ಚನ್ನರಾಯಪಟ್ಟಣ: ಪಟ್ಟಣದ ಗಾಂಧಿ ಸರ್ಕಲ್ ಬಳಿ ಇರುವ ಪ್ರಸಿದ್ಧ ಶ್ರೀ ರಾಯರ ರಂಗಮಂದಿರಕ್ಕೆ ಇಂದು (ಗುರುವಾರ) ಯುವ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಸಾಂಪ್ರದಾಯಿಕವಾಗಿ ಭೇಟಿ ನೀಡಿ, ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ವಿಶೇಷ ಪೂಜೆ ಹಾಗೂ ಸೇವೆಯನ್ನು ಸಲ್ಲಿಸಿದರು.
ರಂಗಮಂದಿರಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಅವರಿಗೆ ಸ್ಥಳೀಯ ಶಾಸಕರಾದ ಸಿ.ಎನ್. ಬಾಲಕೃಷ್ಣ ಅವರು ಸಾಥ್ ನೀಡಿದರು. ಪೂಜಾ ಸಮಯದಲ್ಲಿ, ಹಿಂದೆ ಮಂತ್ರಾಲಯ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಭೇಟಿ ನೀಡಿ ಸಂಸ್ಥಾನದ ದಿವ್ಯ ಮೂಲರಾಮದೇವರನ್ನು ಪೂಜಿಸಿದ್ದಂತಹ ಪವಿತ್ರ ಸ್ಥಳದಲ್ಲಿ ಗಣ್ಯರು ಶ್ರದ್ಧಾ-ಭಕ್ತಿಯಿಂದ ನಮಸ್ಕರಿಸಿ ವಿಶೇಷ ಪೂಜೆ ನೆರವೇರಿಸಿದರು.

ರಾಯರ ಅನುಗ್ರಹ ಹಾಗೂ ರಂಗಮಂದಿರದ ಮಹತ್ವ:
ಮಂತ್ರಾಲಯ ಶ್ರೀಗಳವರ ಕೃಪಾಶೀರ್ವಾದ ಹಾಗೂ ಶ್ರೀ ರಾಯರ ದಿವ್ಯ ಅನುಗ್ರಹದಿಂದ ಚನ್ನರಾಯಪಟ್ಟಣದ ಈ ರಾಯರ ರಂಗಮಂದಿರವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ನಿರಂತರ ಅನ್ನದಾನಾದಿ ಸೇವಾ ಕಾರ್ಯಗಳ ಮೂಲಕ ಪಟ್ಟಣದ ಜನತೆಗೆ ದೈವಿಕ ಶಕ್ತಿ ಮತ್ತು ಅಧ್ಯಾತ್ಮಿಕ ತೃಪ್ತಿಯನ್ನು ನೀಡುವ ಪವಿತ್ರ ಕೇಂದ್ರವಾಗಿ ಬೆಳಗುತ್ತಿದೆ.
ಪೂಜೆಯ ನಂತರ ಅರ್ಚಕರು ನಿಖಿಲ್ ಕುಮಾರಸ್ವಾಮಿ ಹಾಗೂ ಶಾಸಕ ಸಿ.ಎನ್. ಬಾಲಕೃಷ್ಣ ಅವರಿಗೆ ರಾಯರ ಮಂತ್ರಾಕ್ಷತೆ ಮತ್ತು ಶೇಷವಸ್ತ್ರಗಳನ್ನು ನೀಡಿ ಆಶೀರ್ವದಿಸಿದರು. ತದನಂತರ ರಂಗಮಂದಿರದ ಆಡಳಿತ ಮಂಡಳಿಯಿಂದ ಇಬ್ಬರೂ ನಾಯಕರಿಗೆ ಶಾಲಾ-ಮಾಲೆ ತೊಡಿಸಿ ಗೌರವ-ಅಭಿನಂದನೆಗಳನ್ನು ಸಲ್ಲಿಸಲಾಯಿತು. ಬಳಿಕ ಗಣ್ಯರು ರಾಯರ ಪ್ರಸಾದವನ್ನು ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ರಂಗಮಂದಿರದ ಮುಖ್ಯಸ್ಥರಾದ ಎಂ ಕೆ ಪ್ರಕಾಶ್ ಭಾರದ್ವಾಜ್, ಶ್ರೀಮತಿ ಕೆ ಆರ್ ಅನಿತಾ ಪ್ರಕಾಶ್, ಲಿಮ್ಕಾ ದಾಖಲೆಯ ಕಲಾವಿದ ಸಿ ಎಂ ರವೀಂದ್ರ, ರವೀಂದ್ರ ಆರ್ಟ್ಸ್,ಸೇರಿದಂತೆ ರಾಯರ ಭಕ್ತಾದಿಗಳು ಹಾಗೂ ಜೆಡಿಎಸ್ ಪಕ್ಷದ ಮುಖಂಡರುಗಳು ಹಾಜರಿದ್ದರು.
– ಮಂಜುನಾಥ್ ಐ.ಕೆ.
