ಕೆ.ಆರ್.ಪೇಟೆ: ಪರಿಸರ ಸಂರಕ್ಷಣೆ ಹಾಗೂ ಹಸಿರು ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬರೂ ಒಂದು ಗಿಡ ನೆಟ್ಟು ಬೆಳೆಸಬೇಕು ಎಂದು ಚನ್ನರಾಯಪಟ್ಟಣ ಜಿಲ್ಲಾ ಜನಜಾಗೃತಿ ಜಿಲ್ಲಾಧ್ಯಕ್ಷರು ಹಾಗೂ ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.
ತಾಲ್ಲೂಕಿನ ಶೀಳನೆರೆ ಹೋಬಳಿಯ ಶೆಟ್ಟನಾಯಕನ ಕೊಪ್ಪಲು ಗ್ರಾಮದ ಶ್ರೀ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಿಕ್ಕೇರಿ ವಲಯದ ವತಿಯಿಂದ ಆಯೋಜಿಸಿದ್ದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದು, ಶಾಲಾ ಆವರಣವನ್ನು ಹಸಿರುಮಯವಾಗಿಸುವುದು, ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ನೆರಳು ಮತ್ತು ಉತ್ತಮ ವಾತಾವರಣ ಕಲ್ಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಒಂದು ಗಿಡ ನೆಟ್ಟರೆ ಅದು ನೂರಾರು ಜೀವಿಗಳಿಗೆ ಆಸರೆಯಾಗುತ್ತದೆ. ವಿದ್ಯಾರ್ಥಿಗಳು ತಾವು ನೆಟ್ಟ ಗಿಡವನ್ನು ತಮ್ಮ ಹೆಸರಿನಲ್ಲಿ ದತ್ತು ಪಡೆದು ಬೆಳೆಸಬೇಕು ಎಂದ ಅವರು ಅರಣ್ಯವೇ ನಮ್ಮ ಉಸಿರು,ಅರಣ್ಯವೇ ನಮ್ಮ ಭವಿಷ್ಯ ಮರಗಳನ್ನು ಕಡಿಯುವುದನ್ನು ನಿಲ್ಲಿಸಿ, ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಿದಾಗ ಮಾತ್ರ ಮುಂದಿನ ದಿನಗಳಲ್ಲಿ ಉತ್ತಮ ಮಳೆ, ಬೆಳೆ ಮತ್ತು ಆರೋಗ್ಯಕರ ಬದುಕು ಸಾಧ್ಯ ಎಂದು ಮನಮುಟ್ಟುವಂತೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕಿಕ್ಕೇರಿ ಯೋಜನಾಧಿಕಾರಿ ಶ್ರೀನಿವಾಸ್ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೇವಲ ಆರ್ಥಿಕ ಅಭಿವೃದ್ಧಿಗೆ ಸೀಮಿತವಾಗಿಲ್ಲ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಮತ್ತು ಪರಿಸರ ಕ್ಷೇತ್ರದಲ್ಲೂ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.ಸ್ವಸಹಾಯ ಸಂಘಗಳ ರಚನೆ, ಮಹಿಳಾ ಸಬಲೀಕರಣ, ಜ್ಞಾನವಿಕಾಸ ಕಾರ್ಯಕ್ರಮ, ಜನಜಾಗೃತಿ, ಮದ್ಯವರ್ಜನ ಶಿಬಿರ, ಪ್ರಗತಿ ಬಂಧು, ಕೃಷಿ ಅಭಿವೃದ್ಧಿ, ಸಾಮಾಜಿಕ ಅರಣ್ಯೀಕರಣದಡಿ ಉಚಿತ ಸಸಿ ವಿತರಣೆ, ಕೆರೆಗಳ ಹೂಳೆತ್ತುವುದು, ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ಸಂಸ್ಥೆ ನಿರಂತರವಾಗಿ ಮಾಡುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಶಾಲಾ ಪ್ರಾಂಶುಪಾಲೆ ವೈ.ಪವಿತ್ರ ವಹಿಸಿಕೊಂಡಿದ್ದರು.
ಬಳಿಕ ಶಾಲಾ ಆವರಣದಲ್ಲಿ ಸುಮಾರು 250ಕ್ಕೂ ಜಾತಿಯ ಹಣ್ಣು, ನೆರಳು ಮತ್ತು ಔಷಧೀಯ ಗುಣವುಳ್ಳ ಸಸಿಗಳನ್ನು ನೆಡಲಾಯಿತು. ಗಣ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತಾವೇ ಖುದ್ದಾಗಿ ಸಸಿ ನೆಟ್ಟು ನೀರು ಹಾಕಿ ಪೋಷಿಸುವ ಜವಾಬ್ದಾರಿ ವಹಿಸಿಕೊಂಡರು.

ಕಾರ್ಯಕ್ರಮದಲ್ಲಿ ಚನ್ನರಾಯಪಟ್ಟಣ ಜಿಲ್ಲಾ ಜನಜಾಗೃತಿ ಉಪಾಧ್ಯಕ್ಷೆ ನಳಿನಿ, ನಿರ್ದೇಶಕರಾದ ಮೊಟ್ಟೆ ಮಂಜು, ಶಿವರಾಮು, ಡಿ.ಸಿ.ಕುಮಾರ್, ಕೃಷಿ ಮೇಲ್ವಿಚಾರಕ ಪ್ರವೀಣ್,ಮೇಲ್ವಿಚಾರಕ ರವಿ, ಶಾಲಾ ಪ್ರಾಂಶುಪಾಲೆ ವೈ.ಪವಿತ್ರ, ಸೇವಾ ಪ್ರತಿನಿಧಿಗಳಾದ ಚಂದ್ರಕಲಾ, ಪ್ರಣೀತಾ, ಶಾಲಾ ವಾರ್ಡನ್ ಶಬೀನಾ ಬಾನು,ಸೇರಿದಂತೆ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ,ಕೆ.ಆರ್.ಪೇಟೆ*
