ಕೆ.ಆರ್.ಪೇಟೆ,ಅ.08: ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟç. ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ಹಕ್ಕು ನೀಡಿದೆ. ಇಂದಿನ ಯುವ ಪೀಳಿಗೆ ಕೇವಲ ಅಂಕಗಳಿಗಷ್ಟೇ ಸೀಮಿತವಾಗದೆ, ದೇಶದ ಸಂಸದೀಯ ವ್ಯವಸ್ಥೆ, ಕಾನೂನು, ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ಯುವ ಸಂಸತ್ತು ಇಂತಹ ಜಾಗೃತಿ ಮೂಡಿಸುವ ಅತ್ಯುತ್ತಮ ವೇದಿಕೆಯಾಗಿದೆ ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.

ಕೆ.ಆರ್.ಪೇಟೆ ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್. ಎಸ್.ಎಂ.ಲಿಂಗಪ್ಪ ಸಭಾಂಗಣದಲ್ಲಿ 2026ರ ಅಂತಾರಾಷ್ಟ್ರೀಯ ಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಕರ್ನಾಟಕ ಸರ್ಕಾರದ ಆದೇಶದಂತೆ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ವಕೀಲರ ಸಂಘ ಮತ್ತು ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕು ಮಟ್ಟದ ಯುವ ಸಂಸತ್ತು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಯುವ ಸಂಸತ್ ನಂತಹ ಕಾರ್ಯಕ್ರಮಗಳು ಭವಿಷ್ಯದಲ್ಲಿ ಉತ್ತಮ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಜವಾಬ್ದಾರಿಯುತ ನಾಗರಿಕರನ್ನು ರೂಪಿಸಲು ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದನ್ನು ಕಲಿಯುತ್ತಾರೆ. ಇತರರ ಮಾತುಗಳನ್ನು ಗೌರವದಿಂದ ಆಲಿಸುವ ಗುಣವನ್ನು ಬೆಳೆಸಿಕೊಳ್ಳುತ್ತಾರೆ. ಯುವ ಸಂಸತ್ ಕೇವಲ ಒಂದು ಕಾರ್ಯಕ್ರಮವಲ್ಲ. ಅದು ಭವಿಷ್ಯದ ನಾಯಕರನ್ನು ರೂಪಿಸುವ ಪ್ರಜಾಪ್ರಭುತ್ವದ ತರಬೇತಿ ಕೇಂದ್ರವಾಗಿದೆ. ದೇಶದ ಅಭಿವೃದ್ಧಿಗೆ ಉತ್ತಮ ನಾಯಕತ್ವ, ಪ್ರಾಮಾಣಿಕತೆ, ಶಿಸ್ತು ಹಾಗೂ ಜನಸೇವೆಯ ಮನೋಭಾವ ಅತ್ಯಗತ್ಯವಾಗಿದೆ.ಯುವಕರು ಸಂವಿಧಾನದ ಆಶಯಗಳನ್ನು ಅರ್ಥಮಾಡಿಕೊಂಡು, ದೇಶದ ಏಕತೆ, ಸಮಗ್ರತೆ ಹಾಗೂ ಅಭಿವೃದ್ಧಿಗಾಗಿ ಶ್ರಮಿಸಬೇಕು.

ಇಂದಿನ ಯುವ ಸಂಸತ್ತಿನ ವಿದ್ಯಾರ್ಥಿಗಳೇ ನಾಳಿನ ಸಂಸತ್ತಿನ ಸಮರ್ಥ ಜನಪ್ರತಿನಿಧಿಗಳು. ಯುವಶಕ್ತಿ ದೇಶದ ಶಕ್ತಿ, ಯುವಜನತೆಯ ಪ್ರಗತಿಯೇ ರಾಷ್ಟ್ರದ ಪ್ರಗತಿಯಾಗಿದೆ ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಯುವಕರಲ್ಲಿ ಪ್ರಜಾಪ್ರಭುತ್ವದ ಚಲನಶೀಲತೆಯನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾದುದು.

ನಮ್ಮ ತಾಲ್ಲೂಕಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲೂ ಉತ್ತಮವಾಗಿ ಚರ್ಚಿಸಿ ತಾಲ್ಲೂಕಿಗೆ ಕೀರ್ತಿ ತರಬೇಕು” ಎಂದು ಶಾಸಕ ಹೆಚ್.ಟಿ.ಮಂಜು ಕರೆ ನೀಡಿದರು.
ತಾಲ್ಲೂಕಿನ ವಿವಿಧ ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಪದವಿ ಕಾಲೇಜುಗಳು, ತಾಂತ್ರಿಕ ಹಾಗೂ ಸ್ನಾತಕೋತ್ತರ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಈ ಯುವ ಸಂಸತ್ತಿನಲ್ಲಿ ಪಾಲ್ಗೊಂಡು, ಸಂಸತ್ತಿನ ಕಲಾಪಗಳ ಮಾದರಿಯಲ್ಲಿ ಪ್ರಶ್ನೋತ್ತರ, ಚರ್ಚೆಗಳಲ್ಲಿ ಭಾಗವಹಿಸಿ ಗಮನ ಸೆಳೆದರು.
ತಹಶೀಲ್ದಾರ್ ಹಾಗೂ ಯುವ ಸಂಸತ್ತು ಸಮಿತಿ ಸಂಚಾಲಕರಾದ ಜೆ.ಎಸ್. ಶ್ರೇಯಸ್, ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿ ಕೆ.ಸುಷ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಮಿತಿ ಕಾರ್ಯದರ್ಶಿ ವೈ.ಕೆ. ತಿಮ್ಮೇಗೌಡ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಎಂ. ಅಶೋಕ್ಕುಮಾರ್, ಪ್ರೊ.ಎಂ.ಶಿವಸ್ವಾಮಿ, ಶಿಕ್ಷಣ ಸಂಯೋಜಕ ವೀರಭದ್ರಯ್ಯ, ಕೀರ್ತಿಕುಮಾರ್, ಪರಮೇಶ್, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿದ್ದ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಗೆ ಹಾಗೂ ಯುವ ಸಂಸತ್ ಸಭೆಯಲ್ಲಿ ಬರ ನಿರ್ವಹಣೆ ಸೇರಿದಂತೆ ವಿವಿಧ ಚರ್ಚೆ ನಡೆಸಿ ಗಮನ ಸೆಳೆದ ಅಣಕು ಜನಪ್ರತಿನಿಧಿಗಳಿಗೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
– ಶ್ರೀನಿವಾಸ್ ಆರ್.
