ಚನ್ನರಾಯಪಟ್ಟಣ: ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಯ ಪ್ರಾಣ ಉಳಿಸಲು ವೈದ್ಯರು ಶಕ್ತಿಮೀರಿ ಪ್ರಯತ್ನಿಸುತ್ತಾರೆ. ವೈದ್ಯರ ಪರಿಶ್ರಮ ಹಾಗೂ ಸೇವೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಚನ್ನರಾಯಪಟ್ಟಣ ಸನ್ರೈಸ್ ಲಯನ್ಸ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಡಾ. ಮಹೇಶ್ ಹೇಳಿದರು.
ತಾಲೂಕಿನ ನುಗ್ಗೇಹಳ್ಳಿ ಹೋಬಳಿ ಕೇಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಪುಣ್ಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಪುಣ್ಯ ನೇತ್ರಾಲಯ, ಬಾಗೂರು ಹಾಗೂ ಚನ್ನರಾಯಪಟ್ಟಣ ಸನ್ರೈಸ್ ಲಯನ್ಸ್ ಕ್ಲಬ್, ತಾಲೂಕು ಆರೋಗ್ಯ ಇಲಾಖೆ ಮತ್ತು ಸರ್ಕಾರಿ ಆಸ್ಪತ್ರೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಕಣ್ಣಿನ ಪೊರೆ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಅನೇಕ ವೈದ್ಯರು ಹಗಲು-ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸಿ ರೋಗಿಗಳ ಪ್ರಾಣ ಉಳಿಸಲು ಶ್ರಮಿಸಿದರು. ಕೆಲ ವೈದ್ಯರು ಕೋವಿಡ್ಗೆ ಬಲಿಯಾದರೂ, ವೈದ್ಯರು ಪ್ರತಿನಿತ್ಯ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಹರೀಶ್ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯಕ್ಕೆ ಪ್ರತಿಯೊಬ್ಬರೂ ಹೆಚ್ಚಿನ ಆದ್ಯತೆ ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರು ಸಲ್ಲಿಸುತ್ತಿರುವ ಸೇವೆಯಿಂದ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳು ಜನರಿಗೆ ತಲುಪುತ್ತಿವೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಹೆಚ್. ಶಿವಣ್ಣ ಮಾತನಾಡಿ, ಹೋಬಳಿ ಕೇಂದ್ರದಲ್ಲಿ ಇದೇ ಮೊದಲ ಬಾರಿಗೆ ತಜ್ಞ ವೈದ್ಯರ ತಂಡದೊಂದಿಗೆ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಕಣ್ಣಿನ ತಪಾಸಣೆ, ರಕ್ತದಾನ ಶಿಬಿರದ ಜೊತೆಗೆ ರಿಯಾಯಿತಿ ದರದಲ್ಲಿ ಕನ್ನಡಕ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಶಿಬಿರದಲ್ಲಿ ನೂರಾರು ಮಂದಿ ನೋಂದಾಯಿಸಿಕೊಂಡು ತಪಾಸಣೆಗೆ ಒಳಗಾದರು. ಮೂಳೆ ಮತ್ತು ಕೀಲು, ಕಿವಿ-ಮೂಗು-ಗಂಟಲು, ವೈದ್ಯಕೀಯ, ಕಣ್ಣು, ದಂತ, ಮಕ್ಕಳ ಹಾಗೂ ಚರ್ಮರೋಗ ತಜ್ಞರು ರೋಗಿಗಳನ್ನು ಪರೀಕ್ಷಿಸಿದರು. ಉಚಿತವಾಗಿ ಔಷಧಿ ಮತ್ತು ಮಾತ್ರೆಗಳನ್ನು ವಿತರಿಸಲಾಯಿತು. ಚನ್ನರಾಯಪಟ್ಟಣ ಸ್ವಯಂಪ್ರೇರಿತ ರಕ್ತನಿಧಿ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲೂ ಹಲವರು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿಯಾಗಿ ನೂತನವಾಗಿ ನೇಮಕಗೊಂಡ ಹರೀಶ್ ಹಾಗೂ ಬಾಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಸ್ಟಾಫ್ ನರ್ಸ್ ಪದ್ಮ ಬಿ.ಎಸ್. ಅವರನ್ನು ವಯೋನಿವೃತ್ತಿ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಚನ್ನರಾಯಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಧರಣೇಶ್, ವೈದ್ಯರಾದ ಡಾ. ಚಿದಾನಂದ್, ಡಾ. ಹೇಮಂತ್, ದಂತ ವೈದ್ಯ ಡಾ. ಜಮೀರ್, ಚರ್ಮರೋಗ ತಜ್ಞೆ ಡಾ. ಜಮೀನಾ, ಬಾಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವರದರಾಜು, ಸನ್ರೈಸ್ ಲಯನ್ಸ್ ಕ್ಲಬ್ ಅಧ್ಯಕ್ಷ ಗೋವಿಂದರಾಜು, ಕಾರ್ಯದರ್ಶಿ ಭುವನೇಂದ್ರ, ಖಜಾಂಚಿ ರೇವಣ್ಣ, ಬಿ.ಎಸ್. ಮಂಜೇಗೌಡ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಮಂಜುನಾಥ್, ಸ್ವಯಂಪ್ರೇರಿತ ರಕ್ತನಿಧಿ ವ್ಯವಸ್ಥಾಪಕ ಭರತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
