ಕೆ.ಆರ್.ಪೇಟೆ,ಅ.08: ತಾಲ್ಲೂಕಿನ ಶೀಳನೆರೆ ಹೋಬಳಿಯ ತೆಂಡೇಕೆರೆ ಗ್ರಾಮ ಪಂಚಾಯಿತಿಯಲ್ಲಿ ಪ್ರಭಾರಿ ಪಿಡಿಓ ಆಗಿದ್ದ ಕಾರ್ಯದರ್ಶಿ ಕುಮಾರ್ ಅವರು ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳಿಗೆ ಸಾಮಾಜಿಕ ಹೋರಾಟಗಾರ ತೆಂಡೇಕೆರೆ ರಾಮಸ್ವಾಮಿ ದೂರು ನೀಡಿದ್ದಾರೆ.
ಸದರಿ ದೂರು ಪ್ರತಿ ಹಾಗೂ ಲೋಕಾಯುಕ್ತ ಎಫ್.ಐ.ಆರ್ ದಾಖಲೆಗಳನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿ ಮಾತನಾಡಿ ದಾಖಲಾತಿ ಸಮೇತ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಕಟ್ಟಡ ಪರವಾನಿಗೆಗೆ ಅಕ್ರಮ ವಸೂಲಿ: ಕಚೇರಿ ಕೆಲಸಕ್ಕೆ ಯಾರೂ ಸರಿಯಾಗಿ ಬರುವುದಿಲ್ಲ. ಕಟ್ಟಡ ಪರವಾನಿಗೆಗೆ 1 ಲಕ್ಷಕ್ಕಿಂತ ಹೆಚ್ಚು ಶುಲ್ಕ ಎಂದು ಹೇಳಿ 50 ಸಾವಿರ ರೂಪಾಯಿ ಅಕ್ರಮವಾಗಿ ವಸೂಲಿ ಮಾಡಲಾಗಿದೆ. *ಸಭಾಂಗಣ ನವೀಕರಣದಲ್ಲಿ ಅವ್ಯವಹಾರ*: ಗ್ರಾಮ ಪಂಚಾಯಿತಿ ಕಚೇರಿಯ ಸಭಾಂಗಣ ನವೀಕರಣಕ್ಕೆ ರೂ. 4,97,108/- ಖರ್ಚು ಮಾಡಲಾಗಿದೆ ಎಂದು ದಾಖಲೆ ತೋರಿಸಿದ್ದಾರೆ. ಆದರೆ ಸ್ಥಳದಲ್ಲಿ ಗುಣಮಟ್ಟ ಕಾಮಗಾರಿ ನಡೆದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ 15ನೇ ಹಣಕಾಸು ಯೋಜನೆಯಡಿ ತೇರು ಮಂದಿರದಲ್ಲಿ ಟೈಲ್ಸ್ ಅಳವಡಿಕೆಗೆ ರೂ. 1,26,109/- ಖರ್ಚು ತೋರಿಸಲಾಗಿದೆ.
ಸ್ವೀಟ್ ಬಾಕ್ಸ್ ಹಂಚಿಕೆ: ಗ್ರಾಮ ಪಂಚಾಯಿತಿ ಸದಸ್ಯರಿಗೆ ರೂ. 17,100/- ವೆಚ್ಚದಲ್ಲಿ ಸ್ವೀಟ್ ಬಾಕ್ಸ್ ನೀಡಲಾಗಿದೆ ಎಂದು ಬಿಲ್ ಮಾಡಲಾಗಿದೆ.
*ಅಧ್ಯಕ್ಷರ ಪತಿಗೆ ಹಣ ವರ್ಗಾವಣೆ*: ಇದು ಅತ್ಯಂತ ಗಂಭೀರ ಆರೋಪ. ಪರಿಶಿಷ್ಟ ಜಾತಿ/ಪಂಗಡದ (SಅP/ಖಿSP) ಅನುದಾನವನ್ನು ಸಭೆ-ಸಮಾರಂಭಗಳಿಗೆ ಬಳಸುವಂತಿಲ್ಲ ಎಂಬ ಸರ್ಕಾರದ ಸ್ಪಷ್ಟ ಆದೇಶವಿದೆ. ಆದರೂ ಪ್ರಭಾರಿ ಪಿಡಿಓ ಕುಮಾರ್ ಎಸ್.ಸಿ.ಪಿ/ಟಿ.ಎಸ್.ಪಿ ಮೀಸಲು ಅನುಧಾನವನ್ನು ಗ್ರಾಮ ಪಂಚಾಯಿತಿ ಸಭಾಂಗಣ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ದುರುಪಯೋಗ ಪಡಿಸಿಕೊಂಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಇಂದ್ರೇಶ್ ಅವರ ಪತಿ ಇಂದ್ರೇಶ್ ಅವರ ಹೆಸರಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ದಾಖಲೆ ಸಮೇತ ದೂರು ನೀಡಲಾಗಿದೆ. *ಉದ್ಘಾಟನೆಗೆ 60 ಸಾವಿರ ಖರ್ಚು*: ಗ್ರಾಮ ಪಂಚಾಯಿತಿ ಮೇಲ್ಛಾವಣಿ ಸಭಾಂಗಣ ಉದ್ಘಾಟನಾ ಸಮಾರಂಭಕ್ಕೆ ಊಟ, ತಿಂಡಿ, ಹೂ ಹಾರ, ಸ್ವೀಟ್ ಖಾರ ಎಂದು ರೂ. 60,000/- ಸಾರ್ವಜನಿಕರ ಹಣವನ್ನು ಮನಸೋ ಇಚ್ಛೆ ಖರ್ಚು ಮಾಡಲಾಗಿದೆ ಎಂದು ದೂರಿದ್ದಾರೆ.
ಮೋಟಾರ್ ಖರೀದಿ, ನೀರು ಸರಬರಾಜು, ಬಸ್ ಖರೀದಿ ಹೆಸರಿನಲ್ಲಿ ಯಾವುದೇ ಕೆಲಸ ಮಾಡದೇ ಬಿಲ್ ಮಾಡಿ, ತಮ್ಮದೇ ಹೆಸರಿಗೆ ಚೆಕ್ ಬರೆದುಕೊಂಡು ಹಣ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಎಲ್ಲಾ ಅವ್ಯವಹಾರಗಳ ಬಗ್ಗೆ ಕೂಡಲೇ ಸಮಗ್ರ ತನಿಖೆ ನಡೆಸಿ, ಪಿಡಿಓ ಕುಮಾರ್ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಾರ್ವಜನಿಕರ ಹಣವನ್ನು ತಪ್ಪಿತಸ್ಥ ಪ್ರಭಾರಿ ಪಿಡಿಓ ಕುಮಾರ್ ಅವರಿಂದ ವಸೂಲಿ ಮಾಡಬೇಕು ಎಂದು ರಾಮಸ್ವಾಮಿ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿ ಮನವಿ ಮಾಡಿದ್ದಾರೆ.
– ಶ್ರೀನಿವಾಸ್ ಆರ್.
