ಲದೇ ಇರುವ ಜಾಗವೇ ಇಲ್ಲ. ಆದರೂ ಕೂಡ ದೇವರನ್ನು ಕಾಣಲು ಸಾಧ್ಯವಿಲ್ಲ ಎಂದು ಭಾವಿಸಿ ದೇವಸ್ಥಾನಗಳನ್ನು ದರ್ಶನ ಮಾಡಿದಾಗ ಮನಸ್ಸಿನಲ್ಲಿ ದೈವೀ ಭಾವನೆ ಮೂಡುತ್ತದೆ ಎಂದರು.
ದೇವರು ಕಲ್ಲಲ್ಲಿ, ಮಣ್ಣಲ್ಲಿ ಇಲ್ಲ. ಆದರೆ ನಾವು ನೋಡುವ ಭಾವನೆಯಲ್ಲಿ ದೇವರನ್ನು ಕಾಣಲು ಸಾಧ್ಯ ಎಂದು ಅವರು ಹೇಳಿದರು. ಗಣಪತಿಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನವನ್ನು ಕೊಡಲಾಗಿದೆ. ಯಾವುದೇ ಕೆಲಸ ಮಾಡುವ ಮುನ್ನ ಮೊದಲು ಗಣೇಶನಿಗೆ ಪೂಜೆ ಸಲ್ಲಿಸಿದರೆ ವಿಘ್ನಗಳು ಬರುವುದಿಲ್ಲ ಎಂಬುದು ನಂಬಿಕೆ. ಹಾಗಾಗಿ ವಿಘ್ನೇಶ್ವರನಿಗೆ ಮೊದಲ ಪೂಜೆ ಸಲ್ಲುತ್ತದೆ ಎಂದರು.
ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿಗೆ 50ನೇ ವರ್ಷದ ಸುವರ್ಣ ಸಂಭ್ರಮ. ಈ ಮಂಡಳಿಗೆ ದೊಡ್ಡ ಇತಿಹಾಸವಿದೆ. ಇಲ್ಲಿಗೆ ಅಕ್ಕಪಕ್ಕದ ಜಿಲ್ಲೆಯವರು, ತಾಲ್ಲೂಕಿನವರು ಬಂದು ಗಣೇಶೋತ್ಸವವನ್ನು ವೀಕ್ಷಿಸಿ ಹೋಗುತ್ತಿದ್ದರು. ದೊಡ್ಡ ಇತಿಹಾಸವಿರುವ ಸೇವಾ ಮಂಡಳಿಯಲ್ಲಿ ಹಳೇ ವಿಜೃಂಭಣೆಯ ಗತವೈಭವ ಮತ್ತಷ್ಟು ಮರುಕಳಿಸಲಿ ಎಂಬುದು ನನ್ನ ಆಶಯವಾಗಿದೆ ಎಂದರು.
ಸಿದ್ದಿವಿನಾಯಕ ಸೇವಾ ಮಂಡಳಿಯವರು ಗಣೇಶೋತ್ಸವ ಆಚರಣೆಗೆ ಹೆಚ್ಚು ಹೆಚ್ಚು ಯುವಕರನ್ನು ಜತೆಗೂಡಿಸಿಕೊಳ್ಳುವಂತೆಯೂ ಸಲಹೆ ಮಾಡಿದ ಅವರು, ಸಮಿತಿಯ ಸೇವಾ ಕಾರ್ಯಗಳಿಗೆ ಸದಾ ಕಾಲ ಕೈಜೋಡಿಸುವುದಾಗಿ ಹೇಳಿದರು.
ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿಯ ಅಧ್ಯಕ್ಷ ಪ್ರಭು ಮಾತನಾಡಿ, ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿಯು 1977 ರಲ್ಲಿ ಸ್ಥಾಪನೆಯಾಗಿದ್ದು, ಪ್ರಸ್ತುತ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಹಾಗಾಗಿ ಮುಂಬರುವ ನವೆಂಬರ್ 10 ರಂದು ಮಂಡಳಿಯ ಸುವರ್ಣ ಮಹೋತ್ಸವವನ್ನು ಆಚರಿಸಲು ಮಂಡಳಿಯ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿಯ ಉಪಾಧ್ಯಕ್ಷ ಟಿ.ಹೆಚ್. ಪ್ರಸನ್ನಕುಮಾರ್, ಕಾರ್ಯದರ್ಶಿ ಜಿ.ಎಸ್.ಸಿದ್ದರಾಜು, ಸಹ ಕಾರ್ಯದರ್ಶಿ ಕಲ್ಯಾಣ್ಕುಮಾರ್, ಖಜಾಂಚಿ ಎಂ.ಎನ್. ಉಮಾಶಂಕರ್, ರೇಣುಕ ಪರಮೇಶ್, ನಿರ್ದೇಶಕರುಗಳಾದ ನಿರ್ದೇಶಕರಾದ ರಾಘವೇಂದ್ರ, ಕೆ. ನರಸಿಂಹಮೂರ್ತಿ,ಜಿ.ಸಿ.ವಿರೂಪಾಕ್ಷ, ಡಾ.ಅನುಸೂಯ ರುದ್ರಪ್ರಸಾದ್,ಜಗಜ್ಯೋತಿ ಸಿದ್ದರಾಮಯ್ಯ, ಟಿ.ಹೆಚ್. ಮಹೇಶ್, ಪದ್ಮರಾಜು ಟಿ.ಕೆ., ಹೆಚ್.ಆರ್.ನಾಗೇಶ್, ಟಿ.ಆರ್.ನಟರಾಜು, ಇಂದ್ರಾಣಿ ಪ್ರಕಾಶ್, ಆದರ್ಶ, ಸುರೇಶ್ಕುಮಾರ್, ಟಿ.ಎಂ. ಕುಮಾರಸ್ವಾಮಿ, ಎ.ಆರ್. ಶ್ರೀನಾಥ್, ಜಿ.ಸಿ. ಬಸವರಾಜು, ಚಿಕ್ಕಣ್ಣ, ಕೋರಿ ಮಂಜುನಾಥ್, ಆಡಿಟರ್ ಆಂಜಿನಪ್ಪ, ಬಾವಿಕಟ್ಟೆ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
