ಕೆ.ಆರ್.ಪೇಟೆ: ಪತ್ರಕರ್ತರು ಸದಾ ಅಧ್ಯಯನಶೀಲರಾಗಿ, ವೃತ್ತಿಯ ಮೌಲ್ಯ ಮತ್ತು ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಕೆ. ಶಿವಕುಮಾರ್ ಕರೆ ನೀಡಿದರು.

ಪಟ್ಟಣದ ಹೊರವಲಯದ ಶ್ರೀ ಚೌಡೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಕೆ.ಆರ್.ಪೇಟೆ ತಾಲ್ಲೂಕು ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರು ಮತ್ತು ವರದಿಗಾರರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಪತ್ರಿಕಾ ವಿತರಕರಿಗೆ ಸನ್ಮಾನ ಹಾಗೂ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುಳಿದ ವರ್ಗದ ಪತ್ರಕರ್ತನಾಗಿ ತಮಗೆ ದೊರೆತಿರುವ ಅವಕಾಶಕ್ಕೆ ವಿದ್ಯೆ, ಪ್ರಾಮಾಣಿಕತೆ ಮತ್ತು ನಿಷ್ಠೆಯೇ ಕಾರಣ. ವಿದ್ಯೆ ಯಾರೊಬ್ಬರ ಸ್ವತ್ತೂ ಅಲ್ಲ. ಪತ್ರಿಕೋದ್ಯಮದ ಮೌಲ್ಯವನ್ನು ಅರಿಯದೆ ಕ್ಷೇತ್ರಕ್ಕೆ ಬರುವ ಕೆಲವರಿಂದ ಪತ್ರಿಕಾ ಕ್ಷೇತ್ರದ ಘನತೆಗೆ ಧಕ್ಕೆಯಾಗುತ್ತಿದೆ. ಪತ್ರಿಕೋದ್ಯಮಕ್ಕೆ ಬಂದವರು ಕೇವಲ ಹೆಸರಿಗೆ ಸೀಮಿತವಾಗದೆ ಸಮಾಜದ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು ಎಂದರು.

ಒಂದು ಪತ್ರಿಕೆ ಜನರ ಕೈಗೆ ತಲುಪುವ ಹಿಂದೆ ಸಂಪಾದಕರು, ವರದಿಗಾರರು ಸೇರಿದಂತೆ ಅನೇಕ ಮಂದಿಯ ಪರಿಶ್ರಮವಿದೆ. ವಿಶೇಷವಾಗಿ ಮಳೆ, ಚಳಿ, ಬಿಸಿಲನ್ನೂ ಲೆಕ್ಕಿಸದೆ ಬೆಳಗಿನ ಜಾವವೇ ಎದ್ದು ಪತ್ರಿಕೆಗಳನ್ನು ಮನೆಮನೆಗೆ ತಲುಪಿಸುವ ವಿತರಕರ ಸೇವೆ ಶ್ಲಾಘನೀಯ. ಇಂತಹವರನ್ನು ಗುರುತಿಸಿ ಗೌರವಿಸುತ್ತಿರುವುದು ಸಂಘದ ಹೆಮ್ಮೆಯ ಕಾರ್ಯವಾಗಿದೆ ಎಂದು ಹೇಳಿದರು.
ಪತ್ರಕರ್ತರು ಅಧ್ಯಯನಶೀಲರಾಗಬೇಕು
ಪತ್ರಕರ್ತರ ಕುರಿತು ವಿಶೇಷ ಉಪನ್ಯಾಸ ನೀಡಿದ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಮಾತನಾಡಿ, ತಾವು ಕೂಡ ಸುಮಾರು 35 ವರ್ಷಗಳ ಕಾಲ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದು, ಹಿಂದಿನ ಕಾಲದ ಪತ್ರಕರ್ತರ ಬದ್ಧತೆ ಮತ್ತು ಇಂದಿನ ಕಾರ್ಯವೈಖರಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದರು.
ಹಿಂದಿನ ದಿನಗಳಲ್ಲಿ ಪತ್ರಕರ್ತರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರ ಕಾರ್ಯವೈಖರಿಯಿಂದ ಇಡೀ ಪತ್ರಿಕೋದ್ಯಮ ಕ್ಷೇತ್ರವೇ ತಲೆತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಪತ್ರಕರ್ತರು ತಮ್ಮ ಕರ್ತವ್ಯವನ್ನು ಮೈಗೂಡಿಸಿಕೊಂಡು ಕೆಲಸ ಮಾಡಬೇಕು. ಸ್ವಾತಂತ್ರ್ಯ ಮತ್ತು ಸಂವಿಧಾನಕ್ಕಾಗಿ ಹೋರಾಡಿದ ಮಹನೀಯರ ಆದರ್ಶಗಳನ್ನು ನೆನಪಿನಲ್ಲಿಟ್ಟುಕೊಂಡು ಮುನ್ನಡೆಯಬೇಕು ಎಂದರು.
ಪ್ರಶಸ್ತಿ ಮತ್ತು ಗೌರವಕ್ಕಿಂತ ಪತ್ರಿಕಾ ಕ್ಷೇತ್ರದಲ್ಲಿ ವಾಣಿಜ್ಯ ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆ ದೊರೆಯುತ್ತಿರುವುದು ಮಾಧ್ಯಮ ಕ್ಷೇತ್ರಕ್ಕೆ ಗೌರವ ತರುವುದಿಲ್ಲ. ಯಾವುದೇ ವಿಷಯದ ಕುರಿತು ವರದಿ ಮಾಡುವ ಮುನ್ನ ಪತ್ರಕರ್ತರು ಅದರ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಬೇಕು. ಅಧ್ಯಯನಶೀಲ ಪತ್ರಕರ್ತರಾಗಿ ರೂಪುಗೊಳ್ಳುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನ ಪತ್ರಕರ್ತರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ. ಸಿದ್ಧರಾಜು ಮಾತನಾಡಿ, ಹಿಂದಿನ ಕಾಲದಲ್ಲಿ ಪತ್ರಕರ್ತರು ಮುಖ್ಯಮಂತ್ರಿಗಳ ತಪ್ಪುಗಳನ್ನೂ ನೇರವಾಗಿ ಖಂಡಿಸಿ ಪತ್ರಿಕಾ ಧರ್ಮವನ್ನು ಎತ್ತಿಹಿಡಿದು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ಆದರೆ ಇಂದು ಪತ್ರಕರ್ತರ ಮೇಲಿನ ಗೌರವ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದರು.
ಪತ್ರಕರ್ತರು ನಂಬಿಕೆ ಮತ್ತು ವೈಚಾರಿಕತೆಗೆ ಆದ್ಯತೆ ನೀಡಬೇಕು. ಮೂಢನಂಬಿಕೆಗಳಿಗೆ ಪ್ರೋತ್ಸಾಹ ನೀಡದೆ, ಸಮಾಜದಲ್ಲಿ ಮಾನವೀಯತೆ ಮತ್ತು ಸಮಾನತೆಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಮಹಾತ್ಮ ಗಾಂಧೀಜಿ ಹಾಗೂ ಕುವೆಂಪು ಅವರಂತಹ ಮಹನೀಯರ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಸತ್ಯ, ನ್ಯಾಯದ ಪರವಾಗಿ ನಿಲ್ಲಬೇಕು
ಪತ್ರಿಕಾ ವಿತರಕರನ್ನು ಸನ್ಮಾನಿಸಿ ಮಾತನಾಡಿದ ಸಮಾಜ ಸೇವಕ ಆರ್.ಟಿ.ಒ. ಮಲ್ಲಿಕಾರ್ಜುನ್, ಇಂದಿನ ದಿನಗಳಲ್ಲಿ ಪತ್ರಕರ್ತರ ಜವಾಬ್ದಾರಿ ಅತ್ಯಂತ ದೊಡ್ಡದಾಗಿದೆ. ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲುವುದು ಪತ್ರಕರ್ತರ ಮೊದಲ ಕರ್ತವ್ಯವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಎಂದರು.
ಹಣ ಮತ್ತು ಅಧಿಕಾರಕ್ಕೆ ಮಣಿಯದೆ, ನಿರ್ಭೀತಿಯಿಂದ ಹಾಗೂ ನಿಷ್ಪಕ್ಷಪಾತವಾಗಿ ವರದಿ ಮಾಡಬೇಕು. ಪತ್ರಕರ್ತರು ತಮ್ಮ ವೃತ್ತಿ ಧರ್ಮವನ್ನು ಎಂದಿಗೂ ಮರೆಯಬಾರದು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪತ್ರಿಕಾ ವಿತರಕರಿಗೆ ಬ್ಯಾಗ್ ಹಾಗೂ ಪತ್ರಕರ್ತರಿಗೆ ಗುರುತಿನ ಚೀಟಿಗಳನ್ನು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ನಟರಾಜ್, ಮನ್ಮುಲ್ ನಿರ್ದೇಶಕ ಡಾಲು ರವಿ, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್ ಹಾಗೂ ರಾಜ್ಯ ಕೈಗಾರಿಕಾ ಸರಬರಾಜು ಸಹಕಾರ ಮಂಡಳಿ ಅಧ್ಯಕ್ಷ ಕೆ.ಎಸ್. ಸಂತೋಷ್ ಕುಮಾರ್ ವಿತರಿಸಿದರು.
ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ
ಸಂಘದ ನೂತನ ತಾಲ್ಲೂಕು ಅಧ್ಯಕ್ಷರಾಗಿ ಗಂಜಿಗೆರೆ ಮಹೇಶ್ ಅವರು ನಿರ್ಗಮಿತ ಅಧ್ಯಕ್ಷ ಎಚ್.ಬಿ. ರಾಜೇಶ್ ಅವರಿಂದ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಹೊಸಹೊಳಲು ರಘು, ಪ್ರಧಾನ ಕಾರ್ಯದರ್ಶಿಯಾಗಿ ಕಾಮನಹಳ್ಳಿ ಮಂಜುನಾಥ್ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಸಾಯಿಕುಮಾರ್ ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪುಟ್ಟರಾಜು, ಬಿಜಿಎಸ್ ಹೇಮಗಿರಿ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಡಾ. ಜಿ.ಎನ್. ರಾಮಕೃಷ್ಣೇಗೌಡ, ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ. ಕೆ.ಆರ್. ನೀಲಕಂಠ, ಜಿಲ್ಲಾ ಅಧ್ಯಕ್ಷ ಎಚ್.ಬಿ. ಮಂಜುನಾಥ್, ಉದ್ಯಮಿ ರೇವಣ್ಣ, ಚಲನಚಿತ್ರ ಕಲಾವಿದ ಬಿ. ಅರವಿಂದ್ ರಾವ್, ಹಿರಿಯ ಪತ್ರಕರ್ತ ಬಳ್ಳೆಕೆರೆ ಮಂಜುನಾಥ್, ಕೆ. ಕಾಳೇಗೌಡ, ತಹಸೀಲ್ದಾರ್ ಶ್ರೇಯಸ್, ತಾಲ್ಲೂಕು ವೈದ್ಯ ಆಡಳಿತಾಧಿಕಾರಿ ಡಾ. ಅಜಿತ್, ಮಾದೇಗೌಡ ಮೆಮೋರಿಯಲ್ ಆಸ್ಪತ್ರೆಯ ನಿರ್ದೇಶಕ ಡಾ. ಲೋಹಿತ್, ಪುರಸಭೆ ಅಧ್ಯಕ್ಷ ರವೀಂದ್ರ ಬಾಬು, ಉದ್ಯಮಿ ನಂಜುಂಡಸ್ವಾಮಿ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಮನು ಮಾಕವಳ್ಳಿ, ಕೆ.ಆರ್.ಪೇಟೆ
