ಬೆಂಗಳೂರು: ರಾಜಕಾರಣಿಗಳು, ನ್ಯಾಯಾಧೀಶರ ಮೇಲೆ ಹನಿಟ್ರ್ಯಾಪ್ ಆರೋಪ ಕರ್ನಾಟಕ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಇದಕ್ಕೆ ಸಂಬಂಧಿಸಿದಂತೆ ಲಾಯರ್ ವಿನಯ್ ಕುಮಾರ್ ಸಿಂಗ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸುಪ್ರೀಂಕೋರ್ಟ್ ಬುಧವಾರ ವಜಾಗೊಳಿಸಿ ಆದೇಶ ಹೊರಡಿಸಿದೆ.
ನೀವು ಜಾರ್ಖಂಡ್ನವರು ನಿಮಗೇನು ಸಂಬಂಧ? ಪೊಲಿಟಿಕಲ್ ನಾನ್ಸೆನ್ಸ್ಗಳನ್ನೆಲ್ಲಾ ವಿಚಾರಣೆ ಮಾಡಲು ಆಗಲ್ಲ. ಜಡ್ಜ್ಗಳು ಏಕೆ ಹನಿಟ್ರ್ಯಾಪ್ಗೆ ಒಳಗಾಗುತ್ತಾರೆ, ಅದನ್ನು ಜಡ್ಜ್ಗಳು ನೋಡಿಕೊಳ್ಳುತ್ತಾರೆ ನಿಮಗೇನು ಸಂಬಂಧ ಎಂದು ಸುಪ್ರೀಂ ಪ್ರಶ್ನೆ ಮಾಡಿದೆ.
ರಾಜ್ಯ ರಾಜಕೀಯದಲ್ಲಿ ಸಚಿವರ ಹನಿಟ್ರ್ಯಾಪ್ ಯತ್ನದ ವಿಚಾರ ಸಾಕಷ್ಟು ಕೋಲಾಹಲ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಪ್ರಕರಣ ಕುರಿತು ತನಿಖೆಗೆ ಆಗ್ರಹಿಸಿ ಇತ್ತೀಚೆಗೆ ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ಇಂದು ವಿಚಾರಣೆ ಮಾಡಿದ ಸುಪ್ರೀಂಕೋರ್ಟ್, ಕರ್ನಾಟಕದಲ್ಲಿ ನಡೆದ ಹನಿಟ್ರ್ಯಾಪ್ ಹಗರಣಕ್ಕೆ ಸಂಬಂಧಿಸಿದಂತೆ ಹಿರಿಯ ಸಚಿವರು ಮತ್ತು ಶಾಸಕರು, ರಾಜಕೀಯ ಮುಖಂಡರು ಮತ್ತು ನ್ಯಾಯಾಧೀಶರ ಮೇಲೆ ಹನಿಟ್ರ್ಯಾಪ್ ಆರೋಪಗಳ ಬಗ್ಗೆ ಅರ್ಜಿದಾರರು ತಮ್ಮ ವಾದವನ್ನು ಮಂಡಿಸಿದ್ದಾರೆ. ವಾದ-ವಿವಾದ ಆಲಿಸಿದ ಸುಪ್ರೀಂಕೋರ್ಟ್ ಲಾಯರ್ ವಿನಯ್ ಕುಮಾರ್ ಸಿಂಗ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.

ಇತ್ತ ರಾಜ್ಯದಲ್ಲಿ ಹನಿಟ್ರ್ಯಾಪ್ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಹನಿ ಹಿಂದಿರೋರು ಯಾರು ಅನ್ನೋದು ಇನ್ನೂ ನಿಗೂಢವಾಗಿಯೇ ಇದೆ. ಸಚಿವ ಕೆ.ಎನ್.ರಾಜಣ್ಣರೇ, ಮಧುಬಲೆಯ ಇಂಚಿಂಚೂ ಮಾಹಿತಿ ಬಿಚ್ಚಿಟ್ಟಿದ್ದಾರೆ. ಬ್ಲೂ ಜೀನ್ಸ್ ಪ್ಯಾಂಟ್, ಬ್ಲೂ ಟಾಪ್ ಹಾಕಿಕೊಂಡು, ಪರ್ಸನಲ್ ಆಗಿ ಮಾತನಾಡ್ಬೇಕು ಅಂತಾ, 2 ಬಾರಿ ಹನಿಟ್ರ್ಯಾಪ್ಗೆ ಯತ್ನಿಸಿದ್ದಾರೆ, ಇದರ ಹಿಂದಿರೋರ ವಿರುದ್ಧ ಕ್ರಮ ಆಗಬೇಕು ಅಂತಾ ಆಗ್ರಹಿಸಿದ್ದಾರೆ.
ಸದನದಲ್ಲಿ ಪ್ರಸ್ತಾಪ ಆಗಿ ಇಷ್ಟು ದಿನವಾದ್ರೂ, ಸಚಿವ ರಾಜಣ್ಣ ದೂರು ಕೊಡದೇ ಇರೋದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ದೂರು ಕೊಡೋ ಮೊದ್ಲು ಮಾತನಾಡಿದ ಸಚಿವ ರಾಜಣ್ಣ, ಪರಮೇಶ್ವರ್ ಎಲ್ಲೇ ಇದ್ರೂ ಹುಡುಕಿಕೊಂಡು ಹೋಗಿ ದೂರು ಕೊಡ್ತೀನಿ ಅಂದಿದ್ರು. ಅದರಂತೆಯೇ, ನೆಲಮಂಗಲದ ಟಿ.ಬೇಗೂರು ಕಾಲೇಜ್ನಲ್ಲಿದ್ದ ಪರಮೇಶ್ವರ್ಗೆ ದೂರು ಕೊಡೋಕೆ ರಾಜಣ್ಣ ಹೋಗಿದ್ದರು. ಆದರೆ ದೂರು ಕೊಡದೇ ವಾಪಸ್ ತೆರಳಿದ್ದರು. ಮತ್ತೆ ಸದಾಶಿವನಗರದಲ್ಲಿರುವ ಪರಮೇಶ್ವರ ನಿವಾಸಕ್ಕೆ ಭೇಟಿ ಕೊಟ್ಟು, ಅಧಿಕಾರಿಗಳ ಸಮ್ಮುಖದಲ್ಲೇ ವಿವರವಾದ ದೂರನ್ನ ಸಚಿವ ರಾಜಣ್ಣ ಕೊಟ್ಟಿದ್ದಾರೆ.
