ಹಾಸನ: ಸಮಾಜದ ವಟುಗಳಿಗೆ ಶಿವದೀಕ್ಷೆ ಹಾಗೂ ಲಿಂಗಧಾರಣೆ ಮಾಡಿಸುವುದರ ಜೊತೆಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸಿ, ಎಲ್ಲರನ್ನು ಒಗ್ಗಟ್ಟಿನಿಂದ ಕೊಂಡೊಯ್ಯುವ ಮೂಲಕ ಜನಜಾಗೃತಿ ಮೂಡಿಸಬೇಕು ಎಂದು ಕನ್ನಡ ಮಠ ಹಾಗೂ ಬೆಟ್ಟದಪುರ ಮಠದ ಶ್ರೀ ಚನ್ನಬಸವದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದರು.
ಬೆಟ್ಟದಪುರದ ಮಠದ ಸಭಾಂಗಣದಲ್ಲಿ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ 55 ವೀರಶೈವ ವಟುಗಳಿಗೆ ಲಿಂಗಧಾರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಬಳಿಕ ಮಾತನಾಡಿದ ಶ್ರೀಗಳು, ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ಇದುವರೆಗೆ ಸುಮಾರು 98 ಸಾವಿರ ವಟುಗಳಿಗೆ ಲಿಂಗಧಾರಣೆ ಮಾಡಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಹಾಗೂ ತಮಿಳುನಾಡು ಸೇರಿದಂತೆ ವಿವಿಧೆಡೆ ಸುಮಾರು 98 ಸಾವಿರಕ್ಕೂ ಅಧಿಕ ಮಂದಿ ಶಿವದೀಕ್ಷೆ ಹಾಗೂ ಲಿಂಗಧಾರಣೆ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿಯೂ ಶಿವದೀಕ್ಷೆ, ಜನಜಾಗೃತಿ ಹಾಗೂ ಸಮಾಜ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ಶ್ರೀ ಸೋಮಶೇಖರ್, ವಿಶ್ವ ವೀರಶೈವ ಮಹಾ ವೇದಿಕೆಯ ನೂತನ ರಾಜ್ಯಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಉಪಾಧ್ಯಕ್ಷ ಪಂಚಾಕ್ಷರಿ, ಹರಳಹಳ್ಳಿ ವೇ. ಶ್ರೀಕಂಠರಾಧ್ಯರು, ಪುರೋಹಿತ ಸುಳೆಕೋಟೆ ಕುಮಾರಸ್ವಾಮಿ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೂರಗಲ್ಲು ಕುಮಾರಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಕುಮಾರಸ್ವಾಮಿ ಎಂ.ಎನ್.
