ಕೊರಟಗೆರೆ: ತಾಲ್ಲೂಕಿನ ಜಗಜ್ಯೋತಿ ಬಸವೇಶ್ವರ ದೇವಾಲಯದಲ್ಲಿ ವೀರಶೈವ ಲಿಂಗಾಯತ ಸೇವಾ ಟ್ರಸ್ಟ್ (ರಿ)ನ ಉದ್ಘಾಟನಾ ಸಮಾರಂಭ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ವೀರಭದ್ರ ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಟ್ರಸ್ಟ್ನ ನೂತನ ಅಧ್ಯಕ್ಷರಾಗಿ ಕೊಡ್ಲಹಳ್ಳಿ–ಹುಚ್ಚವೀರಯ್ಯನಪಾಳ್ಯದ ಎಚ್.ಸಿ. ಮಂಜುನಾಥ್ ಅವರು ಪದಗ್ರಹಣ ಮಾಡಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಮಾಜಿ ತಾಲ್ಲೂಕು ಅಧ್ಯಕ್ಷ ಪಿ.ಆರ್. ಪರ್ವತಯ್ಯ ಮಾತನಾಡಿ, ಸಂಘಟನೆಯ ಮೂಲಕ ಸಮಾಜದ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟಲು ಪ್ರಾಮಾಣಿಕ ಪ್ರಯತ್ನ ಅಗತ್ಯ ಎಂದರು.
ಯುವಜನರು, ವಿದ್ಯಾರ್ಥಿಗಳು ಹಾಗೂ ಅಗತ್ಯವಿರುವ ಕುಟುಂಬಗಳಿಗೆ ನೆರವಾಗುವಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಗ್ರಾಮೀಣ ಭಾಗದ ಯುವಕರನ್ನು ಸಂಘಟನೆಯೊಂದಿಗೆ ಬೆಸೆಯುವ ನಿಟ್ಟಿನಲ್ಲಿ ಸೇವಾ ಟ್ರಸ್ಟ್ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿ ಕೆ.ಎನ್. ಶಿವಕುಮಾರ್ ಹಾಗೂ ವಡ್ಡಗೆರೆ ಲಿಂಗರಾಜು, ಕಾರ್ಯದರ್ಶಿಗಳಾಗಿ ಬಸವರಾಜು ಹಾಗೂ ಶಿವಕುಮಾರ್ ಎಂ.ಆರ್., ಖಜಾಂಚಿಯಾಗಿ ಚಿನ್ನಂಜಯ್ಯ, ಪ್ರಚಾರ ಸಮಿತಿ ಸದಸ್ಯರಾಗಿ ಮೆಡಿಕಲ್ ಕುಮಾರ್, ಮಂಜುನಾಥ್, ಮಹೇಶ್, ನಾಗಭೂಷಣ ಸೇರಿದಂತೆ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ನರಸಿಂಹಯ್ಯ ಹೊಸಕೋಟೆ
