ಬೆಟ್ಟದಪುರ: ವೀರಶೈವ ಸಮಾಜವು ಕಾಯಕ, ದಾಸೋಹ ಹಾಗೂ ಶಿಕ್ಷಣದ ಮೂಲಕ ಜಗತ್ತಿಗೆ ಸೇವೆ ಸಲ್ಲಿಸಿದ ಕೀರ್ತಿಗೆ ಪಾತ್ರವಾಗಿದೆ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವ ವಿಜಯಾನಂದ ಕಾಶಪ್ಪನವರ್ ಹೇಳಿದರು.
ಬೆಟ್ಟದಪುರದ ಶ್ರೀ ಸಲೀಲಾಖ್ಯ ಮತ್ತು ಕನ್ನಡ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಮೈಸೂರು–ಚಾಮರಾಜನಗರ ಜಿಲ್ಲಾ ವೀರಶೈವ ಲಿಂಗಾಯತ ಮಠಾಧಿಪತಿಗಳ ಗೋಷ್ಠಿ, ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 111ನೇ ಜಯಂತಿ, ದೀಕ್ಷಾ ಸಂಸ್ಕಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೂಜ್ಯರ ಆಶೀರ್ವಾದದಿಂದ ಸಚಿವನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ವೀರಶೈವ ಸಮಾಜವು ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಮತ್ತಷ್ಟು ಪ್ರಗತಿ ಸಾಧಿಸಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಸಾಗಬೇಕು ಎಂದು ಕರೆ ನೀಡಿದರು.
ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಸ್ವಾವಲಂಬಿಯಾಗಿ ಬದುಕಲು ಶಿಕ್ಷಣ ಪ್ರಮುಖ ಸಾಧನವಾಗಿದೆ. ಶಿಕ್ಷಣದಿಂದ ವ್ಯಕ್ತಿ ತನ್ನ ಬದುಕನ್ನು ಸ್ವತಂತ್ರವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುವುದರಿಂದ ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ ದೊರೆಯುವಂತೆ ಸಮಾಜ ಕಾರ್ಯನಿರ್ವಹಿಸಬೇಕು ಎಂದರು.
ಶಾಸಕ ಕೆ. ವೆಂಕಟೇಶ್ ಮಾತನಾಡಿ, ಸುತ್ತೂರು ಮಠವು ಜಾತಿ, ಜನಾಂಗದ ಭೇದವಿಲ್ಲದೆ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದೆ. ವಿಶೇಷವಾಗಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಇಂತಹ ಸೇವಾ ಕಾರ್ಯಗಳಿಗೆ ಸಮಾಜದ ಸಹಕಾರ ಅಗತ್ಯವಾಗಿದ್ದು, ಮುಂದಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ತಮ್ಮ ವತಿಯಿಂದ ₹5 ಲಕ್ಷ ದತ್ತಿ ನೀಡುವುದಾಗಿ ಘೋಷಿಸಿದರು. ದತ್ತಿ ಮೊತ್ತವನ್ನು ತಮ್ಮ ಮಗನ ಕೈಯಿಂದಲೇ ನೀಡಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಇದೇ ವೇಳೆ ವಿವಿಧ ಮಠಾಧಿಪತಿಗಳು, ದೀಪ್ತಿ ಡೆವಲಪರ್ಸ್ ಮುಖ್ಯಸ್ಥ ಎ.ಎಸ್. ಜಗದೀಶ್ ಅವರ ಕುಟುಂಬಸ್ಥರು ಹಾಗೂ ಗಣ್ಯರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಾಟಾಳ್ ಸೂರ್ಯ ಸಿಂಹಾಸನ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕನ್ನಡ ಮಠದ ಶ್ರೀ ಚನ್ನಬಸವದೇಶಿಕೇಂದ್ರ ಸ್ವಾಮೀಜಿ, ಗುಂಡ್ಲುಪೇಟೆ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್, ಮಾಜಿ ಶಾಸಕ ಎಚ್.ಸಿ. ಬಸವರಾಜು, ಗಾವಡಗೆರೆ ಶ್ರೀ ನಟರಾಜ ಸ್ವಾಮೀಜಿ, ತಾಲೂಕು ಗ್ಯಾರಂಟಿ ಅನುಷ್ಠಾನ ಮತ್ತು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ದೀಪ್ತಿ ಡೆವಲಪರ್ಸ್ ಮುಖ್ಯಸ್ಥ ಎ.ಎಸ್. ಜಗದೀಶ್, ಕೊಡಗು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಎಚ್.ಪಿ. ಶಿವಪ್ಪ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಪರಮೇಶ್, ಯುವ ಘಟಕದ ಅಧ್ಯಕ್ಷ ಅಭಿ ಕಿರಂಗೂರು, ನಿಕಟಪೂರ್ವ ಅಧ್ಯಕ್ಷ ಮಂಜು, ಮಹಿಳಾ ಘಟಕದ ಅಧ್ಯಕ್ಷೆ ಶೀಲ್ಪ, ಬೆಟ್ಟದಪುರ ಸಮಾಜದ ಅಧ್ಯಕ್ಷ ಟಿ.ಸಿ. ಶಿವುದೇವ್ ಸೇರಿದಂತೆ ವಿವಿಧ ಮಠಾಧಿಪತಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
– ಕುಮಾರಸ್ವಾಮಿ ಎಂ.ಎನ್.
