ಶ್ಲೋಕ – 13
ವಿಧಿಹೀನಮಸೃಷ್ಟಾನ್ನಂ ಮಂತ್ರ ಹೀನಮದಕ್ಷಿಣಮ್।
ಶ್ರದ್ಧಾವಿರಹಿತಂ ಯಜ್ಞಂ ತಾಮಸಂ ಪರಿಚಕ್ಷತೇ ॥೧೩॥
ವಿಧಿಹೀನಮ್ ಅಸೃಷ್ಟ ಅನ್ನಮ್ ಮಂತ್ರ ಹೀನಮ್ ಅದಕ್ಷಿಣಮ್।
ಶ್ರದ್ಧಾ ವಿರಹಿತಂ ಯಜ್ಞಂ ತಾಮಸಂ ಪರಿಚಕ್ಷತೇ –ಶಾಸ್ತ್ರಕ್ಕೆ ಅನುಗುಣವಾಗಿಲ್ಲ; ಅನ್ನದಾನವಿಲ್ಲ; ಮಂತ್ರವಿಲ್ಲ; ದಕ್ಷಿಣೆಯಿಲ್ಲ; ಮಾಡುವ ಕ್ರಿಯೆಯಲ್ಲಿ ನಂಬಿಕೆಯೂ ಇಲ್ಲ. ಇಂಥಹ ಯಜ್ಞವನ್ನು ತಾಮಸ ಎನ್ನುತ್ತಾರೆ.
ಮಂತ್ರ ಸರಿಯಾಗಿ ಹೇಳದೇ ಇರುವುದು, ಮಂತ್ರವನ್ನು ಕ್ರಮ ತಪ್ಪಿ ಹೇಳುವುದು, ಪದ ಉಚ್ಛಾರ ಸರಿಯಾಗಿಲ್ಲದೇ ಇರುವುದು-ಇವೆಲ್ಲವೂ ವಿಧಿಹೀನ. ಈ ರೀತಿ ಮಾಡುವ ಯಜ್ಞ ತಾಮಸ ಯಜ್ಞ. ಯಾವುದೇ ಯಜ್ಞದಲ್ಲಿ ಹೇಗೆ ಪ್ರತಿಮೆಯ ಮೂಲಕ ಮತ್ತು ಅಗ್ನಿಯ ಮೂಲಕ ಆರಾಧನೆ ನಡೆಯುತ್ತದೆಯೋ, ಅದೇ ರೀತಿ ಚರಮೂರ್ತಿಗಳ ಆರಾಧನೆ ಬಹಳ ಮುಖ್ಯ. ಅನ್ನದಾನ ಮಾಡುವ ಮೂಲಕ ಪ್ರತಿಯೊಬ್ಬರೊಳಗೂ ಇರುವ ಭಗವಂತನ ಆರಾಧನೆ ಈ ಚರಮೂರ್ತಿ ಆರಾಧನೆ. ಹೀಗೆ ಅನ್ನದಾನವಿಲ್ಲದೆ, ದಕ್ಷಿಣೆ(ವೈದಿಕರಿಗೆ ಅವರ ಜೀವನ ನಿರ್ವಾಹಣೆಗಾಗಿ ನಾವು ಸಲ್ಲಿಸುವ ಸೇವೆ) ಇಲ್ಲದೆ ಮಾಡುವ ಯಜ್ಞ ತಾಮಸ ಯಜ್ಞ. ಇವೆಲ್ಲವುದಕ್ಕಿಂತ ಮುಖ್ಯವಾದುದು ಶ್ರದ್ಧೆ. ಭಗವಂತನ ಮೇಲೆ ಅಚಲವಾದ ಶ್ರೇಷ್ಠ ಶ್ರೆದ್ಧೆ ಇಲ್ಲದೆ ಮಾಡುವ ಯಾವುದೇ ಯಜ್ಞವಿರಲಿ-ಅದು ಸರ್ವತ್ರ ತಾಮಸ ಯಜ್ಞವಾಗುತ್ತದೆ.
ಆಹಾರ ಮತ್ತು ಯಜ್ಞದ ನಂತರ ಕೃಷ್ಣ ಮುಂದಿನ ಶ್ಲೋಕಗಳಲ್ಲಿ ಮೂರು ವಿಧದ ತಪಸ್ಸಿನ ಬಗ್ಗೆ ವಿವರಿಸುತ್ತಾನೆ. ಮೂಲಭೂತವಾಗಿ ತಪಸ್ಸಿನಲ್ಲಿ ಮೂರು ವಿಧ. ನಮ್ಮ ನಡೆಯಲ್ಲಿ ಶಿಸ್ತುಬದ್ಧತೆಯನ್ನು ತರುವುದು-ತಪಸ್ಸು, ಆಳವಾದ ಚಿಂತನೆ-ತಪಸ್ಸು, ಮನಃಶುದ್ಧಿಗಾಗಿ ಮಾಡುವ ದೇಹದಂಡನೆಯೂ-ತಪಸ್ಸು. ತಪಸ್ಸು ಮಾಡಲು ಕಾಡಿಗೆ ಹೋಗಬೇಕಾಗಿಲ್ಲ. ಮನೆಯಲ್ಲೇ ಇದ್ದು ತಪಸ್ಸು ಮಾಡಬಹುದು. ಸಾತ್ವಿಕ, ರಾಜಸ ಮತ್ತು ತಾಮಸ ತಪಸ್ಸನ್ನು ವಿವರಿಸುವ ಮೊದಲು ಇಲ್ಲಿ ಕೃಷ್ಣ ಶರೀರ, ಮಾತು ಮತ್ತು ಮನ ಎನ್ನುವ ಮೂಲಭೂತವಾದ ಮೂರು ತಪಸ್ಸಿನ ವಿವರಣೆಯನ್ನು ಮುಂದಿನ ಮೂರು ಶ್ಲೋಕಗಳಲ್ಲಿ ಕೊಡುತ್ತಾನೆ.
