ತುಮಕೂರು ಜಿಲ್ಲೆಯ ಸಿರಿವರ ಗ್ರಾಮದ ಗ್ರಾಮೀಣ ಪ್ರತಿಭೆ ರವೀಂದ್ರನಾಥ ಸಿರಿವರ. ಹತ್ತು ವರ್ಷದ ಬಾಲಕನಾಗಿದ್ದಾಗಲೇ ಬಣ್ಣ ಹಚ್ಚಿ ರಂಗಪ್ರವೇಶಿಸಿದ ಇವರು ಕಲೆ, ಸಾಹಿತ್ಯ ಹಾಗೂ ಸಾಮಾಜಿಕ ಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಬಹುಮುಖ ವ್ಯಕ್ತಿತ್ವದವರು.
ಸಾಕ್ಷರತಾ ಆಂದೋಲನದ ಮೂಲಕ ತಮ್ಮ ಸಾರ್ವಜನಿಕ ಜೀವನವನ್ನು ಆರಂಭಿಸಿದ ಅವರು, ತುಮಕೂರು ಹಾಗೂ ಬೆಂಗಳೂರು ಜಿಲ್ಲೆಗಳ ಸಾಕ್ಷರತಾ ಚಳವಳಿಯಲ್ಲಿ ಬೀದಿ ನಾಟಕ ನಿರ್ದೇಶಕರಾಗಿ ಜನಜಾಗೃತಿಗೆ ಕಲಾಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿದರು.
ಈ ಸಂದರ್ಭದಲ್ಲಿ ನನಗೆ ನೆನಪಾಗುವುದು ಹಾಸನ ಜಿಲ್ಲೆಯಲ್ಲಿ ನಡೆದ ಬಿಜೆವಿಎಸ್ ಜಾಥಾ. ಕಂದಲಿಯ ಯಗಚಿ ವಿದ್ಯಾಪೀಠದಲ್ಲಿ ನಡೆದ ಹತ್ತು ದಿನಗಳ ಸಂಪನ್ಮೂಲ ವ್ಯಕ್ತಿಗಳ ತರಬೇತಿ ಶಿಬಿರದಲ್ಲಿ ನಾನು ಭಾಗವಹಿಸಿದ್ದೆ. ಆಗ ಗೊರೂರಿನಲ್ಲಿದ್ದ ನಾನು ಅರಕಲಗೂಡು ಜಾಥಾದಲ್ಲಿಯೂ ಭಾಗವಹಿಸಿದ್ದೆ. ಆಗಿನ ಶಾಸಕರಾಗಿದ್ದ ಎ.ಟಿ. ರಾಮಸ್ವಾಮಿ ಅವರು ನಮ್ಮೊಂದಿಗೆ ಇದ್ದರು. ಅಲ್ಲಿನ ಅನುಭವ ಮುಂದೆ ಹಾಸನ ಜಿಲ್ಲೆಯ ಸಾಕ್ಷರತಾ ಆಂದೋಲನದ ‘ಅಕ್ಷರ ಅಭಿಷೇಕ’ ಯೋಜನೆಯಲ್ಲಿ ನಾನು ಪಠ್ಯಪುಸ್ತಕ ರಚನಾ ಸಮಿತಿ ಕಾರ್ಯದರ್ಶಿಯಾಗಿ ಕೆಲಸ ಮಾಡಲು ನೆರವಾಯಿತು.
ವೃತ್ತಿಯಲ್ಲಿ ಟೆಕ್ಸ್ಟೈಲ್ ಡಿಸೈನರ್ ಆಗಿರುವ ಸಿರಿವರ ಅವರು ಹವ್ಯಾಸವಾಗಿ ಆರಂಭಿಸಿದ ನಟನೆ ಮೂಲಕ ಸಮುದಾಯದ ಅಂತರಾಳಕ್ಕೆ ಪ್ರವೇಶಿಸಿದರು. ನಟನಿಗಿಂತಲೂ ಹೆಚ್ಚು ಸಮರ್ಥ ಸಂಘಟಕರಾಗಿ ಬೆಳೆದರು. ಬೆಂಗಳೂರು ಸಮುದಾಯದ ಕಾರ್ಯದರ್ಶಿಯಾಗಿ, ಕರ್ನಾಟಕ ರಾಜ್ಯ ಸಮುದಾಯದ ಜಂಟಿ ಕಾರ್ಯದರ್ಶಿ ಹಾಗೂ ಖಜಾಂಚಿಯಾಗಿ ಸೇವೆ ಸಲ್ಲಿಸಿರುವ ಅವರು, ಪ್ರಸ್ತುತ ಐವತ್ತರ ಸಂಭ್ರಮದಲ್ಲಿರುವ ರಾಜ್ಯ ಸಮುದಾಯದ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೇಂದ್ರ ಸರ್ಕಾರದ ಸಾಂಸ್ಕೃತಿಕ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಸಮಿತಿಯ ಸದಸ್ಯರಾಗಿ ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಬಿ. ಸುರೇಶ್ ಅವರ ‘ಸಾಧನೆ’ ಧಾರಾವಾಹಿಯಿಂದ ಆರಂಭವಾದ ಇವರ ಅಭಿನಯ ಯಾನ, ಈಟಿವಿಯ ಜನಪ್ರಿಯ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಸೇರಿದಂತೆ 48ಕ್ಕೂ ಹೆಚ್ಚು ಧಾರಾವಾಹಿಗಳವರೆಗೆ ಬೆಳೆದಿದೆ. ಇದುವರೆಗೆ 15 ಸಿನಿಮಾಗಳಲ್ಲಿ ನಟಿಸಿರುವ ಅವರು, 26 ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ, ಮೂರು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಗಾಂಧಿ ಜಯಂತಿ
ಇವರ ನಿರ್ದೇಶನದ ‘ಗಾಂಧಿ ಜಯಂತಿ’ ಕನ್ನಡ ಮಕ್ಕಳ ಚಿತ್ರ 2013ರಲ್ಲಿ ಬಿಡುಗಡೆಯಾಯಿತು. ಮಾಸ್ಟರ್ ಧನುಷ್, ಪ್ರವೀಣ್, ಎಚ್.ಆರ್. ದತ್ತಾತ್ರೇಯ ಹಾಗೂ ರವಿಶಂಕರ್ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರದಲ್ಲಿ ಶಿವ ಎಂಬ ಬಾಲಕನಿಗೆ ಗಾಂಧಿ ಜಯಂತಿಯಂದು ಮಹಾತ್ಮ ಗಾಂಧೀಜಿ ಕುರಿತು ಭಾಷಣ ಮಾಡಬೇಕೆಂಬ ಆಸೆ ಇರುತ್ತದೆ. ಆ ಮಗುವಿನ ಕನಸು ಮತ್ತು ಅದಕ್ಕೆ ಗ್ರಾಮ ಪಂಚಾಯಿತಿ ಹಾಗೂ ಪರಿಸ್ಥಿತಿಯಿಂದ ಎದುರಾಗುವ ಅಡಚಣೆಗಳೇ ಚಿತ್ರದ ಕಥಾಹಂದರ.
‘ಕೌದಿ’ ಚಿತ್ರ
ಸಿರಿವರ ಅವರ ನಿರ್ದೇಶನದ ‘ಕೌದಿ’ ಚಿತ್ರ 2016ರಲ್ಲಿ ತೆರೆಕಂಡಿತು. ಬಿ. ಜಯಶ್ರೀ ಹಾಗೂ ಮಾನಸಾ ಜೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಅನಂತ ಶಾಂದ್ರೇಯ ಅವರ ‘ಕೌದಿ’ ಕಾದಂಬರಿಯನ್ನು ಆಧರಿಸಿದೆ.
ಉತ್ತರ ಕರ್ನಾಟಕದ ಗೊಂದಲಿಗ ಸಮುದಾಯದ ಅಂಬವ್ವ ಎಂಬ ಮಹಿಳೆಯ ಬದುಕಿನ ಹೋರಾಟವನ್ನು ಚಿತ್ರ ಒಳಗೊಂಡಿದೆ. ಮಗಳ ಮದುವೆಗೆ ಉಡುಗೊರೆಯಾಗಿ ನೀಡಲು ವಿಶೇಷ ಕೌದಿ ಹೊಲೆಯುತ್ತಿರುವ ಅಂಬವ್ವ, ಕಡುಬಡತನದ ನಡುವೆಯೂ ಅದಕ್ಕೆ ರೇಷ್ಮೆಯ ತುಣುಕುಗಳನ್ನು ಪೋಣಿಸುವ ಕಥಾಹಂದರವನ್ನು ಚಿತ್ರ ಹೊಂದಿದೆ. ಹೂವಿನಹಡಗಲಿ ಸುತ್ತಮುತ್ತಲಿನ ಪರಿಸರವನ್ನು ಚಿತ್ರದಲ್ಲಿ ಸುಂದರವಾಗಿ ಸೆರೆಹಿಡಿಯಲಾಗಿದೆ.
ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಜಯಶ್ರೀ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಹಾಗೂ ಹುಲಿಕುಂಟೆ ಮೂರ್ತಿ ಅವರಿಗೆ ಉತ್ತಮ ಗೀತೆ ರಚನೆಗಾಗಿ ಪ್ರಶಸ್ತಿ ಲಭಿಸಿದೆ.
ಈ ಚಿತ್ರದ ನಿರ್ಮಾಪಕರ ಪೈಕಿ ಒಬ್ಬರಾದ ನನ್ನ ಸೋದರಮಾವ ಶಾಂತಿಗ್ರಾಮದ ಜಿ.ಆರ್. ಮಂಜೇಶ್ ಅವರ ಮುಖಾಂತರ ನನಗೆ ಸಿರಿವರ ಅವರ ಪರಿಚಯವಾಯಿತು. ನಂತರ ಹಾಸನದಲ್ಲಿ ‘ಕೌದಿ’ ಚಿತ್ರ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮವೂ ನಡೆದಿತ್ತು.
ಐಹೊಳೆ ಚಿತ್ರ
ಸಿರಿವರ ಅವರ ನಿರ್ದೇಶನದ ‘ಐಹೊಳೆ’ ಚಿತ್ರ 2022ರಲ್ಲಿ ಬಿಡುಗಡೆಯಾಯಿತು. ಚಾಲುಕ್ಯರ ರಾಜಧಾನಿ ಐಹೊಳೆಯ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ಚಿತ್ರವನ್ನು ಸಂಪೂರ್ಣವಾಗಿ ಐಹೊಳೆಯ ಐತಿಹಾಸಿಕ ತಾಣದಲ್ಲಿಯೇ ಚಿತ್ರೀಕರಿಸಲಾಗಿದೆ.
ಮಕ್ಕಳ ಚಿತ್ರದ ಮೂಲಕ ಐಹೊಳೆಯ ಐತಿಹಾಸಿಕ ಮಹತ್ವವನ್ನು ಸಾರುವ ಪ್ರಯತ್ನವನ್ನು ಚಿತ್ರದಲ್ಲಿ ಮಾಡಲಾಗಿದೆ. ಐಹೊಳೆಯ ಮಹತ್ವದ ಮೂಲಕ ನಾಡಿನ ಸಂಸ್ಕೃತಿ ಮತ್ತು ಇತಿಹಾಸವನ್ನು ಪರಿಚಯಿಸುವ ಈ ಚಿತ್ರ ಪ್ರತಿಷ್ಠಿತ ಅಯೋಧ್ಯೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿ ಪ್ರದರ್ಶನಗೊಂಡಿದೆ.
ವಿವಿಧ ಕ್ಷೇತ್ರಗಳಲ್ಲಿ ಸೇವೆ
ರವೀಂದ್ರನಾಥ ಸಿರಿವರ ಅವರು ದೆಹಲಿಯಲ್ಲಿ ನಡೆದ 2011ರ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಕರ್ನಾಟಕ ತಂಡದ ನಾಯಕತ್ವ ವಹಿಸಿದ್ದರು. ದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿಯೂ ಕರ್ನಾಟಕ ಕಲಾ ತಂಡದ ನಾಯಕತ್ವ ವಹಿಸಿದ್ದರು.
ಭಾರತ ಸರ್ಕಾರದ ಸಾಂಸ್ಕೃತಿಕ ಇಲಾಖೆಯ ಎಸ್ಝಡ್ಸಿಸಿಯಲ್ಲಿ ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಚಲನಚಿತ್ರ ಸಹಾಯಧನ 2018ರ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.
ರಾಜ್ಯ ಸರ್ಕಾರದ ಪ್ರತಿಷ್ಠಿತ ಮೈಸೂರು ದಸರಾ, ಹಂಪಿ ಉತ್ಸವ, ಜಾನಪದ ಜಾತ್ರೆ, ಸುವರ್ಣ ಕರ್ನಾಟಕ ಉತ್ಸವ ಸೇರಿದಂತೆ ಹಲವು ಯೋಜನೆಗಳ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕನ್ನಡ ವಿಭಾಗದ 2019ರ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.
ರಾಜ್ಯ ಘಟಕದ ಸದಸ್ಯರಾಗಿ, ಬೆಂಗಳೂರು ನಗರ ಜಿಲ್ಲಾ ಕೆಎನ್ಪಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ತಮ್ಮದೇ ‘ಸಿರಿವರ ಪ್ರಕಾಶನ’ದ ಮೂಲಕ 320 ಕೃತಿಗಳನ್ನು ಪ್ರಕಟಿಸಿದ್ದಾರೆ.
ಬೆಂಗಳೂರು ಸಮುದಾಯ ಹಾಗೂ ಕರ್ನಾಟಕ ರಾಜ್ಯ ಸಮುದಾಯದ ಪದಾಧಿಕಾರಿಯಾಗಿ, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ, ಬೆಂಗಳೂರಿನ ಕಲಾವಿದರ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
‘ರಂಗ ಸಂವಾದ’ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿ, ‘ಸಮುದಾಯ ವಾರ್ತಾ’ ಮಾಸಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿ ಹಾಗೂ ‘ಶಿಕ್ಷಣ ಶಿಲ್ಪಿ’ ಮಾಸಪತ್ರಿಕೆಯ ಸಹ ಸಂಪಾದಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಅವರು ಕೃಷಿಕರೂ ಹೌದು.
ಕರ್ನಾಟಕ ವೈಭವ 2026ರಲ್ಲಿ ಸನ್ಮಾನ
ರವೀಂದ್ರನಾಥ ಸಿರಿವರ ಅವರ ಕಲಾ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ ‘ಕರ್ನಾಟಕ ವೈಭವ 2026’ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲು ಆಯ್ಕೆ ಮಾಡಲಾಗಿದೆ.
ಹೂವಿನಹಡಗಲಿ ಅಧ್ಯಕ್ಷ ಮಧುನಾಯ್ಕ್ ಲಂಬಾಣಿ ಹಾಗೂ ಚಿಕ್ಕಮಗಳೂರಿನ ಪ್ರಧಾನ ಕಾರ್ಯದರ್ಶಿ ಸಿ.ಆರ್. ವಿಜಯಕುಮಾರ್ ಅವರ ನೇತೃತ್ವದಲ್ಲಿ ಬೆಂಗಳೂರಿನ ಯಶವಂತಪುರ ಜೈನ ದೇವಸ್ಥಾನದ ಸಮೀಪದ ಕೆ.ಎನ್. ವಿಸ್ತರಣೆಯ ಜ್ಯೋತಿ ಪದವಿಪೂರ್ವ ಕಾಲೇಜಿನಲ್ಲಿ ನವೆಂಬರ್ 15ರಂದು ನಡೆಯಲಿರುವ ‘ಕರ್ನಾಟಕ ವೈಭವ 2026’ ಸಮಾರಂಭದಲ್ಲಿ ಈ ಸನ್ಮಾನ ನೆರವೇರಲಿದೆ.
ಕಲೆ, ಸಾಹಿತ್ಯ, ರಂಗಭೂಮಿ, ಸಿನಿಮಾ ಹಾಗೂ ಸಾಮಾಜಿಕ ಸೇವೆಯ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿರುವ ರವೀಂದ್ರನಾಥ ಸಿರಿವರ ಅವರಿಗೆ ಈ ಗೌರವ ಸಂದಿರುವುದು ಅಭಿನಂದನೀಯ. ಅವರಿಗೆ ಹೃತ್ಪೂರ್ವಕ ಶುಭಾಶಯಗಳು.

– ಗೊರೂರು ಅನಂತರಾಜು, ಹಾಸನ
ಮೊ.: 9449462879
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್,
3ನೇ ಕ್ರಾಸ್, ಹಾಸನ–573201.
